Davangere | ವಿವಾಹಿತೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಎಸ್ಪಿ ಕಚೇರಿ ಬಳಿ ಮೃತದೇಹವಿಟ್ಟು ನ್ಯಾಯಕ್ಕಾಗಿ ಕುಟುಂಬಸ್ಥರ ಆಗ್ರಹ
ದಾವಣಗೆರೆ : ವಿವಾಹಿತೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹರಿಹರ ತಾಲೂಕಿನಲ್ಲಿ ಬುಧವಾರ ವರದಿಯಾಗಿದೆ.
ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದ ವಿನುತಾ (26) ಮೃತಪಟ್ಟವರು. ಐದು ವರ್ಷಗಳ ಹಿಂದೆ ಅದೇ ಗ್ರಾಮದ ಶಿವಶಂಕರ ಎಂಬಾತನೊಂದಿಗೆ ವಿನುತಾ ವಿವಾಹವಾಗಿದ್ದರು. ಶಿವಶಂಕರ ಅವರು ವಿನುತಾ ತಾಯಿಯ ಚಿಕ್ಕಮ್ಮನ ಮಗ ಎಂದು ತಿಳಿದು ಬಂದಿದೆ.
ವಿನುತಾಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ನಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತ ಮಹಿಳೆಯ ಕುಟುಂಬಸ್ಥರು ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಯ ಬಳಿಕ ದಾವಣಗೆರೆ ಎಸ್ಪಿ ಕಚೇರಿ ಬಳಿ ತಂದು ನ್ಯಾಯಕ್ಕಾಗಿ ಆಗ್ರಹಿಸಿದರು.
ಮದುವೆಯಾದ ಬಳಿಕ ಶಿವಶಂಕರ ತವರಿನಿಂದ ವರದಕ್ಷಿಣೆ ತರುವಂತೆ ವಿನುತಾಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿ ಮನೆಯವರು ‘ಬಂಜೆ’ ಎಂದು ಮಾನಸಿಕವಾಗಿ ಹಿಂಸಿಸುತ್ತಿದ್ದರು. ವಿನುತಾ ಮೃತಪಟ್ಟ ಬಳಿಕ ಆಕೆಯ ಪತಿ ಶಿವಶಂಕರ, ಅತ್ತೆ ಶಾಂತಮ್ಮ ಹಾಗೂ ಮಾವ ಈಶ್ವರಪ್ಪಪರಾರಿಯಾಗಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿವಶಂಕರ ಹಾಗೂ ಆತನ ಕುಟುಂಬದವರನ್ನು ಬಂಧಿಸಿ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ಮಹಿಳೆಯ ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.