ಬಿಜೆಪಿ ಸೋಲದೆ ದ.ಕ. ಜಿಲ್ಲೆಯ ಅಭಿವೃದ್ಧಿ ಅಸಾಧ್ಯ: ಮುನೀರ್ ಕಾಟಿಪಳ್ಳ
ಮಂಗಳೂರು: ಪ್ರಗತಿಪಥದಲ್ಲಿದ್ದ ದ.ಕ. ಜಿಲ್ಲೆ ಪ್ರಸ್ತುತ ಹತಾಶ ಸ್ಥಿತಿಗೆ ತಳ್ಳಲ್ಪಟ್ಟಿದೆ. ಬಿಜೆಪಿಯವರಿಗೆ ಸಾಮಾನ್ಯ ಜನರ ಕಷ್ಟ ತಿಳಿಯುವುದಿಲ್ಲ. ಅವರಿಗೆ ಜಿಲ್ಲೆಯ ಅಭಿವೃದ್ಧಿ ಬೇಕಾಗಿಲ್ಲ. ಭಾವನಾತ್ಮಕ ವಿಚಾರ ಮುಂದಿಟ್ಟು ರಾಜಕೀಯ ಮಾಡುತ್ತಾರೆ. ಬಿಜೆಪಿಯನ್ನು ಸೋಲಿಸದೆ ಜಿಲ್ಲೆ ಸಮಗ್ರ ಅಭಿವೃದ್ಧಿಯ ಕಡೆಗೆ ಚಲಿಸಲು ಸಾಧ್ಯವೇ ಇಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಸಿಪಿಐಎಂ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮದ ಅಂಗವಾಗಿ ನಡೆದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿ ಕಡೆಗಣನೆ, ಅರಾಜಕತೆಗೆ ಸಂಸದ ನಳಿನ್ ಕುಮಾರ್ ಕಟೀಲ್‌ರ ವೈಫಲ್ಯವೇ ಕಾರಣ ಎಂದು ಬಿಜೆಪಿ ಪರಿವಾರದ ಒಂದು ಗುಂಪು ಪ್ರಚಾರ ಮಾಡುವ ಮೂಲಕ ವೈಫಲ್ಯದಲ್ಲಿ ಬಿಜೆಪಿ ಪಕ್ಷದ ಪಾತ್ರವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೆ, ಕಳೆದ ಮೂರು ದಶಕಗಳ ಕಾಲ ಬಿಜೆಪಿ ಜನಪ್ರತಿನಿಧಿಗಳ ದುರಾಡಳಿತವೇ ತುಳುನಾಡಿನ ಇಂದಿನ ದುಸ್ಥಿತಿಗೆ ಕಾರಣ. ಜಿಲ್ಲೆಯನ್ನು ಪೂರ್ತಿಯಾಗಿ ಆರೋಗ್ಯ, ಶಿಕ್ಷಣ, ರಿಯಲ್ ಎಸ್ಟೇಟ್ ಸೇರಿದಂತೆ ಬಲಾಢ್ಯ ಶಕ್ತಿಗಳಿಗೆ ಒಪ್ಪಿಸುವಲ್ಲಿ ಬಿಜೆಪಿ ಸಂಸದ, ಶಾಸಕರ ಪಾತ್ರವೆ ದೊಡ್ಡದು. ಮತೀಯ ಅಜೆಂಡಾ ಮುಂದಿಟ್ಟು ಜನ ಸಾಮಾನ್ಯರನ್ನು ಮರಳು ಮಾಡಿ ಮತಪಡೆದು, ಬಲಾಢ್ಯ ಲಾಬಿಗಳ ಸೇವೆಯನ್ನು ನಿಷ್ಟೆಯಿಂದ ಮಾಡುವುದರಲ್ಲಿ ಬಿಜೆಪಿ ಪಳಗಿದೆ. ಇದರಿಂದ ಮತ ನೀಡಿದ ಜನಸಾಮಾನ್ಯರು ಬೀದಿಗೆ ಬಂದಿದ್ದಾರೆ ಎಂದ ಆರೋಪಿಸಿದರು.
ಬಿಜೆಪಿಯವರಿಂದ ದುರಾಡಳಿತ, ಕಮಿಷನ್ ದಂಧೆ ನಡೆಯುತ್ತಿದೆ. ಬಿಜೆಪಿ ಮುಖಂಡರ ಹಿಂಬಾಲಕರು ಮಟ್ಕಾ, ಮರಳು ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಜನರ ತೆರಿಗೆಯ ಹಣ ಪೋಲು ಮಾಡಲಾಗುತ್ತಿದೆ. ಮರಳು ಸಮಸ್ಯೆಯ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಿಲ್ಲ. ಬದಲಾಗಿ ಹೊರ ರಾಜ್ಯದ ಕಾರ್ಮಿಕರಿಂದ ಜೀತ ಮಾಡಿಸಲಾಗುತ್ತಿದೆ. ವಸತಿ ಯೋಜನೆ ಜಾರಿಗೊಳಿಸಿಲ್ಲ. ಮೀನುಗಾರರ ಸಮಸ್ಯೆಗಳಿಗೂ ಸ್ಪಂದಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರು ಬಿಜೆಪಿಯ ಜನವಿರೋಧಿ ರಾಜಕಾರಣವನ್ನು ಸೋಲಿಸಲು ಒಂದಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸತತ ಒಂಬತ್ತು ಭಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದಿದೆ. ಈ ಅವಧಿಯಲ್ಲಿ ಜನಸಾಮಾನ್ಯರ ಪ್ರಶ್ನೆಗಳು ಪೂರ್ತಿಯಾಗಿ ಕಡೆಗಣಿಸಲ್ಪಟ್ಟು ಅವರ ಬದುಕು ನಲುಗಿ ಹೋಗಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ವೃತ್ತದಿಂದ ಮೆರವಣಿಯಲ್ಲಿ ಸಾಗಿ ಮಿನಿ ವಿಧಾನ ಸೌಧದ ಮುಂಭಾಗ ಬಹಿರಂಗ ಸಭೆ ನಡೆಯಿತು. ಮೆರವಣಿಗೆಯಲ್ಲಿ ಬಿಜೆಪಿ ವೈಫಲ್ಯಗಳನ್ನು ವಿರುದ್ಧ ಘೋಷಣೆ ಹಾಕಲಾಯಿತು.
ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ಪ್ರಮುಖರಾದ ಪದ್ಮಾವತಿ ಶೆಟ್ಟಿ, ವಸಂತ ಆಚಾರಿ, ಕೃಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೊಟ್ಟು, ಸದಾಶಿವ, ಜಯಂತಿ ಶೆಟ್ಟಿ, ರಮಣಿ ಮೂಡುಬಿದಿರೆ, ವಸಂತಿ, ಯೋಗೀಶ್ ಜೆಪ್ಪಿನಮೊಗರು, ಕೃಷ್ಣಪ್ಪ ಸಾಲ್ಯಾನ್ ಮೊದಲಾದವರು ಪಾಲ್ಗೊಂಡಿದ್ದರು.
ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಬಜಾಲ್ ವಂದಿಸಿದರು.