ದಾವಣಗೆರೆ| ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ
ದಾವಣಗೆರೆ: ದಲಿತರ ಕೇರಿಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯಬೇಕು. ದಲಿತರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಸೇರಿದಂತೆ ಜಿಲ್ಲೆಯಲ್ಲಿ ದಲಿತ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಆಗ್ರಹ ಕೇಳಿ ಬಂದವು.
ಬುಧವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಯಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ದಲಿತ ಮುಖಂಡರು, ದಲಿತ ಹಳ್ಳಿಗಳ ಸಣ್ಣ ಪುಟ್ಟ ಕಿರಣಿ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಬಾಲಕರು, ಯುವಕರು ದಾರಿ ತಪ್ಪುತ್ತಿದ್ದಾರೆ ಮತ್ತು ಕುಟುಂಬಗಳು ಬೀದಿಗೆ ಬರುತ್ತಿವೆ. "ಹಲವು ಬಾರಿ ದೂರು ನೀಡಿದರೂ ಅಬಕಾರಿ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ವ್ಯವಸ್ಥಿತ ಜಾಲದಂತೆ ನಡೆಯುತ್ತಿದೆ" ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಎಸ್ಪಿ ಉಮಾ ಪ್ರಶಾಂತ್, ಸಭೆಯಲ್ಲಿ ಹಾಜರಿದ್ದ ಅಬಕಾರಿ ಇಲಾಖೆ ಅಧಿಕಾರಿಗೆ ನಾಳೆಯಿಂದಲೇ ದೂರು ಬಂದಿರುವ ಕಡೆಗಳಲ್ಲಿ ದಾಳಿ ನಡೆಸಿ ಜಾಗೃತಿ ಜೊತೆಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಮೊಕದ್ದಮೆ ದಾಖಲಿಸಿ ಎಂದು ಸೂಚಿಸಿದರು.
ಆರಂಭದಲ್ಲಿ ಮಾತನಾಡಿದ ಎಸ್‌ಪಿ ಉಮಾ ಪ್ರಶಾಂತ್, ಕಳೆದ ಬಾರಿಯ ಸಭೆಯಲ್ಲಿ ಒಟ್ಟು 81 ವಿಷಯಗಳು ಕೇಳಿ ಬಂದಿದ್ದವು. ಈ ಪೈಕಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ 22 ವಿಷಯಗಳನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಉಳಿದ 6 ವಿಷಯಗಳಿಗೆ ಸಮಯಾವಕಾಶದ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಚರ್ಚೆಯಾದ ಮತ್ತೊಂದು ಪ್ರಮುಖ ವಿಷಯವೆಂದರೆ ಮತಾಂತರ ಹೊಂದಿದವರು ಎಸ್‌ಸಿ ಕೋಟಾದ ಸೌಲಭ್ಯ ಪಡೆಯುತ್ತಿರುವುದು. ಮತಾಂತರಗೊಂಡ ವ್ಯಕ್ತಿಗಳು ಈಗಲೂ ಪರಿಶಿಷ್ಟ ಜಾತಿಯ ಪ್ರಮಾಣಪತ್ರಗಳನ್ನು ಬಳಸಿ ಮೀಸಲಾತಿ, ಶಿಕ್ಷಣ ಮತ್ತು ಉದ್ಯೋಗದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದು ಮೂಲ ದಲಿತರಿಗೆ ಮತ್ತು ಸಂವಿಧಾನದ ಆಶಯಕ್ಕೆ ಮಾಡುತ್ತಿರುವ ಅನ್ಯಾಯ. ಕೂಡಲೇ ಅಂತಹವರನ್ನು ಗುರುತಿಸಿ ಅವರ ಸೌಲಭ್ಯಗಳನ್ನು ರದ್ದುಗೊಳಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.
ಹೊನ್ನಾಳಿಯ ಹಾಸ್ಟೆಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೆರಿಗೆಯಾಗಿದ್ದು, ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಸಿ ಹಾಸ್ಟೆಲ್ ಗಳಿಗೆ ಸಿಸಿಟಿವಿ ಅಳವಡಿಸಬೇಕು. ಪ್ರತಿ ಹಾಸ್ಟೆಲ್‌ಗಳಿಗೆ ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಬೇಕು. ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಇದಕ್ಕೆ ಉತ್ತರಿಸಿದ ಎಸ್ಪಿ ಉಮಾ ಪ್ರಶಾಂತ್, ಎಲ್ಲ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಮಹಿಳಾ ವಾರ್ಡನ್‌ಗಳೇ ಇದ್ದಾರೆ. ಈ ಘಟನೆ ಹೇಗೆ ನಡೆಯಿತು ಎಂಬ ಕುರಿತು ಹೊನ್ನಾಳಿ ಪೊಲೀಸರಿಂದ ತನಿಖೆ ಮಾಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಡಿವೈಎಸ್‌ಪಿಗಳಾದ ಬಸವರಾಜ್ ಬಿ.ಎಸ್, ರುದ್ರೇಶ್ ಉಜ್ಜನಕೊಪ್ಪ, ಅಬಕಾರಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತು ಜಿಲ್ಲೆಯ ಎಸ್ಸಿ ಎಸ್ಟಿ ವರ್ಗಗಳ ಮುಖಂಡರುಗಳು ಹಾಗೂ ಕುಂದುಕೊರತೆ ಸಲ್ಲಿಸುವವರು ಸಭೆಯಲ್ಲಿ ಉಪಸ್ಥಿತರಿದ್ದರು.