×
Ad

ಫಲ್ಗುಣಿಗೆ ಕಲುಷಿತ ನೀರು: ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಘಟಕಕ್ಕೆ ಪರಿವೀಕ್ಷಣಾ ನೋಟೀಸ್

Update: 2024-06-24 21:32 IST

ಪಣಂಬೂರು: ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಫಲ್ಗುಣಿ ನದಿಗೆ ಬಿಡುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಪಲ್ಗುಣಿ ನದಿಗೆ ಬಿಡುತ್ತಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸತತವಾಗಿ ಹೊರಾಟಗಳನ್ನು ನಡೆಸಿತ್ತು. ಅಲ್ಲದೆ ನಾಗರಿಕ ಹೋರಾಟ ಸಮಿತಿಯು ಬುಧವಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿ ದೂರು ನೀಡಿತ್ತು. ಜೊತೆಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿತ್ತು.

ಈ ಹಿನ್ನೆಲೆಯಲ್ಲಿ ರವಿವಾರ ಡಾ. ಮಹೇಶ್ವರಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕದಿಂದ ನದಿ ವಿಷಮವಾಗುತ್ತಿರುವುದು ಮನಗಂಡು ಅದರ ಮಹಜರು ನಡೆಸಿದ್ದರು. ಬಳಿಕ ಸೋಮವಾರ ಸಂಸ್ಥೆಗೆ ಪರಿವೀಕ್ಷಣಾ ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ʼವಾರ್ತಾಭಾರತಿʼ ಜೊತೆ ಮಾತ‌ನಾಡಿದ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕದಿಂದ ಜೀವನದಿ ಫಲ್ಗುಣಿ ಕಲುಶಿತವಾಗಿತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದೆವು. ಅದರಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಘಟಕವನ್ನು ಮಹಜರು ನಡೆಸಿ ಪರಿವೀಕ್ಷಣಾ ನೋಟೀಸ್ ನೀಡಿದ್ದಾರೆ. ಇಷ್ಟಕ್ಕೇ ಅಧಿಕಾರಿಗಳು ಸುಮ್ಮನಾಗುವುದು ಬೇಡ. ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಎದುರು ನಿರಂತರ ಧರಣಿ, ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

"ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿವೀಕ್ಷಣಾ ನೋಟೀಸ್ ನೀಡಿದ್ದೇವೆ. ಯಥಾ ಪ್ರತಿಯನ್ನು ಬೆಂಗಳೂರಿನ ಕಚೇರಿಗೆ ಕಳುಹಿಸಲಾಗಿದೆ. ಅವರೇ ಮುಂದಿನ ಕ್ರಮ ಕೈಗೊಳ್ಳುತ್ತಾರೆ.

-ಮಹೇಂದ್ರ, ಇಒ, ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News