ಎಸ್ಐಆರ್: ಕೊಡಗಿನಲ್ಲಿ 25ಸಾವಿರಕ್ಕೂ ಅಧಿಕ ಮಂದಿಗೆ ನೋಟಿಸ್ ಭೀತಿ?
’ಲಾಜಿಕಲ್ ಡಿಸ್ಟೆಪೆನ್ಸಿ’ ಬಗ್ಗೆ ಮತದಾರರಿಗೆ ಅರಿವೇ ಇಲ್ಲ!
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮತದಾರರ ಮಾಹಿತಿ ಡಿಜಿಟಲೀಕರಣ ಬುಧವಾರ ಸಂಜೆಯವರೆಗೆ ಶೇ.೮೫ರಷ್ಟು ಪೂರ್ಣಗೊಂಡಿದೆ. ಆದರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಎಲ್‌ಒ ಆ್ಯಪ್‌ನಲ್ಲಿರುವ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ (ತಾರ್ಕಿಕ ವ್ಯತ್ಯಾಸ)ದ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ.
ಚುನಾವಣಾ ಆಯೋಗ ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆಸಿದಂತೆ ಎಸ್‌ಐಆರ್ ಪ್ರಕ್ರಿಯೆ ನಂತರ ಇದೀಗ ಕರ್ನಾಟಕದಲ್ಲೂ ಲಾಜಿಕಲ್ ಡಿಸ್ಕ್ರೆಪೆನ್ಸಿ ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ರಾಜ್ಯಾದ್ಯಂತ ದೊಡ್ಡ ಮಟ್ಟದ ವಿರೋಧವೂ ಇದೆ. ಮತದಾರರು ಎನ್ಯುಮರೇಶನ್ ಫಾರಂನಲ್ಲಿ ನೀಡಿರುವ ತಮ್ಮ ಮ್ಯಾಪಿಂಗ್ ಮಾಹಿತಿ ತಪ್ಪಾಗಿದ್ದರೆ ಅಂತಹ ಮತದಾರರಿಗೆ ಕರಡು ಪಟ್ಟಿ ಪ್ರಕಟಗೊಂಡ ನಂತರ ನೋಟಿಸ್ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿ ಲಾಜಿಕಲ್ ಡಿಸ್ಕ್ರೆಪೆನ್ಸಿ ಅಡಿಯಲ್ಲಿ ೨೭ ಲಕ್ಷ ಅರ್ಹ ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.
ಆದರೆ, ಲಾಜಿಕಲ್ ಡಿಸ್ಕ್ರೆಪೆನ್ಸಿ ಅಂದರೆ ಏನು?. ಎಸ್‌ಐಆರ್ ಆ್ಯಪ್‌ನಲ್ಲಿ ಈ ಬಗ್ಗೆ ಮಾಹಿತಿ ಇದೆಯೇ ಎಂಬುದು ಕೂಡಾ ಬಹುತೇಕ ಬಿಎಲ್‌ಒಗಳಿಗೆ ತಿಳಿದಿಲ್ಲ ಎಂಬುದು ‘ವಾರ್ತಾಭಾರತಿ’ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಪಕ್ಷಗಳ ಬೂತ್ ಏಜೆಂಟರಿಗೂ ಲಾಜಿಕಲ್ ಡಿಸ್ಕ್ರೆಪೆನ್ಸಿಯ ಬಗ್ಗೆ ಅರಿವೇ ಇಲ್ಲ. ಎನ್ಯುಮರೇಶನ್ ಫಾಂ ಡಿಜಿಟಲೀಕರಣ ಮಾಡುವಾಗ ಲಾಜಿಕಲ್ ಡ್ರಿಸ್ಕ್ರೆಪೆನ್ಸಿ ಸಮಸ್ಯೆಯಾಗದಿರಲು ಮತದಾರರಿಗೆ ಅರಿವು ಮೂಡಿಸಲು ಬೂತ್ ಮಟ್ಟದ ಏಜೆಂಟರಿಗೆ ಕಿಂಚಿತ್ತೂ ಅರಿವೇ ಇಲ್ಲದಿರುವುದು ವಿಪರ್ಯಾಸ. ಕೆಲವೆಡೆಗಳಲ್ಲಿ ರಾಷ್ಟ್ರೀಯ ಪಕ್ಷದ ಏಜೆಂಟರ ಹೆಸರೂ ಲಾಜಿಕಲ್ ಡಿಸ್ಕ್ರೆಪೆನ್ಸಿಯಲ್ಲಿ ಕಂಡು ಬಂದಿದೆ!
ಮತದಾರರಿಗೆ ನೋಟಿಸ್ ಭೀತಿ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ೨೦೦೨ರ ಮತದಾರರ ಪಟ್ಟಿಯ ವಿವರ ನೀಡದ, ಮ್ಯಾಪಿಂಗ್ ಆಗದ ಮತದಾರರಿಗೆ ನೋಟಿಸ್ ಬರುತ್ತದೆ. ಆದರೆ, ಮ್ಯಾಪಿಂಗ್ ಆಗಿದ್ದರೂ ಲಾಜಿಕಲ್ ಡಿಸ್ಕ್ರೆಪೆನ್ಸಿಯಡಿಯಲ್ಲೂ ನೋಟಿಸ್ ಬರುವ ಸಾಧ್ಯತೆ ಇದೆ. ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ೫೫೨ ಬೂತ್‌ಗಳು ಸೇರಿ ಲಾಜಿಕಲ್ ಡಿಸ್ಕ್ರೆಪೆನ್ಸಿಯಲ್ಲಿ ೨೫ ಸಾವಿರಕ್ಕೂ ಅಧಿಕ ಮತದಾರರಿಗೆ ನೋಟಿಸ್ ಬರುವ ಸಾಧ್ಯತೆ ಇದೆ.
೨೦೦೨ರ ಮತದಾರರ ಪಟ್ಟಿಯಲ್ಲಿ ಹೆಸರಿನಲ್ಲಿ ಇನ್ಶಿಯಲ್ ಇರಲಿಲ್ಲ. ೨೦೨೫ರ ಮತದಾರರ ಪಟ್ಟಿಯಲ್ಲಿ
ಇನ್ಶಿಯಲ್ ಸೇರ್ಪಡೆಯಾಗಿರುವ ಕೆಲವು ಮತದಾರ
ರನ್ನು ಲಾಜಿಕಲ್ ಡಿಸ್ಕ್ರೆಪೆನ್ಸಿ ಎಂದು ಗುರುತಿಸಲಾಗಿದೆ. ಆಗಸ್ಟ್ ೮ರವರೆಗೆ ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಿಕೊಡಲು ಅವಕಾಶ ಇದ್ದು, ಮತದಾರರು ತಮ್ಮ ಮಾಹಿತಿ ಸರಿಯಾಗಿ ಅಪ್ಲೋಡ್ ಆಗಿದೆಯೇ? ಅಥವಾ ಲಾಜಿಕ್ ಡಿಸ್ಕ್ರೆಪೆನ್ಸಿಯಲ್ಲಿ ಹೆಸರು ಗುರುತಿಸಲಾಗಿದೆಯೇ ಎಂದು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ ಗಳೊಂದಿಗೆ ವಿಚಾರಿಸುವುದು ತುಂಬಾ ಮುಖ್ಯ.
ಬಿಎಲ್‌ಒ ಎನ್ಯುಮರೇಶನ್ ಫಾರಂ ಭರ್ತಿ ಮಾಡುವಾಗಲೇ ಲಾಜಿಕಲ್ ಡಿಸ್ಕ್ರೆಪೆನ್ಸಿ ಇರುವ ಮತದಾರರ ವಿವರ VIEW ANOMALY ಅಂತ ತೋರಿಸುತ್ತದೆ. ಈ ಸಂದರ್ಭದಲ್ಲೇ ಯಾವ ಸಮಸ್ಯೆ ಇದೆ ಎಂದು ಗುರುತಿಸಿ ಸರಿಪಡಿಸಬಹುದಾಗಿದೆ. ಆದರೆ ಶೇ.೯೫ರಷ್ಟು ಬಿಎಲ್‌ಒಗಳಿಗೆ ತಮ್ಮ ಆ್ಯಪ್‌ನಲ್ಲಿ ಲಾಜಿಕ್ ಡಿಸ್ಕ್ರೆಪೆನ್ಸಿಯ ವಿವರ ಇದೆ ಎಂಬುದು ಗೊತ್ತಿಲ್ಲದಿರುವುದು ವಿಪರ್ಯಾಸ. ಅದಲ್ಲದೆ ಬಿಎಲ್‌ಒಗಳಿಗೆ ಸರಿಯಾದ ತರಬೇತಿಯೂ ಆಗದಿರುವುದು ಇದಕ್ಕೆಲ್ಲ ಕಾರಣ. ಸಮಾನ ಫೋಟೊ, ನಕಲಿ ಇದೆಯೇ ಎಂದು ಪರಿಶೀಲಿಸಿ ಎಂಬ ಆಯ್ಕೆಯೂ ಬಿಎಲ್‌ಒ ಆ್ಯಪ್‌ನಲ್ಲಿ ಇದೆ. ಆದರೆ, ನೈಜ ಮತದಾರರದ್ದು ಕೂಡ ನಕಲಿ ಫೋಟೊ ಇದರಲ್ಲಿ ಪತ್ತೆಯಾಗಿರುವುದು ಆತಂಕಕಾರಿ ವಿಚಾರ.
ಅದಲ್ಲದೆ ಆ್ಯಪ್‌ನಲ್ಲಿ ೮೫ಕ್ಕೂ ಹೆಚ್ಚು ವಯಸ್ಸಿನ ಮತದಾರರನ್ನು ಪ್ರತ್ಯೇಕವಾಗಿ ಗುರುತಿಸುವ ಆಯ್ಕೆ ಇದೆ. ಎನ್ಯುಮರೇಶನ್ ಫಾರಂ ಭರ್ತಿ ಮಾಡಿಕೊಟ್ಟಿರುವ ೮೫ಕ್ಕೂ ಹೆಚ್ಚು ವಯಸ್ಸಿನ ಮೇಲಿರುವ ಅರ್ಹ ಮತದಾರರನ್ನು ಎಎಸ್‌ಡಿಡಿಒ (ASSDO) ಇದರಲ್ಲಿ ನೋಡುವುದು ಎಷ್ಟು ಸರಿ ಎಂಬುದೇ ಪ್ರಶ್ನಾರ್ಹವಾಗಿದೆ.
ವಿವರ ವ್ಯತ್ಯಾಸವಿದ್ದರೆ ನೋಟಿಸ್?
೨೦೦೨ರ ಮತ್ತು ೨೦೨೫ರ ಮತದಾರರ ಪಟ್ಟಿ ಎರಡರಲ್ಲೂ ಮತದಾರರ ಹೆಸರು ಇದ್ದು, ವಿವರಗಳಲ್ಲಿ ವ್ಯತ್ಯಾಸವಿದ್ದರೆ ಅಂಥವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಲಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ತಿಳಿಸಿರುವ ಅಗತ್ಯ ದಾಖಲೆಗಳನ್ನು, ಇಆರ್‌ಒ ಅವರ ಮುಂದೆ ಹಾಜರುಪಡಿಸಬೇಕಾಗಿದೆ. ನೋಟಿಸ್ ಬಂದ ನಂತರ ಬಿಎಲ್‌ಒಗಳಿಗೆ ದಾಖಲೆ ನೀಡಿದರೆ ಸಾಕೇ? ಅಥವಾ ಇಆರ್‌ಒ ನೇರವಾಗಿ ಇಯರಿಂಗ್ ಮಾಡಲಿದ್ದಾರೆಯೇ? ಪ್ರಸಕ್ತ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಜಿಲ್ಲೆಯ ಮತದಾರರಿಗೆ ಲಾಜಿಕಲ್ ಡಿಸ್ಕ್ರೆಪೆನ್ಸಿ ಅಡಿಯಲ್ಲಿ ನೋಟಿಸ್ ನೀಡಿದರೆ ಅವರು ಖುದ್ದಾಗಿ ಹಾಜರಾಗಿ ದಾಖಲೆ ಸಲ್ಲಿಸಬೇಕೇ ಎಂಬುದರ ಬಗ್ಗೆ ರಾಜ್ಯ ಚುನಾವಣಾ ಆಯೋಗ ಯಾವುದೇ ರೀತಿಯ ಮಾಹಿತಿ ನೀಡಿಲ್ಲ.
ಎಎಸ್‌ಡಿಡಿಒ ಎಂದರೇನು?
ಎ-ಅಬ್ಸೆಂಟ್(ಬಿಎಲ್‌ಒ ಗಣತಿ ನಮೂನೆ ತಲುಪಿಸುವ ವೇಳೆ ಮತದಾರ ಲಭ್ಯವಾಗದಿ ರುವುದು), ಎಸ್-ಪರ್ಮನೆಂಟ್ ಶಿಫ್ಟಿಂಗ್(ಖಾಯಂ ಆಗಿ ಆ ಮತಗಟ್ಟೆ ವ್ಯಾಪ್ತಿಯಿಂದ ಸ್ಥಳಾಂತರಗೊಂಡಿರುವುದು), ಡಿ-ಡೆಡ್(ಮೃತಪಟ್ಟಿರುವ ಮತದಾರರು), ಡಿ-ಡೂಪ್ಲಿಕೇಟ್(ಒಂದು ಕಡೆ ಮತ ಇದ್ದರೂ ಮತ್ತೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಹೆಸರು ನೋಂದಾಯಿ ಸಿಕೊಂಡವರು), ಒ-ಅದರ್(ಇತರರು).
ಏನಿದು ಲಾಜಿಕಲ್ ಡಿಸ್ಕ್ರೆಪೆನ್ಸಿ?
ಮತದಾರರ ಎನ್ಯುಮರೇಶನ್ ಫಾರಂ ಪಡೆದ ನಂತರ ಬಿಎಲ್‌ಒಗಳು ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿದ ಬಳಿಕ ಲಾಜಿಕಲ್ ಡಿಸ್ಕ್ರೆಪೆನ್ಸಿ (ತಾರ್ಕಿಕ ವ್ಯತ್ಯಾಸ) ಅಸಂಗತ ವಿವರಗಳನ್ನು ತೋರಿಸುತ್ತಿದೆ. ತಂದೆ-ತಾಯಿ ಹಾಗೂ ಮಗ ಅಥವಾ ಮಗಳ ನಡುವೆ ೧೫ ವರ್ಷಕ್ಕಿಂತ ಕಡಿಮೆ ಅಂತರ ಇದ್ದರೆ ‘ತಾರ್ಕಿಕ ವ್ಯತ್ಯಾಸ’ ಎಂದು ಗುರುತಿಸುತ್ತಿದೆ. ಒಬ್ಬ ಮತದಾರರ ತನ್ನ ಅಜ್ಜ ಅಥವಾ ಅಜ್ಜಿಯೊಂದಿಗೆ ಮ್ಯಾಪಿಂಗ್ ಮಾಡುವಾಗ ಕನಿಷ್ಠ ೪೦ ವರ್ಷಕ್ಕಿಂತ ಹೆಚ್ಚು ಅಂತರ ಹೊಂದಿರಬೇಕು. ಒಂದು ವೇಳೆ ಕಡಿಮೆ ಅಂತರವಿದ್ದಲ್ಲಿ ಅಂತಹ ಮತದಾರರನ್ನು ಲಾಜಿಕ್ ಡಿಸ್ಕ್ರೆಪೆನ್ಸಿ ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತಿದೆ. ಅಣ್ಣ-ತಮ್ಮ, ಅಕ್ಕ-ತಂಗಿಯಂದಿರ ನಡುವೆ ೯ ತಿಂಗಳಿಗಿಂತ ಕಡಿಮೆ ಅಂತರ ಇದ್ದರೂ ತಾರ್ಕಿಕ ವ್ಯತ್ಯಾಸ ಎಂದು ಗುರುತಿಸಲ್ಪಡುತ್ತದೆ.
ಪ್ರೊಜಿನಿ ಮ್ಯಾಪಿಂಗ್ (ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ಯೊಂದಿಗೆ) ಮ್ಯಾಪಿಂಗ್ ಮಾಡುವಾಗ ನಾವು ಯಾರೊಂದಿಗೆ ಮ್ಯಾಪಿಂಗ್ ಮಾಡುತ್ತೇವೆಯೋ ಅಂತಹ ವ್ಯಕ್ತಿ ಆರಕ್ಕಿಂತ ಹೆಚ್ಚು ಮತದಾರರೊಂದಿಗೆ ಮ್ಯಾಪಿಂಗ್ ಆಗಿದ್ದರೆ ತಾರ್ಕಿಕ ವ್ಯತ್ಯಾಸ ಎಂದು ಬಿಎಲ್‌ಒನಲ್ಲಿರುವ ಆ್ಯಪ್ ಗುರುತಿಸುತ್ತಿದೆ. ತಪ್ಪಾಗಿ ಲಿಂಗ ನಮೂದಿಸಿದ್ದರೆ ೨೦೦೨ರ ಮತಪಟ್ಟಿಯ ಹೆಸರು ಮತ್ತು ೨೦೨೫ರ ಮತಪಟ್ಟಿಯ ಹೆಸರು ತಾಳೆಯಾಗದಿದ್ದರೆ, ವಯಸ್ಸು ಸೇರಿದಂತೆ ನಾನಾ ಸಣ್ಣಪುಟ್ಟ ಕಾರಣಗಳಿಂದ ಮತದಾರರು ಲಾಜಿಕಲ್ ಡಿಸ್ಕ್ರೆಪೆನ್ಸಿ ಎಂದು ಬಿಎಲ್‌ಒ ಆ್ಯಪ್‌ನಲ್ಲಿ ಪ್ರತ್ಯೇಕಿಸಲಾಗುತ್ತಿದೆ.