×
Ad

ಮಂಗಳೂರು | ಸುಲಿಗೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Update: 2026-01-19 10:30 IST

ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವಾರಂಟ್ ಜಾರಿ ಸಿಬ್ಬಂದಿ ಬಂಧಿಸಿದ್ದಾರೆ.

ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ಅಂಚೆ, ಮಂಗಳೂರು ನಿವಾಸಿ ನವೀನ್ ಸಿಕ್ವೇರಾ (52)ಬಂಧಿತ ಆರೋಪಿ. 2011–12ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 195/2011, ಕಲಂ 392 ಐಪಿಸಿ ಅಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015ರಲ್ಲಿ ಆರೋಪಿಗೆ ಮೂರು ವರ್ಷಗಳ ಕಠಿಣ ಸೆರೆವಾಸ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದನು. ಅರ್ಜಿ ಪರಿಶೀಲಿಸಿದ ಉಚ್ಚ ನ್ಯಾಯಾಲಯವು ಆರೋಪಿಗೆ ಒಂದು ವರ್ಷ ಸಾದಾ ಸೆರೆವಾಸ ಮತ್ತು 15,000 ರೂ. ದಂಡ ವಿಧಿಸಿ, ಈ ಶಿಕ್ಷೆಯನ್ನು 2022ರೊಳಗೆ ಅನುಭವಿಸುವಂತೆ ಆದೇಶಿಸಿತ್ತು. ಇದಕ್ಕೆ ವಿಫಲವಾದಲ್ಲಿ ಜಿಲ್ಲಾ ನ್ಯಾಯಾಲಯದ ಹಿಂದಿನ ಆದೇಶದಂತೆ ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿತ್ತು.

ಆದರೆ ತೀರ್ಪು ಪ್ರಕಟವಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದರಿಂದ, ನ್ಯಾಯಾಲಯವು ಬಂಧನದ ವಾರೆಂಟ್ ಹೊರಡಿಸಿತ್ತು.

ಖಚಿತ ಮಾಹಿತಿ ಆಧಾರದ ಮೇಲೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವಾರಂಟ್ ಜಾರಿ ಸಿಬ್ಬಂದಿಗಳಾದ ಏಎಸ್ಐ ಮಚ್ಚೆಂದ್ರನಾಥ್ ಜೋಗಿ, ಹೆಚ್.ಸಿ. ಅಭಿಷೇಕ್ ಹಾಗೂ ಹೆಚ್.ಸಿ. ನಾರಪ್ಪ ಕೆ.ಬಿ. ಅವರು ದಿನಾಂಕ ಜ.14 ರಂದು ಸುರತ್ಕಲ್ ಹೊನ್ನಕಟ್ಟೆಯ ಬಾರ್ ನಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ನ್ಯಾಯಾಲಯವು ಈ ಹಿಂದೆ ನೀಡಿದ ತೀರ್ಪಿನಂತೆ ಆರೋಪಿಗೆ ಮೂರು ವರ್ಷಗಳ ಕಠಿಣ ಸೆರೆವಾಸ ಹಾಗೂ 5,000 ರೂ. ದಂಡ ವಿಧಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News