ಧರ್ಮಸ್ಥಳ ಪ್ರಕರಣ | ಸಾಕ್ಷಿದಾರನ ಇರುವಿಕೆ ಬಗ್ಗೆ ಮಾಹಿತಿ ಲಭ್ಯವಿಲ್ಲದಾಗ ಸಾಕ್ಷ್ಯ ರಕ್ಷಣೆ ಅಸಾಧ್ಯ: ಪೊಲೀಸ್
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತಿಟ್ಟಿರುವುದಾಗಿ ದೂರು ನೀಡಿದ್ದ ವ್ಯಕ್ತಿ ಜು.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾನೆ.(ಫೈಲ್ ಫೋಟೋ)
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಿರುವ ಕುರಿತು ವ್ಯಕ್ತಿಯೋರ್ವ ಸಲ್ಲಿಸಿರುವ ದೂರಿನ ಕುರಿತು ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಸಾಕ್ಷಿದಾರನ ವಕೀಲರು ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿಲ್ಲ. ಆದ್ದರಿಂದ ಸಾಕ್ಷಿದಾರನಿಗೆ ಸಾಕ್ಷಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಕ್ಷಿಯ ರಕ್ಷಣೆಗೆ ಸಂಬಂಧಿಸಿದಂತೆ ನಿಯಮ 7ರ ಅಡಿಯಲ್ಲಿ ಸಾಕ್ಷಿ ದಾರನ ಒಪ್ಪಿಗೆ ಮತ್ತು ಸಹಕಾರವಿದ್ದಲ್ಲಿ ಮಾತ್ರ ತೆಗೆದುಕೊಳ್ಳಬಹುದಾದ ಹಲವು ಕ್ರಮಗಳಿವೆ. ಈ ಬಗ್ಗೆ ಜು.10ರಂದು ಸಾಕ್ಷಿದಾರರ ಪರ ವಕೀಲರಿಗೆ ಇ-ಮೇಲ್ ಮೂಲಕ ತಿಳಿಸಲಾಗಿದೆ. ಆದರೆ ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿರುವುದಿಲ್ಲ. ಪ್ರಕರಣದ ಬಗ್ಗೆ ವಕೀಲರೊಂದಿಗೆ ಎಲ್ಲ ಸಂವಹನಗಳು ಇ-ಮೇಲ್ ಮೂಲಕ ನಡೆಯುತ್ತಿದೆ. ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲದಾಗ ಸಾಕ್ಷಿ ದಾರನಿಗೆ ಸಾಕ್ಷಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೆ ಪೊಲೀಸ್ ಉಪಾಧೀಕಕ್ಷಕರು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಸಾಕ್ಷಿಯ ಗುರುತು ರಕ್ಷಣೆಗಾಗಿ ಮನವಿ ಸಲ್ಲಿಸಲಾಗಿದ್ದ ಸಂದರ್ಭದಲ್ಲಿ ಸಾಕ್ಷಿದಾರನ ಪರವಾದ ವಕೀಲರು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟನೆ ಹಾಗೂ ಇತರ ಸಂವಹನ ನಡೆಸುವಾಗ ಹಲವು ಮಾಹಿತಿಗಳು ಹಂಚಿಕೊಂಡಿದ್ದಾರೆ. ಈ ಬಗ್ಗೆ ವಕೀಲರನ್ನು ವಿಚಾರಣೆ ನಡೆಸಲಾಗಿದೆ. ಸಾಕ್ಷಿ ದೂರುದಾರರ ಕೋರಿಕೆಯ ಮೇರೆಗೆ ಈ ಮಾಹಿತಿಗಳನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡಿರುವುದಾಗಿ ವಕೀಲರು ಪ್ರತ್ಯುತ್ತರ ನೀಡಿದ್ದಾರೆ. ಆದರೆ ಪತ್ರಿಕಾ ಪ್ರಕಟನೆ ಹಾಗೂ ಇತರ ಸಂವಹನಗಳ ಮೂಲಕ ನೀಡಿರುವ ಮಾಹಿತಿಗಳ ಕಾರಣ ಸಾಕ್ಷಿ ಗುರುತಿನ ರಕ್ಷಣೆ ಸಾಧ್ಯವಾಗಿಲ್ಲ. ಈ ಬಗ್ಗೆ ಅರ್ಜಿಯ ಹೆಚ್ಚಿನ ವಿಚಾರಣೆ ಬಾಕಿಯಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ತನಗೆ ಜೀವಬೆದರಿಕೆ ಒಡ್ಡಿ, ಈ ಅಪರಾದ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಇದೀಗ ಪಾಪಪ್ರಜ್ಞೆ ಕಾಡುತ್ತಿದೆ. ಆದ್ದರಿಂದ ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಮಾಹಿತಿ ನೀಡುತ್ತೇನೆ. ತಾನು ಮೃತದೇಹಗಳನ್ನು ವಿಲೇವಾರಿ ಮಾಡಿರುವ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದ’ ಎಂದು ವ್ಯಕ್ತಿಯೋರ್ವ ಜು.3ರಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಸಾಕ್ಷಿ ದೂರುದಾರ ಜು.11ರಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ವಕೀಲರೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾನೆ.
ಬೆಳ್ತಂಗಡಿ ನ್ಯಾಯಾಲಯ ದೂರುದಾರರ ಹೇಳಿಕೆಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 183ರ ಅಡಿಯಲ್ಲಿ ದಾಖಲಿಸಿಕೊಂಡಿದೆ.