×
Ad

"ಸುಹಾಸ್‌ ಅನ್ನು ನೀವು ಕೊಂದಿದ್ದೀರಲ್ಲ, ಬ್ಯಾರಿಗಳನ್ನು ಸುಮ್ಮನೆ ಬಿಡುವುದಿಲ್ಲ": ಹಲ್ಲೆಗೊಳಗಾದ ಕಲಂದರ್ ಶಾಫಿ ಘಟನೆ ಬಗ್ಗೆ ವಿವರಿಸಿದ್ದು ಹೀಗೆ...

Update: 2025-06-01 01:16 IST

ಮಂಗಳೂರು: ಕಳೆದ ಮೂರು ವರ್ಷಗಳಿಂದ ನಾನು ಮತ್ತು ರಹ್ಮಾನ್ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆತ ಪರೋಪಕಾರಿ. ತನ್ನ ಬಳಿ ಬಂದ ಯಾರನ್ನು ಕೂಡಾ ರಹಿಮಾನ್ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಮಾಡುತ್ತಿದ್ದರು ಎಂದು ಕೊಳತ್ತಮಜಲಿನಲ್ಲಿ ತನ್ನ ಪರಿಚಯಿಸ್ಥರಿಂದಲೇ ಹಲ್ಲೆಗೊಳಗಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲಂದರ್ ಶಾಫಿ ಅವರು ತನ್ನೊಂದಿಗೆ ಹಲ್ಲೆಗೊಳಗಾಗಿ ಮೃತಪಟ್ಟ ಸ್ನೇಹಿತ ಅಬ್ದುಲ್ ರಹಿಮಾನ್ ಬಗ್ಗೆ ‘ವಾರ್ತಾ ಭಾರತಿ‘ ಯೊಂದಿಗೆ ಮಾತನಾಡಿ ಘಟನೆಯ ವಿವರವನ್ನು ಹಂಚಿಕೊಂಡರು.

ಮೃತ ರಹ್ಮಾನ್ ಮತ್ತು ನನ್ನ ಬಗ್ಗೆ ಹಿಂದು -ಮುಸ್ಲಿಂ ಸಮುದಾಯದ ಯಾರಿಗೂ ಕೂಡಾ ದ್ವೇಷ ಇರಲಿಲ್ಲ. ನಾವು ಎಲ್ಲರೊಂದಿಗೆ ಚೆನ್ನಾಗಿದ್ದೆವು. ರಹ್ಮಾನ್ ತುಂಬಾ ಹೆದರಿಕೆ ಸ್ವಭಾವದವನು. ಅವನು ಹೊರಗೆ ಹೋಗಿ ಬರುವುದು ಎಷ್ಟೇ ತಡವಾದರೂ ಅವನ ತಾಯಿ ಮಲಗದೆ ಮಗನಿಗಾಗಿ ಕಾಯುತ್ತಿದ್ದರು. ನಮ್ಮಿಬ್ಬರಿಗೆ ನ್ಯಾಯ ಬೇಕು. ನಮಗೆ ಆಗಿರುವ ಸ್ಥಿತಿ ಯಾರಿಗೂ ಬರಬಾರದು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ ಆತನನ್ನು ಬಂಧಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಕೊಲೆ ಆರೋಪಿಗಳು ಬಂಧನ ಆಗಿ ಒಂದೆರಡು ವರ್ಷ ಜೈಲಿನಲ್ಲಿ ಇರುತ್ತಾರೆ. ಮತ್ತೆ ಹೊರಗೆ ಬರುತ್ತಾರೆ. ಹೊರಗೆ ಬಂದಾಗ ಅವರಿಗೆ ಜನರಿಂದ ಹಣ, ಹಿಂದಿನಿಂದಲೇ ಬೆಂಬಲ ಸಿಗುತ್ತದೆ. ಮತ್ತೆ ನಾಲ್ಕೈದು ಮಂದಿ ಅಮಾಯಕರನ್ನು ಸಾಯಿಸುತ್ತಾರೆ. ಆದರೆ ಈ ರೀತಿ ಆಗಬಾರದು. ಇಂತವರಿಗೆ ಜೀವಾವಧಿ ಶಿಕ್ಷೆ ಆಗಬೇಕು. ಹಾಗಾದರೆ ದಕ್ಷಿಣ ಕನ್ನಡದಲ್ಲಿ ಹಿಂದು -ಮುಸ್ಲಿಂ ಗಲಾಟೆ ಆಗುವುದಿಲ್ಲ. ರಹ್ಮಾನ್ ಕೊಲೆ ಮಾಡಿದ ಮತ್ತು ನನ್ನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದು ಶಾಫಿ ಹೇಳಿದರು.

ಮೇ 27ರಂದು ನಡೆದದ್ದು ಏನು?:

ಬೆಳಗ್ಗೆ 8 ಗಂಟೆಗೆ ಬಿ.ಸಿ.ರೋಡ್‌ಗೆ ಎರಡು ಲೋಡ್ ಹೊಯ್ಗೆ ಹಾಕಲು ಹೋಗಿದ್ದೆ. ಮಧ್ಯಾಹ್ನ ಮನೆಗೆ ಬೈಕ್‌ನಲ್ಲಿ ಬರುವಾಗ ದಾರಿ ಮಧ್ಯೆ ದೀಪಕ್ ನ ಸ್ಕೂಟರ್‌ನಲ್ಲಿ ಸುಮಿತ್ ಮತ್ತು ರವಿರಾಜ್ ಹೋಗುತ್ತಿದ್ದರು. ಅವರನ್ನು ನಾನು ಓವರ್ ಟೇಕ್ ಮಾಡಿ ಬಂದು ಮನೆಯಲ್ಲಿ ಸ್ನಾನ ಮುಗಿಸಿ, ಊಟ ಮಾಡಿ ನಿದ್ದೆ ಮಾಡಲು ಹೋಗುವಾಗ ರಹಿಮಾನ್ ಕರೆ ಮಾಡಿದರು ‘ ದೀಪಕ್‌ನ ಮನೆಗೆ ಒಂದು ಲೋಡ್ ಹೊಯ್ಗೆ ಹಾಕಲು ಇದೆ ’ ಎಂದು ಹೇಳಿ ನನ್ನನ್ನು ಬರುವಂತೆ ಕರೆದರು. ನಾನು ರಹ್ಮಾನ್ ಮನೆಗೆ ಹೋದೆ. ಅಲ್ಲಿಂದ ಒಟ್ಟಿಗೆ ಹೋಗಿ ಹೊಯ್ಗೆ ತೆಗೆದುಕೊಂಡು ರಿಟರ್ನ್ ಬರುವಾಗ, ನಾವು ಅವನ ಮನೆ ಬಳಿ ತಲುಪುತ್ತಿದ್ದಂತೆ ನಾನು ಇಳಿಯುತ್ತೇನೆ. ಮನೆಗೆ ಹೋಗುತ್ತೇನೆ ಎಂದಾಗ‘ ಇದು ಕೊನೆಯ ಲೋಡ್ . ಇದನ್ನು ಹಾಕಿ ನಾವು ಮನೆಗೆ ಒಟ್ಟಿಗೆ ಹೋಗುವ’ ಎಂದು ಹೇಳಿದರು ಎಂದು ಶಾಫಿ ನೆನಪಿಸಿಕೊಂಡರು.

ದೀಪಕ್‌ನ ತಾಯಿ-ತಮ್ಮನನ್ನು ಕರೆದುಕೊಂಡು ಹೋಗಿದ್ದೆವು:

ನಾವು ಕಾಂಬೋಡಿಗೆ ದೀಪಕ್‌ನ ಮನೆಗೆ ಹೊಯ್ಗೆ ತೆಗೆದುಕೊಂಡು ಹೋಗುತ್ತಿದ್ದೆವು. ಇನ್ನೇನು ಆತನ ಮನೆಗೆ ತಲುಪಲು ಇನ್ನು ಮೂರು ಕಿ.ಮೀ ಇರುವಾಗ ದೀಪಕ್‌ನ ತಾಯಿ ಮತ್ತು ತಮ್ಮ ನಡೆದುಕೊಂಡು ಹೋಗುತ್ತಿದ್ದರು. ಆಗ ನಾನು ಅವರನ್ನು ಕರೆದುಕೊಂಡು ಹೋಗೋಣ ಎಂದು ಹೇಳಿದ್ದಕ್ಕೆ ರಹ್ಮಾನ್ ಪಿಕ್‌ಅಪ್ ನಿಲ್ಲಿಸಿದರು. ನಾವು ಅವರನ್ನು ಪಿಕ್ ಅಪ್‌ನಲ್ಲಿ ಕರೆದುಕೊಂಡು ಹೋಗಿ ಮನೆಗೆ ತಲುಪಿಸಿದೆವು. ಇದನ್ನು ದೀಪಕ್ ನೋಡಿದ್ದ. ದೀಪಕ್ ಮನೆ ಬಳಿ ಹೊಯ್ಗೆ ಅನ್ ಲೋಡ್ ಮಾಡಲು ಜಾಗ ತೋರಿಸಿದ. ಅದರಂತೆ ಪಿಕ್ ಅಪ್‌ನ್ನು ಹಿಂದಕ್ಕೆ ತಿರುಗಿಸಿ ಅನ್‌ ಲೋಡ್ ಮಾಡಿದೆವು.

ಹೊಯ್ಗೆಯನ್ನು ನೋಡಿದ ದೀಪಕ್ ‘ನಾನು ನಿಮ್ಮಲ್ಲಿ ಸಪೂರದ ಹೊಯ್ಗೆ ಹಾಕಲು ಹೇಳಿದ್ದು. ಇದು ಯಾಕೆ ದಪ್ಪದ ಹೊಯ್ಗೆ ಹಾಕಿದ್ದು’ ಎಂದು ಪ್ರಶ್ನಿಸಿದ. ದೀಪಕ್‌ನ ಮನೆಗೆ ಹೊಯ್ಗೆ ಹಾಕುವಂತೆ ಹೇಳಿದ್ದು ಮೇಸ್ತ್ರಿ ಜಗ್ಗು ಯಾನೆ ಜಗದೀಶ. ಜಗ್ಗುವಿನೊಟ್ಟಿಗೆ ನಾನು ಕೆಲಸ ಮಾಡಿದ್ದೆ ದೀಪಕ್‌ನ ಮಾತಿಗೆ ಉತ್ತರಿಸಿದ ರಹ್ಮಾನ್ ‘ಇಲ್ಲ ಜಗ್ಗು ಹೇಳಿದ್ದು ದಪ್ಪದ ಹೊಯ್ಗೆ’ ಎಂದು ಹೇಳಿ ಜಗ್ಗುವಿಗೆ ಕರೆ ಮಾಡುತ್ತಾರೆ. ಆಗ ಅಲ್ಲಿಗೆ ಬಂದ ರವಿರಾಜ್ ‘ ಮನೆಗೆ ನನಗೊಂದು ಪಿಕ್‌ಅಪ್ ಹೊಯ್ಗೆ ಬೇಕು ಎಷ್ಟು ರೇಟಲ್ಲಿ ಹಾಕುತ್ತಿರಾ ’ ಎಂದು ಕೇಳಿದ್ದಕ್ಕೆ ರಹ್ಮಾನ್ ‘ಆಯ್ತು ಹಾಕುವ ’ಎಂದರು

ಬಳಿಕ ನಾವಿಬ್ಬರು ಪಿಕ್‌ಅಪ್‌ನಲ್ಲಿ ಲಾಕ್‌ಹಾಕಿ ಕುಳಿತುಕೊಂಡು ಹೋಗುವ ತಯಾರಿಯಲ್ಲಿದ್ದೆವು. ಅಷ್ಟರಲ್ಲಿ ರವಿರಾಜ್ ಒಳಗೆ ಕೈ ಹಾಕಿ ಕೀ ಎಳೆಯಲು ಪ್ರಯತ್ನಿಸಿದ. ಆಗ ಹಿಂದುಗಡೆಯಿಂದ ಸುಮಿತ್, ಚಿಂತನ್, ಪೃಥ್ವಿರಾಜ್ ಒಟ್ಟಿಗೆ ಬಂದು ರಹ್ಮಾನ್ ಮೇಲೆ ದಾಳಿ ಮಾಡುತ್ತಾರೆ. ರಹ್ಮಾನ್ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಮೂವರು ಅವನನ್ನು ಬಿಟ್ಟು ನನ್ನ ಬಳಿ ಬರುತ್ತಾರೆ. ರಹ್ಮಾನ್ ನ ಮೇಲೆ ರವಿರಾಜ್ ತಲವಾರಿನಿಂದ ದಾಳಿ ಮುಂದುವರಿಸುತ್ತಾನೆ. ಆಗ ನಾನು ಅವರಲ್ಲಿ ಬಿಟ್ಟು ಬಿಡುವಂತೆ ಎಷ್ಟೇ ವಿನಂತಿ ಮಾಡಿದರೂ ನಮ್ಮನ್ನು ಅವರು ಬಿಡಲಿಲ್ಲ. ‘‘ ನಿಮ್ಮಲ್ಲಿ ತುಂಬಾ ಜನರು ಇದ್ದಾರೆ. ಸುಹಾಸ್‌ ಅನ್ನು ನೀವು ಕೊಂದಿದ್ದರಲ್ಲ. ಬ್ಯಾರಿಗಳನ್ನು ಸುಮ್ಮನೆ ಬಿಡುವುದಿಲ್ಲ’’ ಎಂದು ತುಳುವಿನಲ್ಲಿ ಅವರು ಅಬ್ಬರಿಸಿದ್ದರು.

ಮೊದಲು ನನ್ನ ಮೇಲೆ ಸುಮಿತ್ ತಲವಾರು ಬೀಸಿದ. ಆಗ ನನ್ನ ಬೆರಳು ತುಂಡಾಯಿತು. ಹಿಂದಿನಿಂದ ಪೃಥ್ವಿರಾಜ್ ತಲವಾರಿನಿಂದ ನನ್ನ ಕೈಗೆ ಮತ್ತು ಚಿಂತನ್ ಎದೆಗೆ ತಲವಾರಿನಿಂದ ಕಡಿದ ಎಂದರು.

ಬಳಿಕ ಸುಮಿತ್‌ ‘ ಅವನು(ರಹ್ಮಾನ್) ಸತ್ತಿದ್ದಾನೊ ಬದುಕಿದ್ದಾನೊ ’ ಎಂದು ಕೇಳುತ್ತಾನೆ ? ಉಳಿದವರು ಹೇಳುತ್ತಾರೆ ‘‘ಆತ ಇನ್ನೂ ಸತ್ತಿಲ್ಲ. ಬದುಕಿದ್ದಾನೆ’’ ಬಳಿಕ ಅವರೆಲ್ಲ ನನ್ನನ್ನು ಬಿಟ್ಟು ರಹಿಮಾನ್‌ನ ಹತ್ತಿರ ಹೋಗಿ ಅವನನ್ನು ಪಿಕ್‌ಅಪ್‌ನಿಂದ ಹೊರಗೆ ಹಾಕಿ ಅವನ ಮೇಲೆ ದಾಳಿ ಮುಂದುವರಿಸಿದರು ಎಂದು ಹೇಳಿದರು.

ಅಷ್ಟರಲ್ಲಿ ನಾನು ಮೆಲ್ಲನೆ ಈ ಕಡೆಯಿಂದ ಪಿಕ್‌ಅಪ್‌ನಿಂದ ಮೊಬೈಲ್ ತೆಗೆದು ಓಡಿದೆ . ಆಗ ರವಿರಾಜ್ ಹಿಂದಿನಿಂದ ಬಂದು ಬೆನ್ನಿಗೆ ಹೊಡೆದ. ಆದರೂ ಅಲ್ಲಿ ನಿಲ್ಲದೆ ಓಡಿ ಹೋಗಿ ಸ್ನೇಹಿತರಿಗೆ ಕಾಲ್ ಮಾಡಿ ತಿಳಿಸಿದೆ ಎಂದು ಶಾಫಿ ಹೇಳಿದರು.

ದೀಪಕ್‌ನಲ್ಲಿ ತುಂಬಾ ಬೇಡಿದ್ದೆ:

ನಾನು ಅವರ ಬಳಿ ಪರಿ ಪರಿಯಾಗಿ ವಿನಂತಿಸಿಕೊಂಡೆ , ನಮ್ಮ ಮನೆಯ ಪರಿಸ್ಥಿತಿ ಬಗ್ಗೆ ದೀಪುವಿಗೆ ಗೊತ್ತು , ನನ್ನ ತಂದೆ ತಾಯಿಯ ಅನಾರೋಗ್ಯದ ಬಗ್ಗೆ , ರಹ್ಮಾನ್ ತಂದೆ, ತಾಯಿಯ ಅನಾರೋಗ್ಯದ ಬಗ್ಗೆ ದೀಪಕ್ ಹತ್ತಿರ ಹೇಳಿದೆ ಆದ್ರೆ ಯಾವುದೇ ಕಾರಣಕ್ಕೂ ಅವರು ನಮ್ಮನ್ನು ಬಿಡ್ಲಿಲ್ಲ ಎಂದು ಶಾಫಿ ವಿವರಿಸಿದ್ದಾರೆ.

ಇವರೆಲ್ಲ ಪರಿಯಸ್ಥರೇ: ಒಟ್ಟಿಗೆ ಆಟವಾಡಲು ಬರುತ್ತಿದ್ದರು

ನಾನು ದೀಪಕ್ ಒಟ್ಟಿಗೆ ನಾಲ್ಕು ವರ್ಷ ಬಂಟ್ವಾಳದಲ್ಲಿ ಕೆಲಸ ಮಾಡಿದ್ದೆವು. ಅವನಿಗೆ ನನ್ನ ಮತ್ತು ರಹ್ಮಾನ್ ಮನೆಯ ಪರಿಸ್ಥಿತಿ ಚೆನ್ನಾಗಿ ಗೊತ್ತು. ನಮ್ಮ ಮನೆಯ ಹತ್ತಿರ ನಿಶಾಂತ್‌ನ ಮನೆ ಇದೆ. ಅಲ್ಲಿಗೆ ಭರತ್ ಕುಮ್ಡೇಲ್ ಆಗಾಗ ಬರುತ್ತಾ ಇದ್ದ. ಇವರೆಲ್ಲ ಭರತ್ ಕುಮ್ಡೇಲ್ ಗ್ಯಾಂಗ್. ಅವನೇ ಇದನ್ನೆಲ್ಲಾ ಮಾಡಿದ್ದು. ಶೇ 100 ಅವನದ್ದೇ ಕೃತ್ಯ .ಇನ್ನೂ ಹಲವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಶಾಫಿ ಆರೋಪಿಸಿದರು.

ನಮ್ಮದು ಸೌಹಾರ್ದತೆಯ ಊರು:

ನಾವು ಎಲ್ಲರ ಒಟ್ಟಗೆ ಆಡುತ್ತಿದ್ದೆವು. ನಮ್ಮ ಊರಲ್ಲಿ ಭೇದ ಭಾವ ಇಲ್ಲ. ಸೌಹಾರ್ದತೆಯ ಊರು ನಮ್ಮದು. ಈದ್ ಮಿಲಾದ್ , ಚೌತಿ, ಶಾರದಾ ಪೂಜೆ ಸಮಯದಲ್ಲಿ ಪರಸ್ಪರ ಸಿಹಿ ಹಂಚಿಕೊಂಡುತ್ತಿದ್ದೆವು. ಸುಮೀತ್ ಹೊರಗಿನವನಾಗಿದ್ದರೂ, ನಮ್ಮೊಟ್ಟಿಗೆ ಆಡಲು ಬರುತ್ತಿದ್ದನು. ನಮ್ಮ ಊರಿನ ಸೌಹಾರ್ದತೆಯನ್ನು ಭರತ್ ಕುಮ್ಡೇಲಿಗೆ ಸಹಿಸಲು ಆಗಲಿಲ್ಲ. ಅದಕ್ಕಾಗಿ ಆತ ಇದನ್ನು ಮಾಡಿಸಿದ ಎಂದು ಆರೋಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News