ಮಂಗಳೂರು | ಸ್ಕೇಟಿಂಗ್ ನೃತ್ಯದ ಮೂಲಕ ವಿಶ್ವ ದಾಖಲೆಗೈದ ವಿದ್ಯಾರ್ಥಿನಿ ಸುಶ್ರವ್ಯಾ
ಮಂಗಳೂರು, ಡಿ.12: ನಗರದ ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸುಶ್ರವ್ಯಾ ಸ್ಕೇಟಿಂಗ್ ನೃತ್ಯದ ಮೂಲಕ ವಿಶ್ವ ದಾಖಲೆಗೈದಿದ್ದಾರೆ.
ಶುಕ್ರವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಿರಂತರ ಸ್ಕೇಟಿಂಗ್ ನಲ್ಲಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಸೇರ್ಪಡಿಗೊಳಿಸಿದ್ದಾರೆ.
ಮಂಗಳೂರು ಸಮೀಪದ ಚಿಲಿಂಬಿಯ ಉದಯ್ ಕುಮಾರ್ ಮತ್ತು ಶಶಿರೇಖಾ ಎಸ್. ಅವರ ಪುತ್ರಿ ಸುಶ್ರಾವ್ಯ ಪ್ರಸಕ್ತ ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈಕೆಯ ಪರಿಶ್ರಮ ಮತ್ತು ಕಲಾಸಾಧನೆಗೆ ಜಾಗತಿಕ ಮಾನ್ಯತೆ ಲಭಿಸಿದೆ.
ಶುಶ್ರಾವ್ಯ ಕಳೆದ 14 ವರ್ಷಗಳಿಂದ ಸ್ಕೇಟಿಂಗ್ ಕ್ಷೇತ್ರದಲ್ಲಿ ಗುರುಗಳಾದ ಸುಮನ್ ಶ್ರೀಕಾಂತ್ರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ ಭಾರತೀಯ ಶಾಸ್ತ್ರೀಯ ನೃತ್ಯದ ಜೂನಿಯರ್ ಪರೀಕ್ಷೆಯನ್ನು ಪ್ರಥಿಮಾ ಶ್ರೀಧರ್ ಮಾರ್ಗದರ್ಶನದಲ್ಲಿ ಹಾಗೂ ಸೀನಿಯರ್ ಪರೀಕ್ಷೆಯನ್ನು ಸುರೇಶ್ ಅಟ್ಟಾವರ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸ್ವತಃ ಕಲಾತ್ಮಕ ಸ್ಕೇಟಿಂಗ್ ಕಲಿತು ಅಭ್ಯಾಸ ಮಾಡುತ್ತಿದ್ದಾರೆ. ತಾಲೂಕು ಮಟ್ಟದ ವಿದ್ಯಾಭಾರತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ನಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೊತೆಗೆ SGFI (School Games Federation of India) ಮಟ್ಟಕ್ಕೂ ಆಯ್ಕೆಯಾಗಿದ್ದರು.
RSFI ಜಿಲ್ಲಾ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನಗಳು ಪಡೆದು ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿದ್ದಾರೆ. ಸಂತ ಆಗ್ನೆಸ್ ಪದವಿ ಕಾಲೇಜಿನಲ್ಲಿ ನಡೆದ Agnes Got Talent ಸ್ಪರ್ಧೆಯಲ್ಲೂ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.