×
Ad

ಮಂಗಳೂರು | ಹಳೆ ಬಂದರಿನಲ್ಲಿ ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿ-ಪರಿಸರ ಸಾರ್ವಜನಿಕ ಸಭೆ

ಸ್ಥಳೀಯರು, ಮೀನುಗಾರರಿಗೆ ತೊಂದರೆ ಇಲ್ಲದೆ ಕಾಮಗಾರಿಗೆ ಸಲಹೆ

Update: 2025-12-10 14:36 IST

ಮಂಗಳೂರು, ಡಿ.10: ಹಳೆ ಮಂಗಳೂರು ಬಂದರಿನಲ್ಲಿ ಕಾರ್ಗೊ ಮತ್ತು ಕ್ರೂಸ್ ಟರ್ಮಿನ್‌ಗೆ ಸಂಬಂಧಿತ ಮೂಲ ಸೌಕರ್ಯಗಳೊಂದಿಗೆ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿಯ ಅಭಿವೃದ್ಧಿಗೆ ಸ್ಥಳೀಯರು, ಮೀನುಗಾರರಿಂದ ಸಹಮತ ವ್ಯಕ್ತವಾಗಿದೆ. ಹಾಗಿದ್ದರೂ ಕಾಮಗಾರಿಯು ಸ್ಥಳೀಯ ನಾಗರಿಕರು, ಮೀನುಗಾರರು ಹಾಗೂ ಪರಿಸರಕ್ಕೆ ಪೂರಕವಾಗಿ ನಡೆಯುವುದನ್ನು ಖಾತರಿಪಡಿಸಬೇಕೆಂಬ ಸಲಹೆ ವ್ಯಕ್ತವಾಗಿದೆ.

ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಮಂಗಳೂರು ಹಳೆ ಬಂದರಿನ ದಕ್ಷಿಣ ವಾರ್ಫ್‌ನ ಗೋದಾಮಿನಲ್ಲಿ ಬುಧವಾರ ಈ ಬಗ್ಗೆ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ಸ್ಥಳೀಯ ನಾಗರಿಕರು, ಮೀನುಗಾರರು ಅಭಿವೃದ್ಧಿಗೆ ಬೆಂಬಲ ಸೂಚಿಸುವುದಾಗಿ ಹೇಳಿದರಲ್ಲದೆ, ನಮ್ಮ ಮಂಗಳೂರು ಕೂಡಾ ಸಿಂಗಾಪುರ, ದುಬೈ ರೀತಿಯಲ್ಲಿ ಅಭಿವೃದ್ಧಿ ಆಗುವ ಕನಸು ಹೊತ್ತಿರುವುದಾಗಿ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಡ್ರೆಜ್ಜಿಂಗ್ ಬಹು ಮುಖ್ಯ :

ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ ಅಭಿವೃದ್ಧಿ ಕಾಮಗಾರಿಗೆ 2 ವರ್ಷಗಳ ಹಿಂದೆಯೇ ಅನುಮೋದನೆ ದೊರಕಿದೆ. ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳು ವಿಳಂಬ ಆಗುತ್ತಿರುವುದೇಕೆ ಎಂದು ಟ್ರಾಲ್ ಬೋಟ್ ಅಸೋಸಿಯೇಶನ್ ಅಧ್ಯಕ್ಷ ಚೇತನ್ ಬೆಂಗ್ರೆ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಈ ಹಿಂದೆ ನಡೆದ ಸಭೆಯಲ್ಲಿ ಈ ಬಗ್ಗೆ ನೀವು ಈ ಪ್ರಸ್ತಾವಿಸಿದ್ದರಿಂದಲೇ ಈ ವಿಷಯ ಗೊತ್ತಾಗಿರುವುದು. ಇನ್ನು ಪ್ರಕ್ರಿಯೆಗಳು ವೇಗ ಪಡೆಯಲಿದೆ ಎಂದರು.

ಇಲ್ಲಿ ಬಹು ಮುಖ್ಯವಾಗಿ ಡ್ರೆಜ್ಜಿಂಗ್ ನಡೆಯಬೇಕು. ಜತೆಗೆ ಈ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಯಾಣಿಕ ಜೆಟ್ಟಿ(ಫೆರ್ರಿ)ಯನ್ನು 300 ಮೀಟರ್ ದೂರಕ್ಕೆ ಸ್ಥಳಾಂತರಿಸುವ ಪ್ರಸ್ತಾಪದ ಬಗ್ಗೆ ಸ್ಥಳೀಯ ಮುಖಂಡರ ಜತೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಫೆರ್ರಿ ಸ್ಥಳಾಂತರ ಬೇಡ :

ಕಸಬಾ ಬೆಂಗ್ರೆ ಜಮಾಅತ್ ಅಧ್ಯಕ್ಷ ಬಿಲಾಲ್ ಮುಹಮ್ಮದ್ ಮಾತನಾಡಿ, ಇಲ್ಲಿ 30,000 ಜನಸಂಖ್ಯೆ ಇದೆ. ಮೀನಿನ ವ್ಯಾಪಾರಿಗಳು, ಮೀನು ಹಿಡಿಯುವವರು, ಕೂಲಿ ಕಾರ್ಮಿಕರು ಸೇರಿದಂತೆ ಶಾಲೆ ಕಾಲೇಜಿಗೆ ಹೋಗುವ ಮಕ್ಕಳಿದ್ದಾರೆ. ಆದರೆ, ಯಾವುದೇ ಯೋಜನೆಗೆ ಮುಂಚಿತವಾಗಿ ಸ್ಥಳೀಯರಿಗೆ, ಮೀನುಗಾರರಿಗೆ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ನೀಡುವುದಿಲ್ಲ. ಅಭಿವೃದ್ಧಿಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿ ಜನಸಾಮಾನ್ಯರ ಸಂಪರ್ಕ ಸೇತುವಾದ ಫೆರ್ರಿಯನ್ನು 300 ಮೀಟರ್‌ನಂತೆ ದೂರಕ್ಕೆ ತಳ್ಳುತ್ತಾ ಹೋದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಹೇಗೆ ಎಂದು ಪ್ರಶ್ನಿಸಿದರು.

ಸಾಂಪ್ರದಾಯಿಕ ದೋಣಿ ತಂಗಲು ಸೂಕ್ತ ವ್ಯವಸ್ಥೆ :

ಯೋಜನೆ ಕುರಿತಂತೆ ಸ್ಥಳೀಯರು ಹಾಗೂ ಮೀನುಗಾರರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲಾಗಿಲ್ಲ. ಜನರನ್ನು ಮರೆಮಾಚಿ ಈ ಯೋಜನೆ ಮಾಡಲು ಸರಕಾರ ಮುಂದಾಗಿದೆಯೇ ಎಂದು ಸ್ಥಳೀಯರಾದ ತಯ್ಯೂಬ್ ಬೆಂಗ್ರೆ ಪ್ರಶ್ನಿಸಿದರು.

ಅಭಿವೃದ್ಧಿ ಆಗಬೇಕು, ಆದರೆ ಸ್ಥಳೀಯರು ಹಲವಾರು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಏನು, ಈಗಾಗಲೇ ಬೆಂಗ್ರೆಯಲ್ಲಿ ಕಾರ್ಗೊ ಟರ್ಮಿನಲ್ ಕಾಮಗಾರಿ ನಡೆಸಲಾಗಿತ್ತು. ಇಲ್ಲಿ ಸಮಸ್ಯೆ ಎಂದು ಹೇಳಿ ಅಲ್ಲಿ ಯೋಜನೆ ನಡೆಸಲಾಗಿತ್ತು. ಇದೀಗ ಮತ್ತೆ ಇಲ್ಲಿ ಅಭಿವೃದ್ಧಿ ಪ್ರಸ್ತಾವ. ಈ ರೀತಿ ನದಿಯನ್ನು, ಪ್ರಕೃತಿಯನ್ನು ನಾಶ ಮಾಡುವ ಕಾರ್ಯಗಳಿಂದ ಇಲ್ಲಿನ ಸ್ಥಳೀಯರು ತೊಂದರೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆ ಮಾತನಾಡುತ್ತಿಲ್ಲ. ನಾಡದೋಣಿ, ಸಾಂಪ್ರದಾಯಿಕ ದೋಣಿಗಳಿಗೆ ತಂಗಲು ಜಾಗವಿಲ್ಲದೆ ಈಗಾಗಲೇ ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಸಾಂಪ್ರದಾಯಿಕ ದೋಣಿಗಳು ತಂಗಲು ಸೂಕ್ತ ಜಾಗವನ್ನು ತೋರಿಸಿದರೆ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ನಿರುಪಯುಕ್ತ ಜಾಗ ಬಳಕೆಗೆ ಆದ್ಯತೆ ನೀಡಿ :

ಕಾರ್ಗೊ ಕ್ರೂಸ್ ಟರ್ಮಿನಲ್‌ಗೆ ನಮ್ಮ ವಿರೋಧ ಮುಂದುವರಿಯಲಿದೆ ಎಂದು ಹೇಳಿದ ಹಳೆಬಂದರು ಶ್ರಮಿಕರ ಸಂಘದ ಮುಖಂಡ ಬಿ.ಕೆ.ಇಮಿಯಾಝ್, ಈ ಪ್ರದೇಶದಲ್ಲಿ ಈ ಯೋಜನೆ ಪ್ರಾಯೋಗಿಕವಲ್ಲ ಎಂದರು.

ದಕ್ಷಿಣ ವಾರ್ಫ್‌ನಲ್ಲಿ ಹಾಗೂ ಉತ್ತ ವಾರ್ಫ್‌ನಲ್ಲಿ ಸಾಕಷ್ಟು ಜಾಗವಿದ್ದರೂ ಅದನ್ನು ಬಳಕೆ ಮಾಡಲಾಗುತ್ತಿಲ್ಲ. ಮೊದಲು ನಿರುಪಯುಕ್ತ ಜಾಗ ಬಳಕೆಗೆ ಆದ್ಯತೆ ನೀಡಿ ಎಂದು ಅವರು ಸಲಹೆ ನೀಡಿದರು.

ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, 2022ರಲ್ಲಿ ಅನುಮೋದನೆಗೊಂಡಿರುವ ಯೋಜನೆಗೆ ಸಿಆರ್‌ಝೆಡ್ ಅನುಮತಿ ದೊರಕಿದೆ. ಪರಿಸರ ಅನುಮತಿಬೇಕಾಗಿದೆ. ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ ಅಭಿವೃದ್ಧಿಯನ್ನು 65 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಜಲ ಸಾರಿಗೆ ಮಂಡಳಿಯಿಂದ ನಿರ್ವಹಿಸಲು ಉದ್ದೇಶಿಸಲಾಗಿದೆ. ಕಾಮಗಾರಿ ಅನುಮೋದನೆ ದೊರಕಿ 24 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಡ್ರೆಜ್ಜಿಂಗ್ ಆಗದೆ ಯಾವ ಸಮಸ್ಯೆಯೂ ಬಗೆಹರಿಯದು :

ಹಿಂದೆ ಇಲ್ಲಿ ಸುಮಾರು 40ರಷ್ಟು ಕಾರ್ಗೊ ಹಾಗೂ ಕ್ರೂಸ್ ಶಿಪ್‌ಗಳು ಬರುತ್ತಿತ್ತು. ಈಗ ಅದು 14ಕ್ಕೆ ಇಳಿಕೆಯಾಗಿದೆ. ಹಳೆ ಬಂದರು ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ಆಗದೆ ಮೀನುಗಾರರು ಸತತವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಡ್ರೆಜ್ಜಿಂಗ್ ಆಗದೆ ಯಾವ ಸಮಸ್ಯೆಯೂ ಬಗೆಹರಿಯದು. ಪ್ರತಿ ವರ್ಷವೂ ಈ ಬಾರಿ ಆಗುತ್ತದೆ ಎಂಬ ಭರವಸೆ ಮಾತ್ರ ಸಿಗುತ್ತಿದೆಯೇ ಹೊರತು ಡ್ರೆಜ್ಜಿಂಗ್ ಆಗುತ್ತಿಲ್ಲ ಎಂದು ಸ್ಥಳೀಯರಾದ ಎ.ಕೆ. ಉಸ್ಮಾನ್ ಹೇಳಿದರು.

9 ಬಾರಿ ಟೆಂಡರ್ ಆಗಿದ್ದರೂ ಯಾರೂ ಪಾಲ್ಗೊಳ್ಳದೆ ಸಮಸ್ಯೆ ಆಗಿತ್ತು. ಇದೀಗ ಟೆಕ್ನಿಕಲ್ ಬಿಡ್ ಕಾರ್ಯ ನಡೆದಿದೆ. ಹಣಕಾಸು ಬಿಡ್ ಮಂಜೂರಾತಿ ಹಂತದಲ್ಲಿದೆ. ಮೈನಸ್ 7 ಮೀಟರ್ ಡ್ರೆಜ್ಜಿಂಗ್ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕಾರಿ ಸಭೆಯಲ್ಲಿ ತಿಳಿಸಿದಾಗ, ಒಂಭತ್ತು ಸಲ ಟೆಂಡರ್ ಕರೆಯುವಾಗ ಆಗಿರುವ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಂದ ಆಗಿಲ್ಲವೇ ಎಂದು ನಿಕಟಪೂರ್ವ ಕಾರ್ಪೊರೇಟರ್ ಅಬ್ದುಲ್ ಲತೀಫ್ ಪ್ರಶ್ನಿಸಿದರು.

ಈ ಬಾರಿ ಯಾವಾಗಾ ಡ್ರೆಜ್ಜಿಂಗ್ ಆಗಲಿದೆ ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಪಪಡಿಸಬೇಕು ಎಂದು ಎ.ಕೆ. ಉಸ್ಮಾನ್‌ರವರು ಆಗ್ರಹಿಸಿದಾಗ, ಈ ಬಗ್ಗೆ ಖುದ್ದು ನಾನೇ ಫಾಲೋಅಪ್ ಮಾಡುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್, ಬಂದರು ಇಲಾಖೆಯ ಅಧಿಕಾರಿ ಮನೋಹರ್ ಮೊದಲಾದವರು ಉಪಸ್ಥಿತರಿದ್ದರು.

ಜನವರಿ 2ನೆ ವಾರದಲ್ಲಿ ಸ್ಥಳೀಯ ಸಮಸ್ಯೆ ಬಗ್ಗೆ ಸಭೆ:  ಜಿಲ್ಲಾಧಿಕಾರಿ

ಕಳೆದ ಎರಡು ವರ್ಷಗಳಿಂದ ಇಲ್ಲಿ ಡ್ರೆಜ್ಜಿಂಗ್‌ಗಾಗಿ ಬೇಡಿಕೆ ಇಡುತ್ತಿದ್ದರೂ ಇನ್ನೂ ಆಗಿಲ್ಲ. ಈಗಾಗಲೇ ಮೀನುಗಾರಿಕಾ ದೋಣಿಗಳು ಇಲ್ಲಿ ತೊಂದರೆ ಅನುಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಿದ್ದರೆ ಹಳೆ ಬಂದರು ಅಭಿವೃದ್ಧಿಯ ನಮ್ಮ ಕನಸು ಯಾವತ್ತೋ ನನಸಾಗುತ್ತಿತ್ತು ಎಂದು ಸ್ಥಳೀಯ ನಿಕಟಪೂರ್ವ ಕಾರ್ಪೊರೇಟರ್ ಅಬ್ದುಲ್ ಲತೀಫ್ ಅಸಮಾಧಾನ ವ್ಯಕ್ತಪಡಿಸಿದರು.

ಮಾತ್ರವಲ್ಲದೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಇಲ್ಲಿ ಪ್ರತ್ಯೇಕ ಸಭೆಯ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕು ಎಂದು ಹೇಳಿದಾಗ, ಜನವರಿ 2ನೆ ವಾರದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತಂತೆ ಪ್ರತ್ಯೇಕ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭರವಸೆ ನೀಡಿದರು. 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News