ವಿವಾದಿತ ಕುಡುಪು ಗ್ರಾಮದ ಜಮೀನಿನ ಕಡತ ವಿಲೇವಾರಿಗೆ ಆದೇಶ ನೀಡದಿರಿ: ಸಮಾನ ಮನಸ್ಕ ಸಂಘಟನೆಗಳಿಂದ ಲೋಕಾಯುಕ್ತಕ್ಕೆ ಮನವಿ

Update: 2024-03-28 14:06 GMT

ಮಂಗಳೂರು: ಕುಡುಪು ಗ್ರಾಮದ ಜಮೀನಿನ ಟಿಡಿಆರ್‌ಗೆ ಸಂಬಂಧಿಸಿ ಭಾರೀ ಭ್ರಷ್ಟಾಚಾರ ನಡೆದಿರುವ ಅನುಮಾನವಿರುವ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತವನ್ನು ವಿಲೇವಾರಿ ಮಾಡಲು ಸೂಚನೆ ಅಥವಾ ಆದೇಶ ನೀಡಬಾರದು ಎಂದು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಸಂಚಾಲಕ ಮುನೀರ್ ಕಾಟಿಪಳ್ಳ ಮಂಗಳೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಸ್ಧ ಹಾಗೂ ಬಿಲ್ಡರ್ ಗಿರಿಧರ್ ಶೆಟ್ಟಿ ಎಂಬವರ ದೂರಿನ ಆಧಾರದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡ) ಆಯುಕ್ತಕರಾದ ಮನ್ಸೂರ್ ಅಲಿ ಇವರನ್ನು 25 ಲಕ್ಷ ರೂ. ಲಂಚದ ಬೇಡಿಕೆ ಆರೋಪದಲ್ಲಿ ಬಂಧಿಸಿರುವುದು ತಿಳಿದು ಬಂದಿದೆ.

ಮುಡಾ ಆಯುಕ್ತರಾದ ಮನ್ಸೂರ್ ಅಲಿರವರ ಬಂಧನವು ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನನ್ನು ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಿರುವ ಜಮೀನಿನ ಮೌಲ್ಯದ ಬದಲಾಗಿ ಅದರ ಮೌಲ್ಯವನ್ನು ಟಿಡಿಆರ್ ಸರ್ಟಿಫಿಕೇಟ್ ಮೂಲಕ ನೀಡಲು ಮಹಾನಗರ ಪಾಲಿಕೆ ಒಪ್ಪಿಕೊಂಡಿದ್ದು ಅದರಂತೆ ಟಿಡಿಆರ್ ಸರ್ಟಿಫಿಕೆಟನ್ನು ನೀಡಲು ಮುಡ ಆಯುಕ್ತರಿಗೆ ನಿರ್ದೇಶಿಸಿ ಅದರ ಕಡತವನ್ನು ವರ್ಗಾವಣೆ ಮಾಡಿದ್ದಾಗಿಯೂ ಆ ಕಡತವು ಫೆಬ್ರವರಿ 2024ರಿಂದ ಮುಡ ಆಯುಕ್ತರ ಕಚೇರಿಯಲ್ಲಿ ಇರುವುದಾಗಿಯೂ ಸದರಿ ಕಡತಕ್ಕೆ ಸಹಿ ಮಾಡಲು ಮುಡ ಆಯುಕ್ತರಾದ ಮನ್ಸೂರ್ ಅಲಿರವರು 25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿರುವುದಾಗಿ ಪತ್ರಿಕೆಯಲ್ಲಿ ವರದಿಯಾಗಿತ್ತು.

ಟಿಡಿಆರ್ ವಿಚಾರವಾಗಿ ಈಗಾಗಲೇ ಭೂ ವ್ಯವಹಾರ ಮಾಡುವ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಸಾಮಾನ್ಯವಾಗಿ ಸ್ಧಳೀಯ ಸರಕಾರಿ ಸಂಸ್ಥೆಗಳು ಸಾರ್ವಜನಿಕರಿಗೆ ಅತಿ ಅವಶ್ಯಕವಾಗಿ ಮಾಡಬೇಕಾಗಿರುವ ಕೆಲಸ ರಸ್ತೆ, ಚರಂಡಿ ಮುಂತಾದ ಮೂಲಭೂತ ಸೌಕರ್ಯಗಳಿಗೆ ಸಂಬಂಧಪಟ್ಟ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಸರಕಾರದ ಯೋಜನೆಗಳು ವಿಳಂಬವಾಗಬಾರದೆಂಬ ಕಾರಣಕ್ಕೆ ಮತ್ತು ಯೋಜನೆಗಳಿಗೆ ಅಗತ್ಯವಾದ ಸಣ್ಣಪುಟ್ಟ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಭೂಮಾಲಿಕರಿಗೆ ತೊಂದರೆಯಾಗಬಾರದೆನ್ನುವ ಕಾರಣಗಳಿಂದ ಅವರ ಭೂಮಿಯನ್ನು ಅಭಿವೃಧಿ ಪಡಿಸುವ ಸಮಯ ಅನುಕೂಲ ಒದಗಿಸಿ ಕೊಡುವ ಸಲುವಾಗಿ ಅವರಿಗೆ ಟಿಡಿಆರ್ ನೀಡಿ, ಅವರಿಂದ ಸ್ವಾಧೀನ ಪಡಿಸಿಕೊಂಡ ಜಮೀನಿನ ಮೌಲ್ಯಕ್ಕೆ ನಷ್ಟವಾಗದಂತೆ ನ್ಯಾಯವನ್ನು ಒದಗಿಸಿಕೊ ಡಲು ಪ್ರಯತ್ನಿಸುತ್ತಾರೆ.

ಆದರೆ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ವಿಸ್ತೀರ್ಣದ ಜಮೀನಿನ ಮಂಗಳೂರು ಮಹಾನಗರ ಪಾಲಿಕೆ ಸ್ವಾಧೀನ ಪಡಿಸಿಕೊಂಡು ಆ ಭೂಮಿಯ ಹಣದ ಮೌಲ್ಯದ ಬದಲಾಗಿ ಭೂಮಾಲಿಕರಿಗೆ ಟಿಡಿಆರ್ ಸರ್ಟಿಫಿಕೇಟ್ ಕೊಡಲು ಮಾಡಿಕೊಂಡ ಒಪ್ಪಂದ ಮತ್ತು ನಿರ್ಧಾರಗಳು ಟಿಡಿಆರ್ ನಿಯಮಾವಳಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ರುತ್ತದೆ ಮತ್ತು ಇದು ಮಂಗಳೂರು ಮಹಾನಗರ ಪಾಲಿಕೆಯ ಕಾನೂನುಬಾಹಿರ ನಡೆ ಎಂಜು ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಆ ಭೂಮಿಯ ಟಿಡಿಆರ್‌ಗಾಗಿ ಮತ್ತು ಆ ಕಡತದ ವಿಲೇವಾರಿಗಾಗಿ ಮುಡ ಆಯುಕ್ತರನ್ನು ವಿನಂತಿಸಿರುವ ವ್ಯಕ್ತಿ ಮಂಗಳೂರಿನಲ್ಲಿ ಭೂ ವ್ಯವಹಾರವನ್ನು ವೃತ್ತಿಪರವಾಗಿ ನಡೆಸುವವರಾಗಿದ್ದು, ಈತ ಕೊಟ್ಟಾರ ಚೌಕಿ, ಸುರತ್ಕಲ್, ಮುಲ್ಕಿ ಇತ್ಯಾದಿ ಕಡೆಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸವನ್ನು ಮಾಡಿಕೊಂಡು ರಿಯಲ್ ಎಸ್ಟೇಟ್ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಜಮೀನಿನ ಮೂಲ ಮಾಲಿಕರಿಂದ ಭೂ ವ್ಯವಹಾರ ಬಗ್ಗೆ ಒಪ್ಪಂದ ಮಾಡಿಕೊಂಡು, ಸದ್ರಿ ಭೂಮಿಯ ಟಿಡಿಆರ್ ಅನ್ನು ತನ್ನ ಪರವಾಗಿ ನೀಡಲು ಬೇಡಿಕೆ ಇಟ್ಟಿರುವುದು ನಿಯಮಬದ್ಧವಾಗಿರುವುದಿಲ್ಲ. ಟಿಡಿಆರ್ ನಿಯಮದಲ್ಲಿ ಮೂಲ ಮಾಲಕನ ಬದಲಿಗೆ ಮಧ್ಯವರ್ತಿ, ಜಮೀನಿನ ಎಗ್ರಿಮೆಂಟ್ ಹೋಲ್ಡರ್‌ನೊಂದಿಗೆ ವ್ಯವಹಾರ ಕುದುರಿಸಲು ಅವಕಾಶವಿರುವುದಿಲ್ಲ. ಈ ಜಿಲ್ಲೆಯ ಕೆಲವು ರಾಜಕೀಯ ವ್ಯಕ್ತಿಗಳು ಈ ವ್ಯವಹಾರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಿರಿಧರ್ ಶೆಟ್ಟಿ ಮೂಲ ಮಾಲೀಕರೊಂದಿಗೆ 7 ಕೋಟಿ ರೂಪಾಯಿ ಮೌಲ್ಯಕ್ಕೆ ಜಮೀನು ಖರೀದಿಸುವ ಕುರಿತು ಮಾತುಕತೆ ನಡೆಸಿ 1 ಕೋಟಿ ರೂಪಾಯಿ ಮುಂಗಡ ನೀಡಿ ಎಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಈಗ ಮಂಗಳೂರು ನಗರ ಪಾಲಿಕೆ ಗಿರಿಧರ್ ಶೆಟ್ಟಿಗೆ ನೀಡಲು ಒಪ್ಪಿಕೊಂಡಿರುವ ಟಿಡಿಆರ್‌ನ ಮಾರುಕಟ್ಟೆ ಮೌಲ್ಯ ಸುಮಾರು 50 ಕೋಟಿ ರೂ. ಎನ್ನಲಾಗಿದೆ. ಈ ಟಿಡಿಆರ್‌ನ್ನು ರಾಜಕೀಯ ವ್ಯಕಿಗಳು ಮಾಡಿಕೊಂಡಿರುವ ಬೇನಾಮಿ ಹೂಡಿಕೆಯ ಕಟ್ಟಡಗಳಿಗೆ ಬಳಸಲು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಚರ್ಚೆಗಳು ನಗರದಲ್ಲಿ ನಡೆಯುತ್ತಿದೆ. ಗಿರಿಧರ್ ಶೆಟ್ಟಿಗೆ ಬಹಳಷ್ಟು ಪ್ರಭಾವಿ ರಾಜಕಾರಣಿ ಹಾಗೂ ಜನಪ್ರತಿನಿಧಿಗಳ ಒಡನಾಟ ಇದೆ. ಈತ ಖರೀದಿಸುವ ಜಮೀನಿನಲ್ಲಿ ಅಂತಹ ರಾಜಕೀಯ ನಾಯಕರುಗಳ ಹೂಡಿಕೆ ಇರುವ ಸಾಧ್ಯತೆಗಳಿವೆ. ಮೇಲ್ಕಂಡ ಜಮೀನಿನಲ್ಲಿಯೂ ಪ್ರಭಾವಿ ರಾಜಕಾರಣಿಗಳ, ಜನಪ್ರತಿನಿಧಿಗಳ ಹೂಡಿಕೆ ಇರುವ ಸಾಧ್ಯತೆ ಕಂಡುಬರುತ್ತಿದೆ. ಈ ಎಲ್ಲಾ ಪ್ರಭಾವಗಳು ಮೇಲ್ಕಂಡ 10.8 ಜಮೀನನ್ನು ಟಿಡಿಆರ್ ಮೌಲ್ಯದಲ್ಲಿ ವ್ಯವಹಾರ ನಡೆಸಲು ಬಳಕೆಯಾಗಿರುವುದು ಕಂಡುಬರುತ್ತದೆ.

ಮಂಗಳೂರು ಮಹಾನಗರ ಪಾಲಿಕೆ ನೀಡಿರುವ ಹೆಚ್ಚಿನ ದೊಡ್ಡ ಜಮೀನುಗಳ ಟಿಡಿಆರ್ ಸರ್ಟಿಫಿಕೇಟುಗಳು ನಿಯಮ ಬಾಹಿರವಾಗಿರುವುದು ಮತ್ತು ಅದರಲ್ಲಿ ಭ್ರಷ್ಟಾಚಾರದ ಆರೋಪಗಳಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ಟಿಡಿಆರ್ ವಿಚಾರವಾಗಿ ಈವರೆಗೆ ತೆಗೆದುಕೊಂಡಿರುವ ನಿರ್ಧಾರ ಹಾಗೂ ವಿಶೇಷವಾಗಿ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿ ರಲ್ಲಿರುವ 10.8 ಎಕರೆಗೆ ಟಿಡಿಆರ್ ನೀಡಿಕೆಯಲ್ಲಿ ಕೈಕೊಂಡ ನಿರ್ಣಯದಲ್ಲಿನ ಕಾನೂನು ಬಾಹಿರ ಕ್ರಮದ ಬಗ್ಗೆ ಸಾರ್ವಜನಿಕರಾದ ನಾವುಗಳು ಸರಕಾರ ಮತ್ತು ಸಂಬಂಧಪಟ್ಟ ಇಲಾಖೆ ಹಾಗೂ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದೇವೆ. ಕಾನೂನು ಬಾಹಿರ ಕಡತಕ್ಕೆ ಸಹಿ ಮಾಡಲು ಹಣದ ಬೇಡಿಕೆ ಇಟ್ಟಿದ್ದರೆ ಅಂತಹ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಾಗುತ್ತದೆ.

ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾದ ಗಿರಿಧರ್ ಶೆಟ್ಟಿಯೂ ಕೂಡ ತಮ್ಮ ಕಾನೂನುಬಾಹಿರ ಕಡತಕ್ಕೆ ಸುಲಭವಾಗಿ ಸಹಿ ಮಾಡಿಕೊಳ್ಳಲು ಲೋಕಾಯುಕ್ತ ಇಲಾಖೆಯನ್ನು ಬಳಸಿಕೊಂಡಿರುವ ಬಗ್ಗೆ ಕೂಡಾ ಸಾರ್ವಜನಿಕ ವಲಯದಲ್ಲಿ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಲಂಚ ಪ್ರಕರಣವನ್ನು ಕಾರಣವಾಗಿಟ್ಟುಕೊಂಡು ಟಿಡಿಆರ್‌ಗೆ ಸಹಿ ಮಾಡಿ ನೀಡುವಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಇಲಾಖೆಗಳಿಗೆ ಯಾವುದೇ ಸೂಚನೆ ಅಥವಾ ಆದೇಶಗಳನ್ನು ನೀಡಬಾರದು ಎಂದು ಅವರು ಮುನೀರ್ ಕಾಟಿಪಳ್ಳ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News