ಕುದುರೆಮುಖ ಚಾರಣಕ್ಕೆ ಹೆಚ್ಚುತ್ತಿದೆ ಬೇಡಿಕೆ : 2025-26ರಲ್ಲಿ 55 ಸಾವಿರ ಚಾರಣಿಗರ ಭೇಟಿ

Update: 2026-07-30 08:56 IST

ಮಂಗಳೂರು : ಕರ್ನಾಟಕದ ಪ್ರಸಿದ್ಧ ಗಿರಿಧಾಮ, ಚಾರಣ ಕ್ಷೇತ್ರಗಳಲ್ಲಿ ಒಂದಾಗಿರುವ ಕುದುರೆಮುಖ ಜೀವನದಿಗಳಾದ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳ ಮೂಲ ಸ್ಥಾನವೂ ಹೌದು. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ, ಹುಲ್ಲುಗಾವಲಿನಿಂದ ಆವೃತವಾಗಿರುವ ಕುದುರೆಮುಖ ಸಾಹಸಪ್ರಿಯರ ಪ್ರಮುಖ ಚಾರಣ ಕ್ಷೇತ್ರವಾಗಿ ರೂಪುಗೊಂಡಿದೆ.

2025-26ನೇ ಸಾಲಿನಲ್ಲಿ ಕುದುರೆಮುಖದ ಪ್ರಮುಖ ಚಾರಣ ಕ್ಷೇತ್ರಗಳಾದ ಗಂಗಡಿಕಲ್, ಕುರಿಂಜಾಲ್, ಕುದುರೆಮುಖಕ್ಕೆ ಕಳೆದ ವರ್ಷ ಸುಮಾರು 55,000ದಷ್ಟು ಅಧಿಕ ಚಾರಣಿಗರು ಭೇಟಿ ನೀಡಿದ್ದಾರೆ. ಹುಲ್ಲುಗಾವಲುಗಳಿಂದ ಬೇರ್ಪಟ್ಟ ಕಣಿವೆಗಳಲ್ಲಿ ಕಂಡುಬರುವ ನಿತ್ಯಹರಿದ್ವರ್ಣದ ಶೋಲಾ ಅರಣ್ಯದಿಂದ ಆವೃತಗೊಂಡಿರುವ ಕುದುರೆಮುಖ ಹಚ್ಚಹಸಿರಿನ ತಾಣ. ಶಾಂತ ಪರಿಸರ, ಕೆಲಸದ ಒತ್ತಡದಿಂದ ಒಂದಷ್ಟು ಹೊತ್ತು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಯಸುವ ಸಾಹಸಿಗರಿಗೆ ಕುದುರೆಮುಖ ಚಾರಣ ಉತ್ತಮ ಆಯ್ಕೆ.

ದಟ್ಟಾರಣ್ಯದ ನಡುವೆ ಬಿಟ್ಟು ಬಿಟ್ಟು ಸುರಿವ ಮಳೆಯ ಜೊತೆಯಲ್ಲೇ ಕುದುರೆಮುಖದ ತುಂಗಭದ್ರಾ ಜಲಮೂಲ (ಗಂಗಾಮೂಲವೆಂದೇ ಕರೆಯಲಾಗುತ್ತದೆ), ಹನುಮಾನ್ ಗುಂಡಿ (ಸೂತನಬ್ಬಿ ಜಲಪಾತ), ಲಕ್ಯಾ ಡ್ಯಾಂ, ಕುದುರೆಮುಖ ಟೌನ್‌ಶಿಪ್‌ಗಳಿಗೆ ಮಂಗಳವಾರ ಅರಣ್ಯ ಇಲಾಖೆ ನೇತೃತ್ವದಲ್ಲಿ ದ.ಕ. ಜಿಲ್ಲಾ ಪತ್ರಕರ್ತರಿಗಾಗಿ ಆಯೋಜಿಸಿದ್ದ ಅಧ್ಯಯನ ಪ್ರವಾಸ ದಟ್ಟಾರಣ್ಯದ ನಡುವೆ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಯ ಸಾಹಸಮಯ ಜೀವನದ ಜೊತೆಗೆ ಅವರ ಯಾತನೆಗಳನ್ನು ಅರಿಯುವಂತಾಯಿತು.

ಮಳೆಯ ನಡುವೆ, ರಕ್ತ ಹೀರಲು ತುದಿಗಾಲಲ್ಲೇ ನಿಂತಿರುವ ಹಿಂಡು ಹಿಂಡು ಉಂಬಳ (ಲೀಚಸ್)ಗಳ ಕಡಿತದೊಂದಿಗೆ ಕಾಡಿನಲ್ಲಿ ಒಂದು ದಿನ ಸಂಚರಿಸುವುದೇ ಅಬ್ಬಬ್ಬಾ ಅನ್ನಿಸುವಾಗ, ಮಳೆ ಗಾಳಿಗೆ ಧರೆಗುರುಳುವ ಮರಗಳು, ಕಾಡು ಪ್ರಾಣಿಗಳ ದಾಳಿಯ ಆತಂಕದ ವಾತಾವರಣದಲ್ಲಿ ಪ್ರತಿನಿತ್ಯ ಅರಣ್ಯ ಸಂರಕ್ಷಣೆಯ ಹೊಣೆ ಹೊತ್ತ ನಮ್ಮ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಯ ಕಾರ್ಯ ನಿಜಕ್ಕೂ ಶ್ಲಾಘನೀಯ.

ದಟ್ಟ ಕಾಡು- ಅರಣ್ಯ ಪ್ರದೇಶಗಳಲ್ಲಿ ಚಾರಣವೆಂದರೆ ಥ್ರಿಲ್, ಸಾಹಸಮಯವೇನೋ ನಿಜ. ಆದರೆ ವನ್ಯಜೀವಿಗಳಿಗೆ ತೊಂದರೆ ಆಗದಂತೆ, ತಮ್ಮನ್ನೂ ಕಾಪಾಡಿಕೊಂಡು, ಚಾರಣಿಗರ ಸುರಕ್ಷತೆಯ ಖಾತರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಒದಗಿಸುತ್ತಾರೆ. ರಕ್ಷಿತಾರಣ್ಯದಲ್ಲಿ ವನ್ಯಜೀವಿಗಳ ಬೇಟೆಯನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಮೂಲಕ ಬೇಟೆ ನಿಗ್ರಹ ಶಿಬಿರ(ಆ್ಯಂಟಿ ಪೋಚಿಂಗ್ ಕ್ಯಾಂಪ್-ಎಪಿಸಿ)ಗಳ ಸಿಬ್ಬಂದಿಯವರೂ ಅರಣ್ಯ ಸಂರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುತ್ತಾರೆ.

ಕುದುರೆಮುಖ ವನ್ಯಜೀವಿ ವಿಭಾಗವು ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಲ್ಲಿ 35 ಬೇಟೆ ನಿಗ್ರಹ ಶಿಬಿರಗಳನ್ನು ನಿರ್ವಹಿಸಲಾಗುತ್ತಿದೆ. ಈ ಶಿಬಿರಗಳಲ್ಲಿ ಸುಮಾರು 200ಕ್ಕೂ ಅಧಿಕ ಸಿಬ್ಬಂದಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನೆಟ್‌ವರ್ಕ್ ಸಿಗಲ್ಲ-ವಿದ್ಯುತ್ ಸಂಪರ್ಕ ಇಲ್ಲವೇ ಇಲ್ಲ!

ದಟ್ಟ ಅರಣ್ಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನೆಟ್‌ವರ್ಕೇ ಸಿಗುವುದಿಲ್ಲ. ಇಲ್ಲಿನ ಅರಣ್ಯ ಹಾಗೂ ಎಪಿಸಿ ಸಿಬ್ಬಂದಿ ವಾಕಿಟಾಕಿಗಳ ಮೂಲಕವೇ ಕಾರ್ಯ ನಿರ್ವಹಿಸಬೇಕಾಗಿದ್ದು, ವಿದ್ಯುತ್ ಸಂಪರ್ಕವೇ ಇಲ್ಲದ ಇಲ್ಲಿನ ಕಾಡುಗಳಲ್ಲಿ ಸೋಲಾರ್, ಹೈಡ್ರೋಜನ್, ಜನರೇಟರ್ ಬಳಕೆಯೊಂದೇ ಮಾರ್ಗ. ಮಳೆಗಾಲದಲ್ಲಿ ಸೋಲಾರ್ ಕಾರ್ಯ ನಿರ್ವಹಿಸದು, ಜನರೇಟರ್ ಕೈಕೊಟ್ಟರೆ ಇಲ್ಲಿನ ಅಧಿಕಾರಿ ಸಿಬ್ಬಂದಿಯ ಪರಿಸ್ಥಿತಿಯನ್ನು ವಿವರಿಸುವುದೂ ಅಸಾಧ್ಯ.

ಅರಣ್ಯ ಇಲಾಖೆಯು ಶೇ.42ರಷ್ಟು ಕ್ಷೇತ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಹಾಲಿ ಇರುವ ಖಾಯಂ ಸಿಬ್ಬಂದಿ ಜೊತೆಗೆ ಈ ಆ್ಯಂಟಿ ಪೋಚಿಂಗ್ ಕ್ಯಾಂಪ್‌ನಡಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕೂಡಾ ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಕೊರತೆ, ಮಳೆಯ ಜೊತೆ ಉಂಬಳಗಳ ಹಾವಳಿ

ಯೊಂದಿಗೆ ದಿನ ಕಳೆಯಬೇಕಾಗುತ್ತದೆ. ಮಿಲಿಟರಿ, ಪೊಲೀಸ್ ವ್ಯವಸ್ಥೆಯಂತೆಯೇ ಪ್ರಕೃತಿಯನ್ನು ರಕ್ಷಿಸುವ ಸೇನಾನಿಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಾಡಿನ ನಡುವೆ ವನ್ಯಜೀವಿಗಳ ರಕ್ಷಣೆ ಜೊತೆಗೆ ಚಾರಣಿಗರ ರಕ್ಷಣೆಯನ್ನು ಖಾತರಿಪಡಿಸುವ ಅರಣ್ಯ ಸಿಬ್ಬಂದಿಯ ರೋದನ ವನ್ನು ಯಾರೂ ಕೇಳುವರಿಲ್ಲ ಎಂಬುದಂತೂ ಸತ್ಯ.

ಚಾರಣಿಗರಿಂದ ಸಂಗ್ರಹವಾದ ಶೇ. 40ರಷ್ಟು ಮೊತ್ತ ಎಪಿಸಿಗೆ ಬಳಕೆ

ಕುದುರೆಮುಖದ ಟ್ರೆಕ್ಕಿಂಗ್ ಪಾಯಿಂಟ್‌ಗಳಿಗೆ ಭೇಟಿ ನೀಡುವ ಚಾರಣಿಗರು ಆನ್‌ಲೈನ್ ಮೂಲಕ ಪೂರ್ವಭಾವಿಯಾಗಿ ಬುಕ್ಕಿಂಗ್ ಮಾಡಬೇಕಾಗುತ್ತದೆ. ಈ ರೀತಿ ಚಾರಣಿಗರಿಂದ ಕುದುರೆಮುಖ ಫೌಂಡೇಶನ್‌ಗೆ ಸಂದಾಯವಾಗುವ ಹಣವನ್ನು ಸರಕಾರದಿಂದ ಅನುಮೋದನೆ ಪಡೆದು ವಿವಿಧ ಕಾರ್ಯಗಳಿಗೆ ಮರು ಬಳಕೆ ಮಾಡಲಾಗುತ್ತದೆ. ಫೌಂಡೇಶನ್‌ನ ಶೇ.40ರಷ್ಟು ಮೊತ್ತವನ್ನು ಅರಣ್ಯ ಇಲಾಖೆಯಡಿ ಕಾರ್ಯನಿರ್ವಹಿಸುವ ಕುದುರೆಮುಖ ವನ್ಯಜೀವಿ ವಿಭಾಗದ ಬೇಟೆ ನಿಗ್ರಹ ಶಿಬಿರ (ಎಪಿಸಿ) ದ ಸಿಬ್ಬಂದಿಯ ವೇತನಕ್ಕಾಗಿ ವ್ಯಯಿಸಲಾಗುತ್ತಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಶುದ್ಧ ಗಾಳಿಯ ಜೊತೆಗೆ ಶುದ್ಧವಾದ ಕುಡಿಯುವ ನೀರನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾದರೆ ಪಶ್ಚಿಮ ಘಟ್ಟದಲ್ಲಿರುವ ಜಲಮೂಲಗಳ ರಕ್ಷಣೆಯೂ ಬಹುಮುಖ್ಯವಾಗಿದೆ. ಹಲವು ಸಮಸ್ಯೆಗಳ ನಡುವೆ ವನ್ಯಜೀವಿಗಳ ದಾಳಿ, ಪ್ರಾಕೃತಿಕ ವಿಕೋಪದಂತಹ ಹಲವು ಸಮಸ್ಯೆಗಳಿಗೆ ತಮ್ಮ ಮೈಯೊಡ್ಡಿ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿ ಹಾಗೂ ಎಪಿಸಿ ಸಿಬ್ಬಂದಿ ಕಾರ್ಯ ಮಹತ್ವದ್ದಾಗಿದೆ.

ಸಫಾರಿಯೂ ಇದೆ-ವಿಹಾರ ವ್ಯವಸ್ಥೆಯೂ ಲಭ್ಯ

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನಡಿ ವಿಹಾರದ ವ್ಯವಸ್ಥೆಯೂ ಕುದುರೆಮುಖ ಅರಣ್ಯದಲ್ಲಿ ಲಭ್ಯವಿದ್ದು, ಇಲ್ಲಿನ ವಿವಿಧ ಕ್ಯಾಂಪ್‌ಗಳಲ್ಲಿರುವ ಲಾಡ್ಜ್‌ಗಳಲ್ಲಿ ತಂಗ ಬಹುದಾಗಿದೆ. ವ್ಯಕ್ತಿಯೊಬ್ಬರಿಗೆ ನಿಗದಿತ ದರದೊಂದಿಗೆ ಕುಟುಂಬ ಹಾಗೂ ಸ್ನೇಹಿತರಿಗೆ ಲಾಡ್ಜಸ್‌ಗಳಲ್ಲಿ ತಂಗುವ ವ್ಯವಸ್ಥೆಯಿದ್ದು, ಇಂತಹ ವ್ಯವಸ್ಥೆಯಡಿ ಬುಕ್ಕಿಂಗ್ ಮಾಡಿದವರಿಗೆ ಸಂಜೆ ಅಥವಾ ಬೆಳಗ್ಗಿನ ಹೊತ್ತು ಸಫಾರಿ ವ್ಯವಸ್ಥೆ ಉಚಿತವಾಗಿರುತ್ತದೆ.

ಕುದುರೆಮುಖ ವ್ಯಾಪ್ತಿಯಲ್ಲಿ 4 ಹುಲಿಗಳ ಪತ್ತೆ

ಅಧಿಕಾರಿಗಳ ಪ್ರಕಾರ, ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಮುಖ್ಯವಾಗಿ ಕಾಡುಕೋಣ, ಕಾಡು ನಾಯಿ, ಕಡವೆಗಳಿವೆ. ಕಳೆದ ಮೇ ತಿಂಗಳಲ್ಲಿ ಹುಲಿಗಳ ಸಮೀಕ್ಷೆ ಮಾಡುವ ಸಂದರ್ಭ ಕುದುರೆಮುಖ ವ್ಯಾಪ್ತಿಯಲ್ಲಿ ನಾಲ್ಕು ಹುಲಿಗಳು ಪತ್ತೆಯಾಗಿವೆ. ಕಾಡಾನೆ, ಕಾಡುಕುರಿ, ಮುಳ್ಳು ಹಂದಿ, ಕಾಡು ಹಂದಿ, ಬರಿಂಗ ಮೊದಲಾದ ಪ್ರಾಣಿಗಳು ಸೇರಿದಂತೆ 101 ಜಾತಿಯ ಪಕ್ಷಿಗಳಿವೆ.

ಕುದುರೆಮುಖ: 2025-26ರ ಚಾರಣಿಗರ ವಿವರ

ಚಾರಣ ಸ್ಥಳ ಚಾರಣಿಗರು ಸಂಗ್ರಹ ಮೊತ್ತ

ಗಂಗಡಿಕಲ್ 10,096 46,72,575 ರೂ.

ಕುರಂಜಲ್ 13,422 63,33,125 ರೂ.

ಕುದುರೆಮುಖ 33,348 1,89,28,000 ರೂ.

ಕೂಡ್ಲುತೀರ್ಥ ಫಾಲ್ಸ್, ಕೊಡಚಾದ್ರಿ, ಕುದುರೆಮುಖ ಟೆಕ್ಕಿಂಗ್ ಹಾಗೂ ಬೆಳ್ತಂಗಡಿ ಗಡಾಯಿಕಲ್ಲು ಸೇರಿದಂತೆ ಕಳೆದ ವರ್ಷ ಅಂದರೆ, 2025-26ನೇ ಸಾಲಿನಲ್ಲಿ ಕುದುರೆಮುಖ ಫೌಂಡೇಶನ್‌ಗೆ ಆನ್‌ಲೈನ್ ಮೂಲಕ ಚಾರಣಿಗರಿಂದ 5.20 ಕೋಟಿ ರೂ. ಸಂಗ್ರಹವಾಗಿದೆ. ಆ ಫೌಂಡೇಶನ್‌ಗೆ ಬಂದ ಹಣವನ್ನು ಪುನರ್ವಸತಿ, ಮೂಲಸೌಕರ್ಯ ಅಭಿವೃದ್ಧಿ, ಸಿಬ್ಬಂದಿ ಕ್ವಾರ್ಟಸ್ ಹಾಗೂ ಸಣ್ಣಪುಟ್ಟ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತದೆ. ಕುದುರೆಮುಖ ಆ್ಯಂಟಿ ಪೋಚಿಂಗ್ ಕ್ಯಾಂಪ್‌ನಡಿ 200 ಮಂದಿ ಯುವಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಎಸ್‌ಐ, ಇಪಿಎಫ್ ಜೊತೆಗೆ ರೇಶನ್ ಹಾಗೂ 16,700 ರೂ. ವೇತನ ಒದಗಿಸಲಾಗುತ್ತಿದೆ.

-ಶ್ರೀಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)

ಮೂಡುಬಿದಿರೆ ವಲಯ

ಪ್ರವಾಸಿಗರ ಸುರಕ್ಷತೆ ಹಾಗೂ ಪರಿಸರ ಸ್ನೇಹಿ ಚಾರಣಕ್ಕೆ ಮುಖ್ಯ ಆದ್ಯತೆ ನೀಡಲಾಗುತ್ತಿದೆ. ಕುದುರೆಮುಖ ಅರಣ್ಯ ವ್ಯಾಪ್ತಿಯ ಗಂಗಡಿಕಲ್, ಕುರಿಂಜಾಲ್, ಕುದುರೆಮುಖ ಚಾರಣ ಪಾಯಿಂಟ್‌ಗಳಲ್ಲಿ 10 ಚಾರಣಗರಿಗೆ ಒಬ್ಬರಂತೆ ಸ್ಥಳೀಯರು ಗೈಡ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತೀ ಚಾರಣಗರಿಂದ ತಲಾ 100 ರೂಂ.ನಂತೆ ಸಂಗ್ರಹಿಸಿ 1,000 ರೂ. ನೀಡಲಾಗುತ್ತಿದೆ. ಸುಮಾರು 350 ಮಂದಿ ನೋಂದಣಿ ಮಾಡಿಕೊಂಡಿದ್ದು, ಅವರು ಆಯಾ ಸ್ಥಳಗಳಲ್ಲಿ ಗೈಡ್‌ಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಚಾರಣಿಗರಿಗೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯವಾಗಿದ್ದು, ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಸಮಯ ಚಾರಣಕ್ಕೆ ಸೂಕ್ತವಾಗಿರುತ್ತದೆ. ದಿನಕ್ಕೆ 300 ಜನರಿಗೆ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಅರಣ್ಯಕ್ಕೆ ಬೆಂಕಿ ಬೀಳುವ ಸಂದರ್ಭ ಹಾಗೂ ಭಾರೀ ಮಳೆಯ ವೇಳೆ ಚಾರಣವನ್ನು ನಿಷೇಧಿಸಲಾಗುತ್ತದೆ.

-ಪ್ರಭಾಕರ್ ಕುಲಾಲ್, ವಲಯ ಅರಣ್ಯ ಅಧಿಕಾರಿ (ಆರ್‌ಎಫ್‌ಒ), ಕುದುರೆಮುಖ.

ಅಧ್ಯಯನ ಪ್ರವಾಸದ ವೇಳೆ, ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಬ್ಬರನ್ನು ಮಾತಿಗೆಳೆದಾಗ ‘2005ರಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಆರಂಭದಲ್ಲಿ 1,500 ರೂ. ವೇತನ ಸಿಗುತ್ತಿತ್ತು. ಈಗ 16,500 ರೂ. ಸಿಗುತ್ತಿದೆ. ಇಂದಿನ ದಿನದಲ್ಲಿ ಈ ವೇತನದಲ್ಲಿ ಕುಟುಂಬ ಸಲಹುವುದು ಕಷ್ಟಸಾಧ್ಯವಾಗಿದ್ದರೂ, ಅರಣ್ಯ ಇಲಾಖೆಯ ಖಾಯಂ ಸಿಬ್ಬಂದಿಯಾಗಿ ನೇಮಕ ಆಗುವುದೆಂಬ ನಿರೀಕ್ಷೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಿರ್ವಹಿಸುವ ಕೆಲಸದ ಬಗ್ಗೆ ಹೆಮ್ಮೆ ಇದೆ’ ಎಂದು ಅನಿಸಿಕೆ ಹಂಚಿಕೊಂಡರು.

ಹೊಸತಾಗಿ ನೇಮಕಗೊಂಡವರ ಜೊತೆಗೆ ಕಳೆದ 15 ವರ್ಷಗಳಿಗೂ ಅಧಿಕ ಕಾಲ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಪ್ರಾಕೃತಿಕ ಸಂಪತ್ತು, ವನ್ಯಜೀವಿಯ ಸಂರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿ, ತಮ್ಮ ಸೇವಾ ಖಾಯಮಾತಿಗಾಗಿ ಸರಕಾರವನ್ನು ಎದುರು ನೋಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತ್ಯಾ. ಕೆ

contributor

Similar News