×
Ad

ಸಂಸದ ಬ್ರಿಜೇಶ್ ಚೌಟ, ಸಂಸದೆ ಕನಿಮೋಳಿ ನೇತೃತ್ವದಲ್ಲಿ ವಿದೇಶ ಭೇಟಿ

Update: 2025-06-02 23:04 IST

ಮಂಗಳೂರು, ಜೂ.2: ಅಪರೇಷನ್ ಸಿಂಧೂರ್ ಬಳಿಕ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಮಹತ್ವದ ಭಾಗವಾಗಿ ಭಯೋತ್ಪಾದನೆಯ ವಿರುದ್ಧದ ಶೂನ್ಯ ಸಹಿಷ್ಣುತೆ ದೃಢ ನಿಲುವು ಸ್ಪಷ್ಟಪಡಿಸಲು ಹಾಗೂ ಅಂತಾರಾಷ್ಟ್ರೀಯ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರನ್ನು ಒಳಗೊಂಡ ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ತನ್ನ ವಿದೇಶ ಭೇಟಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮೇ 22ರಂದು ದಿಲ್ಲಿಯಿಂದ ಪ್ರಯಾಣ ಬೆಳೆಸಿದ್ದ ಸಂಸದೆ ಕನಿಮೋಳಿ ನೇತೃತ್ವದ ನಿಯೋಗವು ರಷ್ಯಾ, ಸ್ಲೊವೇನಿಯಾ, ಗ್ರೀಸ್, ಲಾಟ್ವಿಯಾ ಮತ್ತು ಸ್ಪೇನ್ ಭೇಟಿ ನೀಡಿ ವಾಪಸಾಗಿದೆ.

ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ದ ಜಾಗತಿಕವಾಗಿ ಗಮನ ಸೆಳೆಯುವ ಭಾರತದ ಅಭಿಯಾ ನದ ಪ್ರಯುಕ್ತ ನಿಯೋಗ ಐದು ರಾಷ್ಟ್ರಗಳ ಭೇಟಿಯ ಅಂತಿಮ ಹಂತವಾಗಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸುವುದರೊಂದಿಗೆ ಆರಂಭಿಸಿತ್ತು. ಮೊದಲ ದಿನ ಸ್ಪೇನ್‌ ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದೆ.

ಮುಂಬೈ ಭೀಕರ ಉಗ್ರ ದಾಳಿಯಲ್ಲಿ ಬದುಕುಳಿದಿರುವ ಸ್ಪ್ಯಾನಿಷ್ ಉದ್ಯಮಿ ಆರ್ಟುರೊ ಫೆರ್ನಾಂಡಿಸ್ ಅಲ್ವಾರೆಜ್ ಅವರು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಖಂಡಿಸುವಲ್ಲಿ ನಿಯೋಗದ ಜೊತೆಯಾಗಿದ್ದರು.

ಭೇಟಿಯ ಕೊನೆಯ ದಿನದಂದು ಯುರೋಪ್ ಕೌನ್ಸಿಲ್‌ನ ಪಾರ್ಲಿಮೆಂಟರಿ ಅಸೆಂಬ್ಲಿಯ ಉಪಾಧ್ಯಕ್ಷ ಆಂಟೋನಿಯೊ ಗುಟೈರೆಜ್ ಲಿಮೋನ್ಸ್ ನೇತೃತ್ವದ ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿ ಹಾಗೂ ಭಯೋತ್ಪಾದನೆ ಪೀಡಿತ 4,800ಕ್ಕೂ ಹೆಚ್ಚು ಸಂತ್ರಸ್ತರೊಂದಿಗೆ ನಿಂತಿರುವ ಸಂಘಟನೆ ಅಸೋಸಿಯಾಸಿಯನ್ ಡಿ ವಿಕ್ಟಿಮಾಸ್ ಡೆಲ್ ಟೆರರಿಸೊ ಹಾಗೂ ಸ್ಪ್ಯಾನಿಷ್ ಸರ್ಕಾರದ ಸದಸ್ಯರು, ಸಂಸದರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ.

ಲಾಟ್ವಿಯಾ ಭೇಟಿ: ಸ್ಪೇನ್ ಭೇಟಿಗೂ ಮುನ್ನ ನಿಯೋಗವು ಲಾಟ್ವಿಯಾಕ್ಕೆ ತೆರಳಿದ್ದು, ಅಲ್ಲಿ ಸಯೀಮಾ (ಲಾಟ್ವಿಯಾ ಗಣರಾಜ್ಯದ ಸಂಸತ್ತು)ದ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷೆ ಎಚ್.ಇ. ಇನಾರಾ ಮುರ್ನಿಸ್ , ಭಾರತದೊಂದಿಗೆ ಸಂಸದೀಯ ಸಹಕಾರ ಉತ್ತೇಜಿಸುವ ಸಯೀಮಾ ಸದಸ್ಯರ ಗುಂಪಿನ ಅಧ್ಯಕ್ಷೆ ಎಚ್.ಇ. ಇಂಗ್ರಿಡಾ ಸಿರ್ಸೆನೆ ಹಾಗೂ ಸಮಿತಿಗಳ ಸದಸ್ಯರು, ಸಯೀಮಾ ಹಿರಿಯ ಅಧಿಕಾರಿ ಗಳು, ಲ್ಯಾಟ್ವಿಯನ್ ಕಡೆಯಿಂದ ಬಾಲ್ಟಿಕ್ ಅಸೆಂಬ್ಲಿ ಪ್ರತಿನಿಧಿಗಳೊಂದಿಗೂ ಅತ್ಯಂತ ಫಲಪ್ರದ ಸಂವಾದ ನಡೆಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಕಾರ್ಯದರ್ಶಿ ಆಂಡ್ರೆಜ್ಸ್ ವಿಲುಮ್ಸನ್ಸ್ ಮತ್ತು ಲ್ಯಾಟ್ವಿಯಾದ ಯುಎನ್‌ಎಸ್‌ಸಿ ಕ್ಯಾಂಡಿಡಸಿ 2026-27ರ ವಿಶೇಷ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ವಿಭಾಗದ ನಿರ್ದೇಶಕ ರಾಯಭಾರಿ ಆಂಡ್ರೆಜ್ಸ್ ಪಿಲ್ಡೆಗೋವಿಕ್ಸ್ ಅವರನ್ನೂ ಭೇಟಿ ಮಾಡಿದೆ.

ಲಾಟ್ವಿಯಾ ರಿಗಾದಲ್ಲಿ ಭಾರತವು 2024ರ ಜುಲೈನಲ್ಲಿ ರಾಯಭಾರ ಕಚೇರಿ ತೆರೆದಿದ್ದು, ಇದರ ನಂತರ ಭಾರತದಿಂದ ಲಾಟ್ವಿಯಾಕ್ಕೆ ಭೇಟಿ ಕೊಟ್ಟ ಮೊದಲ ಉನ್ನತ ಮಟ್ಟದ ನಿಯೋಗ ಇದಾಗಿದೆ. ಉಭಯ ದೇಶಗಳ ರಾಜತಾಂತ್ರಿಕರ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಐದು ದೇಶಗಳ ಭೇಟಿ ಬಹಳ ಅವಿಸ್ಮರಣೀಯ ಅನುಭವ: ಚೌಟ

ಐದು ದೇಶಗಳ ಭೇಟಿ ಬಹಳ ಅವಿಸ್ಮರಣೀಯ ಅನುಭವ, ತೃಪ್ತಿ ನೀಡಿದೆ ಎಂದು ಸಂಸದ ಬ್ರಿಜೇಶ್ ಹೇಳಿದ್ದಾರೆ.

ಭಯೋತ್ಪಾದನೆಯನ್ನು ಪ್ರಾಯೋಜಿಸಿ, ಪೋಷಿಸಿ ಚೂ ಬಿಡುತ್ತಿರುವ ಪಾಕಿಸ್ತಾನ ಮುಖವಾಡವನ್ನು ಕಳಚುವ ಸರ್ವಪಕ್ಷ ನಿಯೋಗದ ಭಾಗವಾಗಿ ಕರ್ನಾಟಕದಿಂದ ಅದರಲ್ಲಿಯೂ ನಮ್ಮ ದಕ್ಷಿಣ ಕನ್ನಡದಿಂದ ಸಂಸದನಾಗಿ ನಿಯೋಗವನ್ನು ಪ್ರತಿನಿಧಿಸಿ ಈ ದಿಸೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನಗೆ ಅತ್ಯಂತ ಹೆಮ್ಮೆ ಹಾಗೂ ತೃಪ್ತಿ ತಂದಿದೆ.

ಯುರೋಪ್‌ನ ಹಲವು ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿರುವ ನಮ್ಮ ರಾಜತಾಂತ್ರಿಕ ಅಧಿಕಾರಿಗಳು, ಅಲ್ಲಿನ ಸರ್ಕಾರದ ಪ್ರತಿನಿಧಿಗಳು, ವಿವಿಧ ವಲಯದ ಚಿಂತಕರೊಂದಿಗೆ ನೇರ ಮಾತುಕತೆ ನಡೆಸುವು ದಕ್ಕೆ, ಆಡಳಿತಾತ್ಮಕವಾಗಿ ಅವರ ಅನುಭವಗಳಿಂದ ಅನೇಕ ವಿಷಯ ತಿಳಿಯುವ ಅವಕಾಶ ಕೂಡ ಸಿಕ್ಕಿದೆ. ಹೀಗಿರುವಾಗ, ಈ ವಿದೇಶಿ ಭೇಟಿಯು ವೈಯಕ್ತಿಕವಾಗಿ ನನ್ನ ಪಾಲಿಗೆ ಒಂದು ಹೊಸ ಅನುಭವ ಉಂಟು ಮಾಡುವ ಜತೆಗೆ ಹೆಚ್ಚು ಅವಿಸ್ಮರಣೀಯವಾಗಿಸುವಂತೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದ್ದಾರೆ.








 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News