ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಲೋಕಾಯುಕ್ತ ದಾಳಿ
ಮಂಗಳೂರು, ಅ.16: ನಗರ ಹೊರಲವಯದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್ ನೇತೃತ್ವದ ತಂಡವು ದಾಳಿ ನಡೆಸಿ ಪ್ರಾಧಿಕಾರದ ಕಚೇರಿ ಯಲ್ಲಿ ಕಡತಗಳ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ. ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಸರಕಾರದಿಂದ ಮಂಜೂರಾದ ಅನುದಾನದ ದುರುಪಯೋಗ ನಡೆದಿದೆ ಎಂಬ ಆರೋಪವಿದ್ದು, ಆದಾಯ ಮತ್ತು ವೆಚ್ಚದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಲ್ಲದೆ ಮೃಗಾಲಯದ ಪ್ರಾಣಿಗಳ ಆಹಾರ ಸರಬರಾಜಿನಲ್ಲಿ ಕೂಡ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಮೃಗಾಲಯದ ನಿರ್ವಹಣೆಯಲ್ಲಿ ಭಾರೀ ಲೋಪದೋಷಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೇ 23ರಂದು ಕೂಡ ಲೋಕಾಯುಕ್ತ ಅಧಿಕಾರಿಗಳು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.