×
Ad

ಇತಿಹಾಸ ಕಣ್ಣಿನ ಧೂಳಾಗದೆ, ಬೆಳಕಾಗಲಿ : ಡಾ.ಪುರುಷೋತ್ತಮ ಬಿಳಿಮಲೆ

‘ಭಾರತದ ಮುಸ್ಲಿಮರು ಮತ್ತು ಇತಿಹಾಸ’ ವಿಚಾರ ಗೋಷ್ಠಿ

Update: 2025-11-12 23:53 IST

ಮಂಗಳೂರು , ನ.12: ಇತಿಹಾಸ ನಮಗೆ ಭಾರವಾಗದೆ, ಕಣ್ಣಿಗೆ ಧೂಳಾಗದೆ ನಮ್ಮ ಜೀವನದ ಬೆಳಕಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ‘ಭಾರತದ ಮುಸ್ಲಿಮರು ಮತ್ತು ಇತಿಹಾಸ’ ಎಂಬ ವಿಷಯದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಇತಿಹಾಸದಲ್ಲಿ ಮುಸ್ಲಿಮ್ ರಾಜರು ದೇಶವನ್ನು ಆಳಿದ ಮೇಲೆ ಹಿಂದೂಗಳ ಜೀವನದಲ್ಲಿ ಸಾಕಷ್ಟು ಬದಲಾಗಿದೆ ಎನ್ನುವುದನ್ನು ನಾವು ಮರೆಯಬಾರದು. ಭಾರತಕ್ಕೆ ಇಸ್ಲಾಂ ಧಾರ್ಮಿಕ ಶಕ್ತಿಯಾಗಿ ಬರಲಿಲ್ಲ. ಸಾಮಾಜಿಕ ಶಕ್ತಿಯಾಗಿ ಪ್ರವೇಶಿಸಿತ್ತು. ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದವರು ಆಗ ಆ ಧರ್ಮವನ್ನು ಅಪ್ಪಿಕೊಂಡರು. ಇದನ್ನು ಮತಾಂತರ ಎಂದು ಹೇಳುವುದು ಕಷ್ಟ ಎಂದರು.

ಹಿಂದೆ ಭಾರತದ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಿದ ಮುಸ್ಲಿಮ್ ಪಂಡಿತರು ಪಶ್ಚಿಮ ದೇಶಗಳಿಗೆ ಪರಿಚಯಿಸಿದರು. ಅದೇ ರೀತಿ ಇಲ್ಲಿಗೆ ವಾಸ್ತುಶಿಲ್ಪವನ್ನು ಪರಿಚಯಿಸಿದರು ಎಂದು ಡಾ.ಬಿಳಿಮಲೆ ಹೇಳಿದರು.

ಪ್ರೀತಿಯ ಹೂವನ್ನು ಅರಳಿಸಬೇಕಾಗಿದೆ :

ಖ್ಯಾತ ಇತಿಹಾಸ ತಜ್ಞ, ಮುಂಬೈಯ ಡಾ.ರಾಮ್ ಪುನಿಯಾನಿ ಮುಖ್ಯ ಅತಿಥಿಯಾಗಿ ಮಾತನಾಡಿ, ದೇಶದಲ್ಲಿ ನಮ್ಮೊಳಗೆ ದ್ವೇಷದ ಗೋಡೆ ಕಟ್ಟಲಾಗಿದೆ. ಇದನ್ನು ಒಡೆದು ಹಾಕಿ ಪ್ರೀತಿಯ ಹೂವನ್ನು ಅರಳಿಸಬೇಕಾಗಿದೆ ಎಂದು ಹೇಳಿದರು.

ಇತ್ತೀಚೆಗೆ ದಿನಗಳಲ್ಲಿ ಕೆಲವು ಸಂಘಟನೆಗಳು ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮ್ ವಿರುದ್ಧ ದ್ವೇಷ ಹರಡಿಸುತ್ತಿವೆ. ಇದರ ಮರ್ಮವನ್ನು ಜನರಿಗೆ ತಿಳಿಸುವ ಪ್ರಯತ್ನ ಅಗತ್ಯ ಎಂದರು.

ಇತಿಹಾಸದಲ್ಲಿ ಯಾವುದೇ ರಾಜರುಗಳು ಧರ್ಮದ ಕಾರಣಕ್ಕಾಗಿ ಮಸೀದಿ, ಮಂದಿರಗಳನ್ನು ಧ್ವಂಸ ಮಾಡಲಿಲ್ಲ. ಕೇವಲ ಸಂಪತ್ತಿಗಾಗಿ ಧ್ವಂಸ ಮಾಡಿದರು. ಹಿಂದೂ ರಾಜರುಗಳ ಸೇನೆಯಲ್ಲಿ ಮುಸ್ಲಿಮ್ ಸೈನಿಕರು ಮತ್ತು ಮುಸ್ಲಿಮ್ ರಾಜರುಗಳ ಸೇನೆಯಲ್ಲಿ ಹಿಂದೂ ಸೈನಿಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು. ಕಾಶ್ಮೀರದ ರಾಜ ಹರ್ಷದೇವ ದೇಶದಲ್ಲಿ ಅತ್ಯಂತ ಹೆಚ್ಚು ಮಂದಿರಗಳನ್ನು ಧ್ವಂಸಗೊಳಿಸಿದ ರಾಜ ಎನ್ನುವ ವಿಚಾರವನ್ನು ಕಲ್ಹಣನು ‘ರಾಜತರಂಗಿಣಿ’ಯಲ್ಲಿ ಬರೆದಿರುವುದಾಗಿ ಡಾ.ಪುನಿಯಾನಿ ಹೇಳಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಕೊಡುಗೆ ದೊಡ್ಡದು :

ಕಾರ್ಯಕ್ರಮ ಉದ್ಘಾಟಿಸಿದ ಯೆನೆಪೊಯ ವಿಶ್ವವಿದ್ಯಾನಿಲಯದ ಸ್ಥಾಪಕ ಉಪಕುಲಪತಿ ಪ್ರೊ.ಸೈಯದ್ ಅಕೀಲ್ ಅಹ್ಮದ್ ಮಾತನಾಡಿ, ಭಾರತದಲ್ಲಿ ಈಗ ಮುಸ್ಲಿಮರ ಕೊಡುಗೆ ಅಷ್ಟೊಂದು ಇಲ್ಲದೆ ಇರಬಹುದು. ಆದರೆ ಹಿಂದಿನ ಇತಿಹಾಸವನ್ನು ನೋಡಿದರೆ ತಂತ್ರಜ್ಞಾನದಲ್ಲಿ ಮುಸ್ಲಿಮರು ನೀಡಿರುವ ಕೊಡುಗೆ ಅಪಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಯಾವುದೇ ಸಮುದಾಯದ ಸ್ಥಾನಮಾನವನ್ನು ಅವರ ಪೂರ್ವಜರು ನೀಡಿರುವ ಕೊಡುಗೆಗಳ ಆಧಾರದಲ್ಲಿ ನಿರ್ಧರಿಸಬಾರದು. ಹಾಗೆ ಮಾಡಿದರೆ ಅದು ದೊಡ್ಡ ಅನ್ಯಾಯವಾಗುತ್ತದೆ. ಇವತ್ತು ನೀಡಿದ ಕೊಡುಗೆಯ ಆಧಾರದಲ್ಲಿ ತೀರ್ಮಾನಿಸಬೇಕು. ಕೊಡುಗೆಗಳನ್ನು ಆರೋಗ್ಯಕರ ವಾತಾವರಣದಲ್ಲಿ ಚರ್ಚಿಸಬೇಕು ಎಂದು ಹೇಳಿದರು.

ಇತಿಹಾಸಕ್ಕೆ ತನ್ನದೆ ಆಗಿರುವ ಇತಿಮಿತಿ ಇದೆ. ಇತಿಹಾಸ ಬರೆಯುವವರು ಎಷ್ಟು ಪ್ರಾಮಾಣಿಕರಾಗಿದ್ದರೆ ಎಷ್ಟು ವಸ್ತುನಿಷ್ಠರಾಗಿದ್ದರೆ ಎನ್ನುವುದನ್ನು ಅವಲಂಬಿಸಿರುತ್ತದೆ. ಒಂದು ಅವಿಭಕ್ತ ಕುಟುಂಬದ ಸದಸ್ಯರು ತಮ್ಮ ಮನೆಯಲ್ಲಿರುವ ಇಟ್ಟಿಗೆಯ ಕೊಡುಗೆಗಳನ್ನು ಗುರುತಿಸಲು ಹೊರಟರೆ ಆ ಮನೆಯು ಸರ್ವನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಯಾರ ಬಳಿ ಒಂದು ಚಂದದ ವರ್ತಮಾನ ಇಲ್ಲವೂ, ವರ್ತಮಾನದಲ್ಲಿ ಅಭಿಮಾನವಿಲ್ಲವೂ ಅವರು ಇತಿಹಾಸದಲ್ಲಿ ಆಶ್ರಯದಲ್ಲಿ ಪಡೆಯಲು ಬಯಸುತ್ತಾರೆ. ಇತಿಹಾಸದಲ್ಲಿ ಉತ್ತಮ ಕೊಡುಗೆ ನಮ್ಮ ಪರಂಪರೆಯದ್ದು, ಕೆಟ್ಟದ್ದು ಇನ್ನೊಬ್ಬರದ್ದು ಎನ್ನುವುದು ಒಂದು ರೋಗವಾಗಿದೆ. ಅದಕ್ಕೆ ಚಿಕಿತ್ಸೆ ನೀಡಬೇಕಾಗಿದೆ. ನಮ್ಮ ಪೂರ್ವಜರು ಒಳ್ಳೆಯದು ಮಾಡಿದ್ದನ್ನು ಸ್ವೀಕರಿಸಬೇಕು. ಕೆಟ್ಟದ್ದನ್ನು ತಿರಸ್ಕರಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು

ಇದೇ ಸಂದರ್ಭದಲ್ಲಿ ಕೆ.ಟಿ.ಹುಸೈನ್ ಬರೆದಿರುವ ಅರಫಾ ಮಂಚಿ ಅನುವಾದಿಸಿರುವ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಎಂಬ ಕೃತಿಯನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ಖಾಝಿ ಎ ಶರೀಅತ್ ಮೌಲಾನ ಮುಫ್ತಿ ಶೇಖ್ ಮುತಹ್ಹರ್ ಹುಸೈನ್ ಖಾಸಿಮಿ, ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಮೌಲನಾ ಯಹ್ಯಾ ತಂಙಳ್ ಮದನಿ, ಶಾಂತಿ ಪ್ರಕಾಶನ ಟ್ರಸ್ಟ್ ನ ಕಾರ್ಯದರ್ಶಿ ಅಬ್ದುಸ್ಸಲಾಮ್ ಯು., ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಸಈದ್ ಇಸ್ಮಾಯಿಲ್, ಕೃತಿ ಅನುವಾದಕ ಅರಫಾ ಮಂಚಿ, ಜಮಾಅತೆ ಇಸ್ಲಾಮಿ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಕರೀಮ್ ಉಪಸ್ಥಿತರಿದ್ದರು.

ಬೆಂಗರೆ ಮಸ್ಜಿದ್ ಅನಸ್ ಬಿನ್ ಮಾಲಿಕ್ ಖತೀಬ್ ಅಬ್ದುಲ್ ಲತೀಫ್ ಆಲಿಯ ಕಿರಾಅತ್ ಪಠಿಸಿದರು. ಅಶ್ರಫ್ ಅಪೋಲೊ ಮತ್ತು ಶರೀಫ್ ಪರ್ಲಿಯ ಸೌಹಾರ್ದ ಗೀತೆ ಹಾಡಿದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್ ವಂದಿಸಿದರು.

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News