ಡಾ.ಸಿದ್ದಲಿಂಗಪ್ಪ ಮುರುಗೆಪ್ಪ ಎಲಿ

ದಾವಣಗೆರೆ : ಕಳೆದ ಐದು ದಶಕಕ್ಕೂ ಹೆಚ್ಚು ಕಾಲ ಅತ್ಯಂತ ಕಡಿಮೆ ವೆಚ್ಚದಲ್ಲಿ ಬಡವರಿಗೆ ವೈದ್ಯಕೀಯ ಸೇವೆ ನೀಡುತ್ತಾ ಖ್ಯಾತಿ ಪಡೆದಿರುವ ನಗರದ ಹಿರಿಯ ವೈದ್ಯ ಡಾ.ಸಿದ್ದಲಿಂಗಪ್ಪ ಮುರುಗೆಪ್ಪ ಎಲಿ (ಡಾ.ಎಸ್.ಎಂ. ಎಲಿ) ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಒಲಿದಿದೆ.

ಹಂಸಭಾವಿ ಮೂಲದವರಾದ 87 ವರ್ಷದ ಡಾ. ಎಲಿ ಅವರು ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ವಿಭಾಗೀಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 1969ರಿಂದ ಸತತವಾಗಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ಎಂಸಿಸಿ 'ಬಿ' ಬ್ಲಾಕ್‌ನಲ್ಲಿರುವ ತಮ್ಮ ಸರಳ ಕ್ಲಿನಿಕ್‌ನಲ್ಲಿ ಕೇವಲ 10ರಿಂದ 30 ರೂಪಾಯಿಗಳ ಅತ್ಯಲ್ಪ ಶುಲ್ಕದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ದಾವಣಗೆರೆ ಮಾತ್ರವಲ್ಲದೆ ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು ಹಾಗೂ ಬೆಂಗಳೂರಿನಿಂದಲೂ ಬರುವ ಬಡ ರೋಗಿಗಳಿಗೆ ಉಚಿತವಾಗಿ ಔಷಧ ಮಾದರಿಗಳನ್ನು ನೀಡುವುದು, ಪರೀಕ್ಷೆಗಳಿಗೆ ರಿಯಾಯಿತಿ ಕೊಡಿಸುವುದು ಹಾಗೂ ಅಗತ್ಯವಿದ್ದಲ್ಲಿ ಬಡ ರೋಗಿಗಳ ಪ್ರಯಾಣ ವೆಚ್ಚವನ್ನೂ ತಾವೇ ಭರಿಸುವ ಮೂಲಕ ಜನಪ್ರಿಯರಾಗಿದ್ದಾರೆ.

ವೈದ್ಯಕೀಯ ರಂಗದಲ್ಲಿನ ಅವರ ಈ ನಿಸ್ವಾರ್ಥ ಹಾಗೂ ಸುದೀರ್ಘ ಕಾಯಕವನ್ನು ಗೌರವಿಸಿ ರಾಜ್ಯ ಸರ್ಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಪ್ರಶಸ್ತಿ ಲಭಿಸಿರುವುದಕ್ಕೆ ಜಿಲ್ಲೆಯ ಸಾರ್ವಜನಿಕರು ಹಾಗೂ ವೈದ್ಯಕೀಯ ವಲಯ ಹರ್ಷ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor