ನಾನು ತಪ್ಪು ಮಾಡಿಲ್ಲ, ಹಗೆತನದಿಂದ ನನ್ನ ಮೇಲೆ ಸುಳ್ಳು ಆರೋಪ : ಮನ್ಸೂರ್ ಅಲಿ
ಮನ್ಸೂರ್ ಅಲಿ
ಮಂಗಳೂರು: ನಾನು ತಪ್ಪು ಮಾಡಿಲ್ಲ. ನನ್ನ ಮೇಲೆ ಪೂರ್ವದ್ವೇಷದ ಕಾರಣಕ್ಕಾಗಿ ಲೈಂಗಿಕ ದೌರ್ಜನ್ಯದ ಬಗ್ಗೆ ಸುಳ್ಳು ಆರೋಪ ಮಾಡಲಾಗಿದೆ. ಉರ್ವಾ ಪೊಲೀಸ್ ಠಾಣೆಗೆ ಹಾಜರಾಗಿ ತನಿಖಾಧಿಕಾರಿಗೆ ಹೇಳಿಕೆ ನೀಡಿರುವುದಾಗಿ ಮಂಗಳೂರು ಮೂಡಾ ಆಯುಕ್ತ ಮನ್ಸೂರ್ ಅಲಿ ತಿಳಿಸಿದ್ದಾರೆ.
ಕಚೇರಿಯ ಹೊರಗುತ್ತಿಗೆ ಸಿಬ್ಬಂದಿ ಮಹಿಳೆಯ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಸುದ್ದಿಗಾರರಲ್ಲಿ ಪ್ರತಿಕ್ರಿಯೆ ನೀಡಿರುವ ಆಯುಕ್ತ ಮನ್ಸೂರ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ಮೂಡಾ ಕಚೇರಿಯಲ್ಲಿ ಡಿ.27ರಂದು ನಡೆದ ಸಾಮಾನ್ಯ ಸಭೆಯ ನಡಾವಳಿ ಬರೆದುಕೊಡುವಂತೆ ತನ್ನ ಮೇಲೆ ಆರೋಪ ಮಾಡಿದ್ದ ಮಹಿಳೆಗೆ ನಾನು ತಿಳಿಸಿದ್ದೆ. ಆದರೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಅವರು ಮಾಡಲಿಲ್ಲ. ಈ ಕಾರಣಕ್ಕಾಗಿ ಸರಿಯಾಗಿ ಕೆಲಸ ಮಾಡುವುದಿದ್ದರೆ ಇಲ್ಲಿರಿ, ಇಲ್ಲಾಂದ್ರೆ ಬೇರೆಯವರು ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದೆ. ಅಲ್ಲದೆ ಇವರ ಬದಲಿಗೆ ಬೇರೆ ಸಿಬ್ಬಂದಿ ನೀಡುವಂತೆ ಹೊರಗುತ್ತಿಗೆ ಏಜನ್ಸಿಗೆ ತಿಳಿಸಿರುವುದಾಗಿ ಆಯುಕ್ತರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆ ಕೆಲಸ ಕಳೆದುಕೊಳ್ಳುವ ಭಯದಲ್ಲಿ, ನನ್ನ ಮೇಲೆ ಹಗೆತನದಿಂದ ಈ ರೀತಿ ದೂರು ಕೊಟ್ಟಿದ್ದಾರೆ.
ತನಿಖಾಧಿಕಾರಿ ಮುಂದೆ ಹಾಜರಾಗಿ ವಿವರವಾದ ಮಾಹಿತಿ ನೀಡಿದ್ದೇನೆ. ವಿಷಯ ಮೇಲಾಧಿಕಾರಿಗಳಿಗೂ ತಿಳಿಸಿದ್ದೇನೆ. ಮುಂದೆ ತನಿಖಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮನ್ಸೂರ್ ಅಲಿ ತಿಳಿಸಿದ್ದಾರೆ.