×
Ad

ಬಂಟ್ವಾಳ| ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಅಡ್ಡಿ ಆರೋಪ; ಸ್ಕೂಟರ್ ಸವಾರನ ವಿರುದ್ಧ ಪ್ರಕರಣ ದಾಖಲು

Update: 2025-10-30 23:01 IST

ಬಂಟ್ವಾಳ : ಅಪಘಾತದ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸ್ಕೂಟರ್ ಸವಾರ ಅಡ್ಡಿಪಡಿಸಿದ ಘಟನೆ ಬಿ.ಸಿ. ರೋಡಿನಲ್ಲಿ ಅ.30 ರಂದು ನಡೆದಿದ್ದು, ಈ ಬಗ್ಗೆ ಸ್ಕೂಟರ್ ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬ್ಯುಲೆನ್ಸಿಗೆ ಅಡ್ಡಿಪಡಿಸಿ ಆರೋಪಿ ಸ್ಕೂಟರ್ ಸವಾರನನ್ನು ಪುತ್ತೂರು ತಾಲೂಕು ಬೆಟ್ಟಂಪಾಡಿ ನಿವಾಸಿ  ಮನ್ಸೂರ್ (38) ಎಂದು ಗುರುತಿಸಲಾಗಿದೆ. ಗುರುವಾರ ಬಿಸಿಲೆ ಘಾಟ್ ನಲ್ಲಿ ನಡೆದ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನ ಸವಾರ ಅಂಬ್ಯುಲೆನ್ಸ್ ಸೈರನ್ ಶಬ್ದ ಕೇಳಿಯೂ ದಾರಿ ಬಿಟ್ಟು ಕೊಡದೆ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾನೆ ಎಂದು ದೂರಲಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆರೋಪಿ ಸ್ಕೂಟರ್ ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸ್ಕೂಟರ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News