ಮಂಗಳೂರು: ಕ್ರೈಸ್ತ ಸನ್ಯಾಸಿನಿಯರ ಬಂಧನ ವಿರೋಧಿಸಿ ಛತ್ತೀಸ್‌ಗಢ ಸರಕಾರದ ವಿರುದ್ಧ ಪ್ರತಿಭಟನೆ
ಮಂಗಳೂರು : ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್‌ಗಢ ಸರಕಾರದ ಫ್ಯಾಸಿಸ್ಟ್ ಸರಕಾರದ ರಾಜಕಾರಣವನ್ನು ವಿರೋಧಿಸಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ನೇತೃತ್ವದಲ್ಲಿ ಸೋಮವಾರ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಧಾರ್ಮಿಕ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಫಾ. ಡೊಮಿನಿಕ್ ವಾಸ್ ಅವರು ಭಾರತದ ಕ್ರೈಸ್ತರು ಈ ಮಣ್ಣಿನ ಮಕ್ಕಳು, ದೇಶಭಕ್ತರು. ಮತಾಂಧರಲ್ಲ. ಒಂದು ಕೈಯಲ್ಲಿ ಬೈಬಲ್ ಹಿಡಿದುಕೊಂಡು ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದು ಈ ದೇಶವನ್ನು ಅಪಾರವಾಗಿ ಪ್ರೀತಿಸುವರು ಎಂದು ಹೇಳಿದರು.
ಎಲ್ಲರ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದಾಗಿ ಐಕ್ಯತೆಯಿಂದ ಪಾಲ್ಗೊಳ್ಳುವ ಅವಕಾಶ ಹಿಂದೆ ಇತ್ತು. ಆದರೆ ಇವತ್ತು ದೇಶದಲ್ಲಿ ವಿಷದ ಬೀಜವನ್ನು ಬಿತ್ತಲಾಗಿದೆ. ಇದು ನೋವು ತಂದಿದೆ. ನಾವು ಕ್ರೈಸ್ತರು ವಿಷದ ಬೀಜವನ್ನು ಬಿತ್ತಿಲ್ಲ. ಎಲ್ಲರನ್ನು ಗೌರವಿಸುತ್ತೇವೆ . ದೇಶದ ಶಿಕ್ಷಣ ಮತ್ತು ಆರೋಗ್ಯದ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರು ಕ್ರೈಸ್ತರು ಎಂದು ಹೇಳಿದರು.
ಕ್ರೈಸ್ತ ಭಗಿನಿಯರ ಮೇಲೆ ಹಾಕಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು. ಕನ್ಯಾಸ್ತ್ರೀಯರನ್ನು ಹಿಂಸಿಸಿದ ಜ್ಯೋತಿ ಶರ್ಮಾಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಮಂಗಳೂರಿನ ಸೈಂಟ್ ಅನ್ನಾ ಪ್ರಾವಿಡೆನ್ಸ್‌ನ ಸಿಸ್ಟರ್ ಸೆವೆರಿನ್ ಮೆನೆಜಸ್ ಮಾತನಾಡಿ ‘ಕ್ರಿಶ್ಚಿಯನ್ ಸಂಸ್ಥೆಗಳು ಜನರ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಉನ್ನತಿಯೊಂದಿಗೆ ಅತ್ಯಂತ ದುರ್ಬಲರ ಸೇವೆ ಮಾಡುತ್ತದೆ ಎಂದು ಹೇಳಿದರು.
ಕೆಥೊಲಿಕ್‌ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ , ಕೆಥೊಲಿಕ್ ಸಭಾ ಮಂಗಳೂರು ಪ್ರಾಂತ್ಯದ ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಆಲ್ವಿನ್ ಡಿ ಸೋಜ ಕಾರ್ಯದರ್ಶಿ ವಿಲ್ಮಾ ಮೊಂತೆೆರೊ ಮಾತನಾಡಿದರು.
ಮಾಜಿ ಶಾಸಕ ಜೆ.ಆರ್. ಲೋಬೊ, ಕ್ರೈಸ್ತ ಧರ್ಮಗುರುಗಳು, ಭಗಿನೀಯರು ಮತ್ತಿತರು ಭಾಗವಹಿಸಿ ದ್ದರು. ಕೆಥೊಲಿಕ್ ಸಭಾ ಮಂಗಳೂರಿನ ಅಧ್ಯಕ್ಷ ಸಂತೋಷ್ ಡಿ ಸೋಜ ಸ್ವಾಗತಿಸಿದರು. ಕೆೆಥೊಲಿಕ್ ಸಭಾದ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಧ್ಯಕ್ಷ ರೊಲ್ಪಿ ಡಿ ಕೋಸ್ಟಾ ಅವರು ಪ್ರಾಸ್ತಾವಿಕವಾಗಿ ಮಾಡಿದರು.