ಮಂಗಳೂರು | ಎನ್ಐಟಿಕೆಯ ಡಾ.ಸೌರವ್ ಕಾಂತಿ ಅವರ ಸ್ಮಾರ್ಟ್ ಎಕ್ಸ್ ಪ್ರಾಜೆಕ್ಟ್ ಗೆ 1.19 ಕೋಟಿ ರೂ. ಅನುದಾನ
ಆಸ್ಟ್ರೇಲಿಯಾ-ಭಾರತ ಶಿಕ್ಷಣ, ಕೌಶಲ್ಯ ಮಂಡಳಿಯ 3ನೇ ಸಭೆ
ಮಂಗಳೂರು, ಡಿ. 15: . ಆಸ್ಟ್ರೇಲಿಯಾ-ಭಾರತ ಶಿಕ್ಷಣ ಮತ್ತು ಕೌಶಲ್ಯ ಮಂಡಳಿಯು ಸುರತ್ಕಲ್ ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿಕೆ ) ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಸೌರವ್ ಕಾಂತಿ ಆದ್ಯಾ ಅವರಿಗೆ ನಗರಗಳಲ್ಲಿ ಸಂಚಾರ ನಿರ್ವಹಣೆಯ ಮೇಲೆ ಕೇಂದ್ರೀಕೃತಾ ಸ್ಮಾರ್ಟ್ ಎಕ್ಸ್ ಪ್ರಾಜೆಕ್ಟ್ ತಯಾರಿಸಲು 1,19,25,000 ರೂ. ಅನುದಾನ ಮಂಜೂರು ಮಾಡಿದೆ.
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ-ಭಾರತ ಶಿಕ್ಷಣ ಮತ್ತು ಕೌಶಲ್ಯ ಮಂಡಳಿಯ (ಎಐಇಎಸ್ಸಿ) 3ನೇ ಸಭೆಯಲ್ಲಿ ಸ್ಮಾರ್ಟ್ಎಕ್ಸ್ ಪ್ರಾಜೆಕ್ಟ್ ಸೇರಿದಂತೆ 10 ಎಸ್ಪಿಎಆರ್ಸಿ ಯೋಜನೆಗಳಿಗೆ 9.84 ಕೋಟಿ ರೂ. ಗಳು ಮಂಜೂರಾಗಿದೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನಗಳು, ಜೀವವೈವಿಧ್ಯ, ಮೆಡ್ಟೆಕ್, ಸುಸ್ಥಿರತೆ, ಸ್ಮಾರ್ಟ್ ಚಲನಶೀಲತೆ ಮತ್ತು ಬಾಹ್ಯಾಕಾಶದಂತಹ ಯೋಜಗಳಿಗೆ ಅನುದಾನ ಮಂಜೂರಾಗಿದೆ.
ಭಾರತದ ನಗರ ರಸ್ತೆಗಳು ವಾಹನಗಳ ತೀವ್ರ ಹೆಚ್ಚಳದಿಂದ ಒತ್ತಡದಲ್ಲಿದೆ. ವಾಹನಗಳ ದಟ್ಟಣೆಯಿಂದಾಗಿ ದಿನನಿತ್ಯ ಆನೇಕ ಅಪಘಾತಗಳು ಸಂಭವಿಸುತ್ತಿವೆ. ಅಸುರಕ್ಷಿತ ಚಾಲನೆಯು ಇನ್ನಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಟ್ರಾಫಿಕ್ನ ಸವಾಲನ್ನು ಎದುರಿಸಲು ಸ್ಮಾರ್ಟ್ಎಕ್ಸ್ ಯೋಜನೆಯು ಸಿಗ್ನಲ್ ಮಾಡಲಾದ ಛೇದಕಗಳಲ್ಲಿ ಸಂಚಾರ ನಿರ್ವಹಣೆಯನ್ನು ಮರುಕಲ್ಪಿಸುವ ಪರಿವರ್ತಕ ವಾಹನ ಪಥ ಮುನ್ಸೂಚನಾ ಚೌಕಟ್ಟನ್ನು ನಿರ್ಮಿಸಲಿರುವುದನ್ನು ನಿರೀಕ್ಷಿಸಲಾಗಿದೆ.
ಈ ಪ್ರಾಜೆಕ್ಟ್ ಆಸ್ಟ್ರೇಲಿಯದ ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಪ್ರೊ. ಸಲೀಲ್ ಕನ್ಹೆರೆ ಮತ್ತು ಸಹ-ಪ್ರಧಾನ ಪರೀಕ್ಷಕ ಐಐಟಿ ಖರಗ್ಪುರದ ಅಸೋಸಿಯೇಟ್ ಪ್ರೊ. ಡಾ. ಸಂದೀಪ್ ಚಕ್ರವರ್ತಿ ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಡಾ.ಕಾಂಚನಾ ತಿಲಕರತ್ನ ನೆರವಿನಲ್ಲಿ ನಿರ್ಮಾಣವಾಗಲಿದೆ.
ಮಂಜೂರಾತಿ ಪತ್ರ ವಿತರಣೆ :
ಸಮಾರಂಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಡಾ.ಆದ್ಯಾ ಅವರಿಗೆ ಮಂಜೂರಾತಿ ಪತ್ರ ಮತ್ತು ಫಲಕವನ್ನು ನೀಡಿದರು.
ಭಾರತದ ಉದ್ಯಮಶೀಲತೆ ಖಾತೆ ರಾಜ್ಯ ಸಚಿವ (ಸ್ವತಂತ್ರ) ಜಯಂತ್ ಚೌಧರಿ ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವ ಡಾ.ಸುಕಾಂತ ಮಜುಂದಾರ್ , ಆಸ್ಟ್ರೇಲಿಯಾ ಅಂತರ್ರಾಷ್ಟ್ರೀಯ ಶಿಕ್ಷಣ ಸಹಾಯಕ ಸಚಿವ ಜೂಲಿಯನ್ ಹಿಲ್, ಶಿಕ್ಷಣ ಸಚಿವ ಜೇಸನ್ ಕ್ಲೇರ್ , ಆಸ್ಟ್ರೇಲಿಯಾ ಸರಕಾರದ ಕೌಶಲ್ಯ ಮತ್ತು ತರಬೇತಿ ಸಚಿವ ಆಂಡ್ರ್ಯೂ ಗೈಲ್ಸ್ ಭಾಗವಹಿಸಿದ್ದರು.
ಸಾಂಸ್ಥಿಕ ಸಂಪರ್ಕಗಳನ್ನು ಬಲಪಡಿಸುವುದು, ಚಲನಶೀಲತೆಯ ಮಾರ್ಗಗಳನ್ನು ವಿಸ್ತರಿಸುವುದು ಮತ್ತು ನಿಯಂತ್ರಕ ಸಹಕಾರವನ್ನು ಹೆಚ್ಚಿಸುವತ್ತ ಗಮನಹರಿಸಿದ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ಸಂಶೋಧನೆ, ಹಾಗೆಯೇ ಕೌಶಲ್ಯ, ತರಬೇತಿ ಮತ್ತು ಕಾರ್ಯಪಡೆಯ ಅಭಿವೃದ್ಧಿಯ ಪ್ರಗತಿಯನ್ನು ಇದೇ ಸಂದರ್ಭದಲ್ಲಿ ಪರಿಶೀಲಿಸಲಾಯಿತು.