ಮುರ್ಡೇಶ್ವರದ ಹಿರಿಯ ವೈದ್ಯ ಡಾ. ಐ.ಆರ್. ಭಟ್ಟ ನಿಧನ
ಭಟ್ಕಳ: ಮುರ್ಡೇಶ್ವರದ ಹಿರಿಯ ವೈದ್ಯ, ಯಕ್ಷಗಾನ ಪ್ರೇಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಐ.ಆರ್. ಭಟ್ಟ (85) ನಿಧನರಾಗಿದ್ದಾರೆ.
ಉಡುಪಿ ಜಿಲ್ಲೆಯ ಇನ್ನಂಜೆಯಲ್ಲಿ ಜನಿಸಿದ ಇನ್ನಂಜೆ ರಾಜಗೋಪಾಲ ಭಟ್ಟ ಅವರು ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸ ಮುಗಿಸಿ, ಮುರ್ಡೇಶ್ವರವನ್ನು ತಮ್ಮ ಕರ್ಮಭೂಮಿಯನ್ನಾಗಿ ಆಯ್ದುಕೊಂಡಿದ್ದರು.
ಕಳೆದ ಹಲವು ವರ್ಷಗಳಿಂದ ಮುರ್ಡೇಶ್ವರದಲ್ಲಿ ರಾಜ್ ಕ್ಲಿನಿಕ್ ಮೂಲಕ ಸೇವೆ ಸಲ್ಲಿಸುತ್ತಿದ್ದ ಅವರು, ಯಕ್ಷಗಾನದ ಮೇಲಿನ ಆಸಕ್ತಿಯಿಂದಾಗಿ ಯಕ್ಷಗಾನ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಮುರ್ಡೇಶ್ವರದಲ್ಲಿ ಯಕ್ಷರಕ್ಷೆ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರು. ಶಿರಾಲಿಯ ಡಾ. ಸರಾಫ್ ಅವರೊಂದಿಗೆ ಸೇರಿ ಚಿಕ್ಕ ಮಕ್ಕಳಿಗೆ ಯಕ್ಷಗಾನ ತರಬೇತಿ ಹಾಗೂ ಪ್ರದರ್ಶನ ನೀಡುವ ಕಾರ್ಯಕ್ಕೂ ಸಹಕಾರ ನೀಡಿದ್ದರು.
ನಂತರ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.