ಸಚಿವರನ್ನು ತಡೆದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಿಎಂ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ
ದಾವಣಗೆರೆ: ಮೈಸೂರು ಅರಮನೆ ಆವರಣದಲ್ಲಿ ಬುಧವಾರ ನಡೆದ ನಂದಿಧ್ವಜ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವರು ಹಾಗೂ ಹಿರಿಯ ಜನಪ್ರತಿನಿಧಿಗಳನ್ನು ತಡೆದು ಅಗೌರವದಿಂದ ವರ್ತಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಗುರುವಾರ ತಮ್ಮ ನಿವಾಸದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮೊದಲ ಪ್ರತಿಕ್ರಿಯೆ ನೀಡಿದ ಸಚಿವರು, ಪೂಜಾ ಕಾರ್ಯಕ್ರಮದ ವೇಳೆ ಶಿವರಾಜ್ ತಂಗಡಗಿ, ನಾನು ಹಾಗೂ ನರೇಂದ್ರಸ್ವಾಮಿ ಅವರನ್ನು ತಡೆದ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ (ಸಿಎಸ್) ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.
ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಅಧಿಕಾರಿಗಳ ವರ್ತನೆಗೆ ಅಸಮಾಧಾನ:
ಸಚಿವರು ಹಾಗೂ ಹಿರಿಯ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕು. ಜನಪ್ರತಿನಿಧಿಗಳನ್ನು ಈ ರೀತಿ ತಡೆದು ಅಗೌರವದಿಂದ ವರ್ತಿಸುವುದು ಸರಿಯಲ್ಲ. ನಿಯಮ ಮತ್ತು ಶಿಷ್ಟಾಚಾರ ಮೀರಿ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ, ಶಾಸಕರು ಹಾಗೂ ಸಚಿವರಿಗೆ ಪ್ರವೇಶ ನಿರಾಕರಿಸುವಂತೆ ಮುಖ್ಯಮಂತ್ರಿ ಅಥವಾ ಸ್ಥಳೀಯ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ್ದರು ಎಂಬ ವರದಿಗಳನ್ನು ಅವರು ತಳ್ಳಿಹಾಕಿದರು. ಮುಖ್ಯಮಂತ್ರಿ ಇಂತಹ ಯಾವುದೇ ಸೂಚನೆ ನೀಡಿರಲಿಲ್ಲ. ಬದಲಾಗಿ, ಹೊರಗಿದ್ದ ಶಾಸಕರನ್ನು ಸ್ವತಃ ಮುಖ್ಯಮಂತ್ರಿಗಳೇ ಕರೆಸಿಕೊಂಡು ಗೌರವಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.