×
Ad

ʼಮಸೀದಿಗಳಲ್ಲಿ ಗೋವಧೆ ತಡೆ ಜಾಗೃತಿ ಮಾಹಿತಿʼ ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ಕೃತ್ಯ: ಅಶ್ರಫ್ ಕಲ್ಲೇಗ

Update: 2025-11-10 23:35 IST

ಪುತ್ತೂರು: ಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆಯ ಬಗ್ಗೆ ಪೊಲೀಸರು ಮಸೀದಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು ಅಸಂವಿಧಾನಿಕ ಮತ್ತು ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ಕೃತ್ಯವಾಗಿದ್ದು, ಅಂತಹ ಪೊಲೀಸ್ ಸಿಬ್ಬಂದಿಗಳು ಮತ್ತು ಅವರಿಗೆ ನಿರ್ದೇಶನ ನೀಡಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆಗ್ರಹಿಸಿದ್ದಾರೆ.

ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಸುಳ್ಯ ತಾಲೂಕಿನ ಕೆಲವು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದಿರುವ ಜನರನ್ನು ನಿಲ್ಲಿಸಿ ಪೊಲೀಸರು ಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘಿಸಿದಲ್ಲಿ ಮನೆಯನ್ನು ಜಪ್ತಿ ಮಾಡಲಾಗುವುದು ಎಂದು ಬೆದರಿಸಿದ್ದಾರೆ. ಇದರಿಂದ ಮುಸ್ಲಿಮರು ಮಾತ್ರ ಈ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ. ಇದು ಒಂದು ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ಕೃತ್ಯವಾಗಿದೆ. ಈ ಹಿಂದೆ ಹಲವು ಮಂದಿ ಇತರ ಸಮುದಾಯದವರ ಮೇಲೂ ಗೋಕಳ್ಳತನ, ದನ ಸಾಗಾಟದ ಕೇಸ್ ದಾಖಲಾಗಿದೆ. ಆದರೆ ಮುಸ್ಲಿಂ ಸಮುದಾಯದ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ನಡೆಸುತ್ತಿರುವುದ ಈ ಸಮುದಾಯವನ್ನು ಕ್ರಿಮಿನಲ್‌ಗಳು ಎಂದು ಘೋಷಿಸುವ ಹುನ್ನಾರದಂತೆ ಕಾಣಿಸುತ್ತಿದೆ ಎಂದು ಹೇಳಿದರು.

ಧಾರ್ಮಿಕ ಸ್ಥಳದ ಒಳಗೆ ವಿಶೇಷವಾಗಿ ಗೋಹತ್ಯೆ ಅಂತಹ ಸೂಕ್ಷ್ಮ ವಿಷಯಗಳ ಮೇಲೆ ಅಪರಾಧ ಜಾಗೃತಿ ಕಾರ್ಯಕ್ರಮ ನಡೆಸುವುದು ಸಂವಿಧಾನ ಘೋಷಿಸಿರುವ ರಾಜ್ಯದ ತಟಸ್ಥತೆಯನ್ನು ಉಲ್ಲಂಘಿಸುತ್ತದೆ. ಧಾರ್ಮಿಕ ಕಾಯ್ದೆಯೊಂದರ ಕುರಿತು ಅನಧಿಕೃತ ಜಾಗೃತಿ ಅಭಿಯಾನ ನಡೆಸುವುದು, ಕಾಯ್ದೆಯನ್ನು ಒಂದು ಸಮುದಾಯಕ್ಕೆ ಮಾತ್ರ ಮೀಸಲು ಮಾಡಿ ಆರೋಪಿಸುವುದು ಅಧಿಕಾರದ ದುರುಪಯೋಗ ಮತ್ತು ಕಾನೂನಿನ ಉಲ್ಲಂಘನೆಯಾಗಿದೆ. ಪೊಲೀಸರು ಇಂತಹ ಜಾಗೃತಿ ಕಾರ್ಯಕ್ರಮವನ್ನು ನಡೆಸುವುದಿದ್ದರೂ ಅದನ್ನು ಎಲ್ಲಾ ಜಾತಿ, ಸಮುದಾಯ, ಮಹಿಳೆ ಮತ್ತು ಪುರಷರು ಸೇರಬಹುದಾದ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬೇಕು. ಪೊಲೀಸರ ಈ ಎಚ್ಚರಿಕೆ ಜಾಗೃತಿ ಕಾರ್ಯಕ್ರಮವು ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ಧಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಉಪಾಧ್ಯಕ್ಷ ಮೂಸೆ ಕರೀಂ ಮಾಣಿ, ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಕಾರ್ಯದರ್ಶಿಗಳಾದ ಬಶೀರ್ ಪರ್ಲಡ್ಕ, ರಶೀದ್ ಮುರ, ಕಾನೂನು ಸಲಹೆಗಾರ ಶಾಕಿರ್ ಹಾಜಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News