ರಾಹುಲ್ ಗಾಂಧಿ ಅವರ ಡಿಎನ್‌ಎ ಪರೀಕ್ಷೆ ನಡೆಯಬೇಕು : ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
ದಾವಣಗೆರೆ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಗಾಂಧಿ ಕುಟುಂಬದ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿಯವರ ಡಿಎನ್‌ಎ ಪರೀಕ್ಷೆಯಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹಾಕಲು ಫಾರಂ-7 ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಕಾಂಗ್ರೆಸ್‌ನ ಆರೋಪಗಳಿಗೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋನಿಯಾ ಗಾಂಧಿ ಅವರ ತಂದೆಯ ವಿರುದ್ಧ ಭಾರತದ ಅನೇಕ ಪುರಾತನ ವಿಗ್ರಹಗಳನ್ನು ಕಳವು ಮಾಡಿದ ಆರೋಪಗಳಿವೆ ಎಂದು ಹೇಳಿದ ಯತ್ನಾಳ್, ಇವೆಲ್ಲದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕಿದೆ ಎಂದಿದ್ದಾರೆ. ಅಲ್ಲದೆ, ಕೇವಲ ಬಿಜೆಪಿ ನಾಯಕರ ಮೇಲೆ ಎಫ್‌ಐಆರ್ ದಾಖಲಿಸುವುದು ಹಾಗೂ ಪ್ರಧಾನಿ ಮೋದಿ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಹುಲ್ ಗಾಂಧಿ ಅವರ ಡಿಎನ್‌ಎ ಪರೀಕ್ಷೆ ನಡೆಯಬೇಕು ಎಂದು ಹೇಳಿದ್ದಾರೆ.
ಜೀವಂತವಾಗಿರುವವರನ್ನೂ ‘ಮೃತಪಟ್ಟಿದ್ದಾರೆ’ ಎಂದು ಸುಳ್ಳು ಡೆತ್ ಸರ್ಟಿಫಿಕೇಟ್ ನೀಡಿ ಫಾರಂ-7 ಮೂಲಕ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಯತ್ನಾಳ್, ಮತದಾರರ ಪಟ್ಟಿಯಲ್ಲಿ ಒಂದೇ ಹೆಸರಿನ ಹಲವು ನಕಲಿ ಮತದಾರರಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
"ನನ್ನ ಹೆಸರಿನವರೇ ರಾಜ್ಯದಲ್ಲಿ ಸಾವಿರಾರು ಜನರಿದ್ದಾರೆ. ಅವರಲ್ಲಿ ಯಾರಾದರೂ ತೀರಿಕೊಂಡಿದ್ದರೆ ಅದನ್ನು ಪರಿಶೀಲಿಸುವುದು ಅಧಿಕಾರಿಗಳ ಕೆಲಸ. ಇದಕ್ಕಾಗಿಯೇ ಎಸ್‌ಐಆರ್ (SIR) ಮತ್ತು ತನಿಖಾ ಪ್ರಕ್ರಿಯೆ ಇರುವುದು" ಎಂದು ಸ್ಪಷ್ಟಪಡಿಸಿದ್ದಾರೆ .
ಆರೋಪ ಮಾಡುತ್ತಿರುವ ವ್ಯಕ್ತಿಯ ತಂದೆ 2025ರಲ್ಲೇ ಮೃತಪಟ್ಟಿದ್ದರೂ, ಅಲ್ಲಿನ ಬಿಎಲ್‌ಒ (BLO) ಅವರು ಜೀವಂತವಾಗಿದ್ದಾರೆ ಎಂದು ನಮೂದಿಸಿ ಮತದಾರರ ಪಟ್ಟಿಯಲ್ಲಿ ಮುಂದುವರಿಸಿದ್ದರು ಎಂದು ಯತ್ನಾಳ್ ದೂರಿದ್ದಾರೆ.