15ನೇ ಹಣಕಾಸು ಆಯೋಗದ ಅನುದಾನ | 887 ಕೋಟಿ ರೂ. ಬಾಕಿ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ: ಸಚಿವ ಯತೀಂದ್ರ ಸಿದ್ದರಾಮಯ್ಯ
ದಾವಣಗೆರೆ: 15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಕೇಂದ್ರ ಸರಕಾರದಿಂದ ಬರಬೇಕಿರುವ ಸುಮಾರು 887 ಕೋಟಿ ರೂ. ಬಾಕಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಖಾತೆ ರಾಜ್ಯ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ತೋಖನ್ ಸಾಹು ಅವರನ್ನು ಖುದ್ದಾಗಿ ಭೇಟಿಯಾಗಿ ಇಲಾಖೆಯ ಪ್ರಮುಖ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದರು.
ಕೇಂದ್ರ ಸಚಿವರು ನಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಹಿರಿಯ ಮಟ್ಟದ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಸಭೆಯ ನಂತರ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ರಾಜ್ಯದ ಹಿತದೃಷ್ಟಿಯಿಂದ ಬಾಕಿ ಹಣದ ತುರ್ತು ಅಗತ್ಯತೆಯನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಲು ಕೆಲವು ಕಠಿಣ ನಿಯಮ ಹಾಗೂ ಮಾನದಂಡಗಳಿವೆ. ಅದರಲ್ಲಿ ಪ್ರಮುಖವಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಮಂಡಳಿ ಅಸ್ತಿತ್ವದಲ್ಲಿರಬೇಕು ಎಂಬ ನಿಯಮವಿದೆ. ಆದರೆ, ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರಣಾಂತರಗಳಿಂದ ಸಕಾಲಕ್ಕೆ ಚುನಾವಣೆಗಳು ನಡೆಯದ ಕಾರಣ, ಕೇಂದ್ರ ಸರಕಾರದಿಂದ ಬರಬೇಕಿದ್ದ ಅನುದಾನದ ಒಂದು ಭಾಗ ತಡೆಹಿಡಿಯಲ್ಪಟ್ಟಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಯಾವ್ಯಾವ ಸ್ಥಳೀಯ ಸಂಸ್ಥೆಗಳಲ್ಲಿ ಸದ್ಯ ಚುನಾಯಿತ ಆಡಳಿತ ಮಂಡಳಿಗಳು ಅಸ್ತಿತ್ವದಲ್ಲಿವೆಯೋ, ಅಂತಹ ಸಂಸ್ಥೆಗಳನ್ನಾದರೂ ಪರಿಗಣಿಸಿ ಮೊದಲ ಹಂತದಲ್ಲಿ ಬರಬೇಕಾದ ಪಾಲನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಕೇಂದ್ರ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಾಕಿ ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
‘ಪ್ರಜಾಸೇವೆ’ ಹೊಸ ವ್ಯವಸ್ಥೆ: ರಾಜ್ಯ ಸರಕಾರ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಪ್ರಜಾ ಸೇವೆ’ ಹೆಸರಿನ ಹೊಸ ವ್ಯವಸ್ಥೆಯನ್ನು ಆರಂಭಿಸಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಸಚಿವರು ಸಾರ್ವಜನಿಕರ ಅಹವಾಲು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ವಿವರಿಸಿದರು.
ಶಿವಮೊಗ್ಗ ಭೂ ಒತ್ತುವರಿ; ತನಿಖೆಯ ಭರವಸೆ: ಶಿವಮೊಗ್ಗದಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಲೇಔಟ್ ನಿರ್ಮಿಸಿ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುತ್ತಿರುವ ದೂರಿನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಇಲಾಖೆಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಿ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಕಾನೂನು ಉಲ್ಲಂಘನೆಯಾಗಿರುವುದು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಖಂಡಿತವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
‘ಎರಡು ವಾರಗಳಲ್ಲಿ ಸಂಪುಟ ವಿಸ್ತರಣೆ’
ಸಂಪುಟ ವಿಸ್ತರಣೆ ಮತ್ತು ಪುನರ್‌ರಚನೆಯ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಯತೀಂದ್ರ, ಹೈಕಮಾಂಡ್ ನಾಯಕರು ಯಾವಾಗ ಚರ್ಚೆಗೆ ಕರೆಯುತ್ತಾರೋ ಆಗ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ. ಬಹುಶಃ ಇನ್ನೆರಡು ವಾರಗಳ ಒಳಗಾಗಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಇದೆ. ಹಳಬರನ್ನು ಉಳಿಸಿಕೊಳ್ಳಬೇಕೇ ಅಥವಾ ಹೊಸ ಮುಖಗಳಿಗೆ ಅವಕಾಶ ನೀಡಬೇಕೇ ಎಂಬುದನ್ನು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಾಕಿ ಉಳಿದಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಆಗಸ್ಟ್ ಒಳಗೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲು ಸರಕಾರ ಬದ್ಧವಾಗಿದೆ. ಚುನಾವಣಾ ಆಯೋಗವು ಯಾವಾಗ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸುತ್ತದೆಯೋ, ಆಗ ಚುನಾವಣೆ ನಡೆಸಲು ಸರಕಾರ ಸಿದ್ಧವಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಆಗಸ್ಟ್ ಒಳಗೆ ಚುನಾವಣೆ ನಡೆಸುವಂತೆ ಆದೇಶಿಸಿದೆ. ಅದರಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ದಾವಣಗೆರೆ ಸೇರಿದಂತೆ ಇತರ ನಗರ ಪಾಲಿಕೆಗಳ ಚುನಾವಣೆಯ ಸದ್ಯದ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವ
‘ಮತದಾನದ ಹಕ್ಕು ಕಸಿದುಕೊಳ್ಳುತ್ತಿರುವ ಕೇಂದ್ರ ಸರಕಾರ’
ಕೇಂದ್ರ ಸರಕಾರ ಎಸ್‌ಐಆರ್ ತಂದು ಕೋಟ್ಯಂತರ ಮತದಾರರನ್ನು ಕೈ ಬಿಡುವ ಹಾಗೆ ಮಾಡಿ, ಅನೇಕರ ಮತದಾನದ ಹಕ್ಕು ಕಸಿದುಕೊಳ್ಳುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.
ಅರ್ಹ ಮತದಾರ ಹಕ್ಕು ಕಳೆದುಕೊಳ್ಳದ ಹಾಗೇ ಚುನಾವಣಾ ಆಯೋಗ ನೋಡಿಕೊಳ್ಳಬೇಕಿತ್ತು. ಆದರೆ, ಬೇರೆ ರಾಜ್ಯಗಳಲ್ಲಿ ಎಷ್ಟೋ ಜನರು ಹಕ್ಕು ಕಳೆದುಕೊಂಡಿದ್ದಾರೆ. ಚುನಾವಣಾ ಹತ್ತಿರ ಇದ್ದಿದ್ದರಿಂದ ಅವರಿಗೆ ಮನವಿ ಮಾಡಿಕೊಳ್ಳಲೂ ಆಗಿಲ್ಲ. ಹೀಗಾಗಿ ಮತಗಳ್ಳತನ ಮಾಡುತ್ತಿರುವುದು ಬಿಜೆಪಿ. ಎಸ್‌ಐಆರ್ ವಿರುದ್ಧ ರಾಜ್ಯ ಸರಕಾರ ಷಡ್ಯಂತ್ರ ಮಾಡಲಾಗುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪದಲ್ಲಿ ಹುರುಳಿಲ್ಲ. ನಮ್ಮ ಸರಕಾರ ಎಸ್‌ಐಆರ್‌ನಲ್ಲಿ ಹಸ್ತಕ್ಷೇಪ ಮಾಡಲ್ಲ. ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ಮಾಡುತ್ತಿದೆ. ಅದರಲ್ಲಿ ಅವ್ಯವಹಾರ ಮಾಡಲು ಸಾಧ್ಯವಿಲ್ಲ ಎಂದು ಯತೀಂದ್ರ ಉತ್ತರಿಸಿದರು.