×
Ad

ಬಜ್ಪೆ ಪಪಂ ಚುನಾವಣೆ: ಕಾಂಗ್ರೆಸ್‌ನಲ್ಲಿ ಬಂಡಾಯ ಪಕ್ಷೇತರರಾಗಿ 7 ಮಂದಿ ನಾಮಪತ್ರ ಸಲ್ಲಿಕೆ

Update: 2025-12-10 07:15 IST

ಬಜ್ಪೆ, ಡಿ.9: ಬಜ್ಪೆ ಪಪಂಗೆ ಡಿ.21ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, 7 ಮಂದಿ ಕಾಂಗ್ರೆಸ್ ಮುಖಂಡರು ಪಕ್ಷೇತರರಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಬಜ್ಪೆ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಿತ ಕಟ್ಟಡ ಮಾಲಕ ಹಾಗೂ ಕಾಂಗ್ರೆಸ್ ನಾಯಕ ಹನೀಫ್ ಹಿಲ್‌ಟಾಪ್ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಬೀಗಜಡಿದಿದ್ದಾರೆ. ಜೊತೆಗೆ ಹಲವು ನಾಯಕರು ಕಾಂಗ್ರೆಸ್‌ಗೆ ಸಡ್ಡು ಹೊಡೆಯುವ ಸಲುವಾಗಿ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಈ ಬಾರಿ ಪಪಂ ಚುನಾವಣೆಗೆ ಹಿರಿಯ ಕಾಂಗ್ರೆಸ್ ಸದಸ್ಯ ಸಿರಾಜ್ ಬಜ್ಪೆ, ಹನೀಫ್ ಹಿಲ್ ಟಾಪ್, ಖಾದರ್ ಏರ್‌ಪೋರ್ಟ್, ಜಿಲ್ಲಾ ಇನ್‌ಟಕ್ ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ, ಲಕ್ಷ್ಮಣ್ ಸಿದ್ಧಾರ್ಥನಗರ, ಸುಹಾನ ಭಟ್ರಕೆರೆ, ಸುನೀತಾ ಅಡ್ಕಬಾರೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ, ಬಜ್ಪೆ ಗ್ರಾಪಂನಲ್ಲಿ ನಿರಂತರ ಗೆಲುವು ಸಾಧಿಸುತ್ತಾ ಬಂದಿದ್ದ ಸಿರಾಜ್ ಬಜ್ಪೆ ಸೇರಿ ಹಲವು ಮುಖಂಡರಿಗೆ ಕಾಂಗ್ರೆಸ್ ಕೊನೇಯ ಘಳಿಗೆ ಯಲ್ಲಿ ಕೈ ಕೊಟ್ಟಿತ್ತು. ಇದೇ ಕಾರಣಕ್ಕಾಗಿ ಹನೀಫ್ ಹಿಲ್‌ಟಾಪ್ ತನ್ನ ಸ್ವಂತ ಕಟ್ಟಡದಲ್ಲಿದ್ದ ಕಾಂಗ್ರೆಸ್ ಕಚೇರಿಯ ವಸ್ತುಗಳನ್ನು ಹೊರಗೆ ಹಾಕಿ ಬೀಗಜಡಿದ್ದಾರೆ ಎಂದು ತಿಳಿದು ಬಂದಿದೆ.

ನ್ಯಾಯಕೇಳಿ ಸಂಕಷ್ಟಕ್ಕೊಳಗಾದ ಸಿರಾಜ್ ಬಜ್ಪೆ?: ಇತ್ತೀಚೆಗೆ ದುಷ್ಕರ್ಮಿಗಳಿಂದ ಕೊಲೆಗೀಡಾಗಿದ್ದ ಕೊಳತ್ತ ಮಜಲು ನಿವಾಸಿ ಅಬ್ದುಲ್ ರಹ್ಮಾನ್ ಅವರ ಪರವಾಗಿ ಕಾಂಗ್ರೆಸ್ ಸಭೆಯಲ್ಲಿ ಸ್ವ ಪಕ್ಷವನ್ನು ದೂರಿ ಮಾತನಾಡಿದ್ದಲ್ಲದೆ, ಸುದ್ದಿಗೋಷ್ಠಿ ಕರೆದು ನ್ಯಾಯಕ್ಕಾಗಿ ಒತ್ತಾಯಿಸಿದ ಸಿರಾಜ್‌ಗೆ

ಟಿಕೆಟ್ ನಿರಕಾರಿಸಲಾಯಿತು ಎಂದು ಅವರ ಅಭಿಮಾನಿ ಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಭಾರೀ ವೈರಲ್ ಆಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News