ಮೋದಿ ಆತ್ಮಸಾಕ್ಷಿ ಕೆಣಕಿದ ‘ಜೆನ್ ಝಿ’ಗಳು

Update: 2026-07-30 10:30 IST

ಜೆನ್ ಝಿಗಳ ಚಳವಳಿ ರಾಷ್ಟ್ರ, ಅಂತರ್‌ರಾಷ್ಟ್ರ ಮಟ್ಟದಲ್ಲಿ ಮೋದಿ ಇಮೇಜ್‌ಗೆ ಧಕ್ಕೆ ಮಾಡಿದೆ. ಯುವಕರು ತೋರಿದ ಧೈರ್ಯ ಉಳಿದವರಿಗೂ ಮಾದರಿಯಾಗಲಿದೆ. ಅಷ್ಟೇ ಅಲ್ಲ, ಚಳವಳಿಗೆ ಎನ್‌ಡಿಎ ಸರಕಾರ ಬೆಚ್ಚಿರುವುದಂತೂ ನಿಜ. ಪ್ರಧಾನಿ ಮೋದಿ ಪೆಟ್ಟು ತಿಂದ ಹುಲಿಯಂತಾಗಿದ್ದು, ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಏಕೆಂದರೆ, ಇದುವರೆಗೆ ಯಾರೂ ಅವರ ಆತ್ಮಸಾಕ್ಷಿ ಕೆಣಕಿರಲಿಲ್ಲ. ಜೆನ್ ಝಿಗಳು ಆ ಕೆಲಸ ಮಾಡಿದ್ದಾರೆ.

ಇದೊಂದು ಐತಿಹಾಸಿಕ ಚಳವಳಿ. ಬಹುಶಃ ಇತ್ತೀಚಿನ ವರ್ಷಗಳಲ್ಲಿ ಇಂಥದೊಂದು ಹೋರಾಟ ನಡೆದಿರಲಿಲ್ಲ. ಜಯಪ್ರಕಾಶ ನಾರಾಯಣ್ ನೇತೃತ್ವದ ‘ನವನಿರ್ಮಾಣ ಚಳವಳಿ’ ನಂತರದ ದೊಡ್ಡ ಹೋರಾಟ ಎನ್ನುವುದರಲ್ಲಿ ಅನುಮಾನವಿಲ್ಲ. 15 ವರ್ಷದ ಹಿಂದೆ ಯುಪಿಎ ಸರಕಾರದ ವಿರುದ್ಧ ನಡೆದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಇಷ್ಟು ಬಿರುಸಾಗಿರಲಿಲ್ಲ. ಆದರೂ, ಡಾ. ಮನಮೋಹನ್ ಸಿಂಗ್ ಸರಕಾರ ಮನ್ನಣೆ ನೀಡಿತು. ಈಗಿನ ಜೆನ್ ಝಿಗಳ ಹೋರಾಟ ಆ ಆಂದೋಲನವನ್ನೂ ಮೀರಿಸಿತು.

2014ರ ಬಳಿಕ ದೇಶದಲ್ಲಿ ‘ಅಘೋಷಿತ ತುರ್ತು ಪರಿಸ್ಥಿತಿ’ ಇದೆ ಎಂಬ ಆರೋಪವಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜೋಡಿಗೆ ಆಡಳಿತ ಪಕ್ಷವಷ್ಟೇ ಅಲ್ಲ, ವಿರೋಧ ಪಕ್ಷಗಳ ನಾಯಕರೂ ದಿಗಿಲು ಬಿದ್ದಿದ್ದಾರೆ. ಎಲ್ಲೆಡೆ ಉಸಿರುಗಟ್ಟುವ ವಾತಾವರಣ ಇದೆ. ಸಾಂವಿಧಾನಿಕ ಸಂಸ್ಥೆಗಳು ಅವರ ಹಿಡಿತಕ್ಕೆ ಸಿಕ್ಕಿ ನಲುಗಿವೆ. ಈಗ ಜೆನ್ ಝಿಗಳು ನಡೆಸಿದ ಹೋರಾಟದ ಫಲವಾಗಿ ಬಿಗುವಿನ ವಾತಾವರಣ ಸ್ವಲ್ಪಮಟ್ಟಿಗೆ ಸಡಿಲಗೊಂಡಿದೆ. ಎಲ್ಲರೂ ನಿಟ್ಟುಸಿರು ಬಿಟ್ಟು ನಿರಾಳವಾಗಿದ್ದಾರೆ.

ಜೆನ್ ಝಿಗಳು ಎನ್‌ಡಿಎ ಸರಕಾರದ ಸೊಲ್ಲಡಗಿಸಿದ್ದಾರೆ. ಮೋದಿ, ಶಾ ಅವರ ಗರ್ವಭಂಗ ಮಾಡಿದ್ದಾರೆ. ಈ ಇಬ್ಬರನ್ನು ಪ್ರಶ್ನೆ ಮಾಡಲು ಯಾರಿಗೂ ಧೈರ್ಯವಿರಲಿಲ್ಲ. ಪ್ರಶ್ನೆ ಮಾಡಿದವರ ಮೇಲೆ ಸಿಬಿಐ, ಈ.ಡಿ., ಐಟಿ ಛೂ ಬಿಡಲಾಗುತ್ತಿದೆ. ಆದರೆ, ಮೊದಲ ಸಲ ಕೇಂದ್ರ ಸರಕಾರದ ಯಾವ ಆಟವೂ ನಡೆದಿಲ್ಲ. ವಿದ್ಯಾರ್ಥಿಗಳ ಮೇಲೆ ಈ ಸಂಸ್ಥೆಗಳನ್ನು ಛೂ ಬಿಡಲು ಅವರ ಬಳಿ ಏನೂ ಇಲ್ಲ. ಕಪ್ಪು ಹಣವಿಲ್ಲ. ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಯಾವುದೇ ಅಕ್ರಮ ಎಸಗಿಲ್ಲ. ಹೀಗಾಗಿ, ಲಾಠಿ, ಅಶ್ರುವಾಯು, ಪೆಲೆಟ್ ಗನ್, ಜಲ ಫಿರಂಗಿ ಬಿಟ್ಟು ಮತ್ಯಾವ ‘ಅಸ್ತ್ರ’ ಬಳಸಲು ಆಗಿಲ್ಲ. (ಬಿಹಾರದಲ್ಲಿ ಎಕೆ-47 ಪಿಸ್ತೂಲ್ ಉಪಯೋಗಿಸಲಾಯಿತು ಎಂಬ ದೂರುಗಳಿವೆ) ಅದಕ್ಕೂ ಪ್ರತಿಭಟನಾಕಾರರು ಜಗ್ಗಲಿಲ್ಲ. ಬಗ್ಗಲಿಲ್ಲ. ಜುಲೈ 20ರಂದು ಪೊಲೀಸರು ನಡೆಸಿದ ದೌರ್ಜನ್ಯದ ಬಳಿಕ ಚಳವಳಿ ಪ್ರಬಲವಾಯಿತು. ಅಕ್ಷರಶಃ ‘ಜಿರಳೆ’ಗಳಂತೆ ಜೆನ್ ಝಿಗಳು ದಿಲ್ಲಿ ರಸ್ತೆಗಳನ್ನು ಮುತ್ತಿದರು. ಸರಕಾರ ಹೆದರಿತು. ಸಂಧಾನದ ಮಾರ್ಗ ಹಿಡಿಯಿತು. ಬೇರೆ ದಾರಿ ಕಾಣದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಿತು. ಮೋದಿ ಸರಕಾರದ ಎರಡನೇ ‘ವಿಕೆಟ್’ ಪತನವಿದು. ಮೊದಲ ವಿಕೆಟ್ ಬಿದ್ದಿದ್ದು ‘ಮೀ ಟು’ ಪ್ರಕರಣದಲ್ಲಿ.

ದೇಶದಲ್ಲಿ ಭಯದ ವಾತಾವರಣ ಹೇಗಿತ್ತೆಂದು ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿವರಿಸಿದ್ದಾರೆ. ಅವರ ಮಾತಿನಲ್ಲೇ ಹೇಳುವುದಾದರೆ, ‘‘ನನ್ನನ್ನೂ ಒಳಗೊಂಡು ಎಲ್ಲರೂ ಮೋದಿ ಮತ್ತು ಶಾ ವಿರುದ್ಧ ಬಹಿರಂಗವಾಗಿ ಮಾತನಾಡಲು ಹೆದರುತ್ತಿದ್ದೆವು. ಹೇಗೆ ಧೈರ್ಯವಾಗಿ ನಿಲ್ಲಬೇಕೆಂದು ಯುವಕರು ತೋರಿಸಿದ್ದಾರೆ’’. ಹೌದು, ಅಯ್ಯರ್ ಆಡಿರುವ ಮಾತು ನಿಜ. ಸದ್ಯ, ಬಿಜೆಪಿ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರನ್ನು ಬಿಟ್ಟರೆ ಮತ್ತೊಬ್ಬರು ಮೋದಿ, ಶಾ ಅವರ ವಿರುದ್ಧ ಮಾತಾಡುತ್ತಿರಲಿಲ್ಲ.

ಜೆನ್ ಝಿಗಳ ಪ್ರತಿಭಟನೆಯನ್ನು ಸುಲಭವಾಗಿ ಹೊಸಕಿ ಹಾಕಬಹುದು ಎಂದು ಸರಕಾರ ಭಾವಿಸಿತ್ತು. ಆದರೆ, ವಿದ್ಯಾರ್ಥಿಗಳು, ಯುವಕರು ಒಮ್ಮೆ ಬೀದಿಗಿಳಿದರೆ ನಿಯಂತ್ರಿಸುವುದು ಕಷ್ಟವೆಂದು ಈ ಚಳವಳಿ ಖಚಿತಪಡಿಸಿದೆ. ಈ ಹಿಂದೆ, ಕೃಷಿ ವಿರೋಧಿ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ‘ಕನಿಷ್ಠ ಬೆಂಬಲ ಬೆಲೆ’ (ಎಂಎಸ್‌ಪಿ) ಖಾತ್ರಿಪಡಿಸಬೇಕು ಎಂದು ಆಗ್ರಹಿಸಿ ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶ ರೈತರು 386 ದಿನ ಪ್ರತಿಭಟನೆ ನಡೆಸಿದ್ದರು. ಆಗ 700ಕ್ಕೂ ಹೆಚ್ಚು ರೈತರು ಮೃತಪಟ್ಟರು. ಒತ್ತಡಕ್ಕೆ ಸರಕಾರ ಮಣಿಯಿತಾದರೂ, ತೀರ್ಮಾನ ಕೈಗೊಳ್ಳಲು ಒಂದು ವರ್ಷ ತೆಗೆದುಕೊಂಡಿತು. ಕೃಷಿ ಕಾಯ್ದೆ ವಾಪಸ್ ಪಡೆಯಿತು. ರೈತರಿಗೆ ಕೊಟ್ಟ ಭರವಸೆಗಳು ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಜೆನ್ ಝಿಗಳು ಕೇವಲ 36 ದಿನಗಳಲ್ಲಿ ಸರಕಾರದ ಕಿವಿ ಹಿಂಡಿದ್ದಾರೆ.

ಪ್ರಸ್ತುತ, ‘ದೇಶವೆಂದರೆ ಮೋದಿ, ಮೋದಿ ಎಂದರೆ ದೇಶ’ ಎಂಬ ಸ್ಥಿತಿಯಿದೆ.‘ಮೋದಿ ಮೇನಿಯಾ’ (ಮೋದಿ ಮೇಲಿನ ಹುಚ್ಚು ಅಭಿಮಾನ) ಮತ್ತು ‘ಮೋದಿ ಫೋಬಿಯಾ’ (ಮೋದಿ ಅವರ ಭಯ) ಎರಡೂ ಇದೆ. ಇನ್ನು ಮುಂದೆ ಕಡಿಮೆ ಆಗಬಹುದು. ವಿದ್ಯಾರ್ಥಿ, ಯುವಕರ ಪ್ರತಿಭಟನೆಯಿಂದ ಎನ್‌ಡಿಎ ಕೋಟೆ ಅಲುಗಾಡಿದೆ. ಕೋಟೆ ಅಲುಗಾಡಿಸಿದವರನ್ನು ‘ಪಾಕಿಸ್ತಾನಿ’ಗಳು, ‘ದೇಶ ದ್ರೋಹಿ’ಗಳು, ‘ಅರ್ಬನ್ ನಕ್ಸಲರು’ ಹಾಗೂ ‘ತುಕಡೆ ತುಕಡೆ ಗ್ಯಾಂಗ್’ ಎಂದು ಆರೋಪಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದರು. ಅವರ ತಂತ್ರ- ಕುತಂತ್ರ ಕೈಗೂಡಲಿಲ್ಲ. ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರ ಮಕ್ಕಳೇ ಚಳವಳಿಯಲ್ಲಿ ಭಾಗವಹಿಸಿದ್ದು ಗಮನಿಸಬೇಕಾದ ಅಂಶ.

‘ಭ್ರಷ್ಟಾಚಾರ ವಿರೋಧಿ ಆಂದೋಲನ’ದ ಬಳಿಕ ವಿದ್ಯಾರ್ಥಿ, ಯುವಕರು ಯಾವ ಹೋರಾಟಕ್ಕೂ ಇಳಿದಿರಲಿಲ್ಲ. ಬಹುತೇಕರು ‘ಮೋದಿ ಮೋಡಿ’ಗೆ ಒಳಗಾಗಿದ್ದರು. ಸಭೆ-ಸಮಾರಂಭಗಳಲ್ಲಿ ‘ಮೋದಿ, ಮೋದಿ’ ಎಂದು ಕೂಗುತ್ತಿದ್ದವರು ಬಹುತೇಕ ಇವರೇ. ‘ಇವರಿಗೆ ಏನಾಗಿದೆ? ಯಾವುದರ ವಿರುದ್ಧವೂ ದನಿ ಎತ್ತುತ್ತಿಲ್ಲ. ದೇಶದ ಇತಿಹಾಸ ಗೊತ್ತಿಲ್ಲ. ಸಂಸ್ಕೃತಿ ತಿಳಿವಳಿಕೆ ಇಲ್ಲ. ಸ್ವಾತಂತ್ರ್ಯ ಹೋರಾಟದ ಕಲ್ಪನೆ ಇಲ್ಲ’ ಎಂದು ಬಹುತೇಕರು ಗೊಣಗುತ್ತಿದ್ದರು. ಈ ಅಭಿಪ್ರಾಯವನ್ನು ನವ ಜವಾನರು ಉಲ್ಟಾಪಲ್ಟಾ ಮಾಡಿದ್ದಾರೆ. ಗೊಣಗಾಟಕ್ಕೆ ಉತ್ತರ ನೀಡಿದ್ದಾರೆ. ಉಪವಾಸ ಸತ್ಯಾಗ್ರಹದ ಮೂಲಕ ಮಹಾತ್ಮನನ್ನು ನೆನಪಿಸಿದ್ದಾರೆ. ಗಾಂಧೀಜಿ ಜನ ಮಾನಸದಲ್ಲಿದ್ದಾರೆ. ಮುಂದೆಯೂ ಇರುತ್ತಾರೆ ಎಂದು ಸಾರಿದ್ದಾರೆ. ಭಾಷಣದಲ್ಲಿ ಭಗತ್‌ಸಿಂಗ್ ಸೇರಿದಂತೆ ಅನೇಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಈ ನೆಲದ ಬಹು ಭಾಷೆ, ಬಹು ಸಂಸ್ಕೃತಿ ಹಾಗೂ ಬಹುತ್ವದ ಪರಿಕಲ್ಪನೆ ಹಿರಿಯ ತಲೆಮಾರಿನವರಿಗಿಂತ ಹೊಸ ತಲೆಮಾರಿನವರಿಗೇ ಆಳವಾಗಿ ಇರುವಂತಿದೆ. ಈ ಮಾತಿಗೆ ಕೆಲವರು ಅಪವಾದವಿರಬಹುದು ಅಷ್ಟೇ.

ಹಿಂದಿನ ಮೂರು ಲೋಕಸಭೆ ಚುನಾವಣೆಗಳನ್ನು ವಿಶ್ಲೇಷಿಸಿದರೆ ಬಿಜೆಪಿಗೆ ಅದರಲ್ಲೂ ಮೋದಿ ಅವರಿಗೆ ಬೆಂಬಲವಾಗಿ ನಿಂತಿದ್ದೇ ಈ ಸಮುದಾಯ. ಮಧ್ಯಮ, ಮೇಲ್ಮಧ್ಯಮ ವರ್ಗದವರು. ‘ಪ್ರಧಾನಿ ಬದಲಾವಣೆ ತರಬಲ್ಲರು’ ಎಂಬ ಆಶಯ ಅವರದ್ದಾಗಿತ್ತು. 12 ವರ್ಷಗಳಲ್ಲಿ ಮಹತ್ವದ ಬದಲಾವಣೆ ಏನೂ ಆಗಿಲ್ಲ. ಹಿಂದುತ್ವ, ರಾಮ ಮಂದಿರ ಬಿಟ್ಟು ಬೇರೇನೂ ಮಾತಾಡಲಿಲ್ಲ. ಇದರಿಂದ ಬಹುತೇಕರಿಗೆ ಭ್ರಮನಿರಸನ ಆಯಿತು. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕ್ರಮ ಕೈಗೊಳ್ಳಲಿಲ್ಲ.ಉದ್ಯೋಗ ಸೃಷ್ಟಿಗೆ ಮುಂದಾಗಲಿಲ್ಲ.ಹಣದುಬ್ಬರ, ಬೆಲೆ ಏರಿಕೆ ನಿಯಂತ್ರಿಸಲಿಲ್ಲ, ಇದರಿಂದ ಹತಾಶರಾದರು. ಪ್ರತಿಭಟನೆಯ ಅವಕಾಶಕ್ಕಾಗಿ ಕಾಯುತ್ತಿದ್ದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅವಕಾಶ ಒದಗಿಸಿತು.

ಅದೇ ಸಮಯಕ್ಕೆ, ‘ಯಂಗ್‌ಸ್ಟರ್ಸ್ ಆರ್ ಲೈಕ್ ಕಾಕ್ರೋಚಸ್’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಲೇವಡಿ ಮಾಡಿದರು. ತಕ್ಷಣವೇ ಇನ್‌ಸ್ಟಾದಲ್ಲಿ ಆಂದೋಲನವೇ ಆರಂಭವಾಯಿತು. ನೋಡು ನೋಡುತ್ತಿದ್ದಂತೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಉದಯವಾಯಿತು. ಅಮೆರಿಕದಲ್ಲಿದ್ದ ಅಭಿಜೀತ್ ದೀಪ್ಕೆ ಚಾಲನೆ ಕೊಟ್ಟರು. ಭಾರತಕ್ಕೂ ಬಂದಿಳಿದರು. ಲಕ್ಷಾಂತರ ಜೆನ್ ಝಿಗಳು ನೋಂದಣಿ ಮಾಡಿಕೊಂಡರು. ವಿದ್ಯಾರ್ಥಿ, ಯುವಕರಲ್ಲಿದ್ದ ಹತಾಶೆ, ಆತಂಕ, ತಳಮಳಗಳು ಸಂಘಟಿತರಾಗಲು ಕಾರಣವಾಯಿತು. ಸಿಜೆಪಿ ಬೆಳೆದ ರೀತಿ ಅಚ್ಚರಿ ಹುಟ್ಟಿಸಿತು. ಅದು ಜನಾಂದೋಲನವಾಗಿ ರೂಪುಗೊಂಡಿತು. ಹೊಸ ಪಕ್ಷದ ಮುಂದಿನ ದಾರಿ ಅಸ್ಪಷ್ಟ. ‘‘ಇದಿನ್ನು ಆರಂಭ ಅಷ್ಟೇ. ಪಿಚ್ಚರ್ ಬಾಕಿ ಇದೆ’’ ಎಂದಿದ್ದಾರೆ ಚಳವಳಿಗಾರರು. ಖಂಡಿತವಾಗಿ ಎನ್‌ಡಿಎ ಸರಕಾರಕ್ಕಿದು ಎಚ್ಚರಿಕೆ ಗಂಟೆ.

ಜೆನ್ ಝಿಗಳ ಹೋರಾಟಕ್ಕೆ ಇಷ್ಟೊಂದು ಬೆಂಬಲ ಸಿಗಬಹುದೆಂದು ಯಾರೂ ಊಹಿಸಿರಲಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಸ್ವಯಂ ಪ್ರೇರಣೆಯಿಂದ ಬಂದಿದ್ದವರು. ರಾಜಕೀಯ ಸಮಾವೇಶಗಳಿಗೆ ಖರ್ಚುವೆಚ್ಚ ಕೊಟ್ಟು, ಊಟೋಪಚಾರ ಏರ್ಪಡಿಸಿ, ಜನರನ್ನು ಕರೆತರಬೇಕು. ಆದರೂ ಕಾರ್ಯಕ್ರಮ ಮುಗಿಯುವ ವರೆಗೆ ನಿಲ್ಲುವುದಿಲ್ಲ. ಆದರೆ, ಜಂತರ್ ಮಂತರ್‌ಗೆ ಹುಡುಗರು ಅವರದೇ ಖರ್ಚಿನಲ್ಲಿ ಆಗಮಿಸಿದ್ದರು. ಎಷ್ಟೋ ಹುಡುಗರು ತಾಯಿ, ತಂದೆಗೂ ಹೇಳದೆ ಓಡಿ ಬಂದಿದ್ದರು. ಗಾಳಿಮಳೆಗೆ ಮೈಯೊಡ್ಡಿದರು. ಮೂಲ ಸೌಕರ್ಯವಿಲ್ಲದೆ ಕಷ್ಟ ಅನುಭವಿಸಿದರು. ಉದ್ದೇಶಪೂರ್ವಕ ವಾಗಿ ಸರಕಾರ ಊಟ, ನೀರು ಮತ್ತು ಶೌಚಾಲಯ ಸೌಲಭ್ಯ ಸಿಗದಂತೆ ನೋಡಿಕೊಂಡಿತು. ಪ್ರತಿಭಟನಾಕಾರರು ಪಟ್ಟ ಪಾಡು ನೋಡಿದರೆ ಇದನ್ನು ಪ್ರಜಾಪ್ರಭುತ್ವ ಎನ್ನಬೇಕೇ ಅಥವಾ ‘ಸರ್ವಾಧಿಕಾರಿ ಮನೋಧರ್ಮ’ ಎಂದು ಕರೆಯಬೇಕೇ?

ಜೆನ್ ಝಿಗಳ ಮೇಲಿನ ದೌರ್ಜನ್ಯವನ್ನು ಬಿಜೆಪಿ ಹಿರಿಯ ಮುಖಂಡ, ಮಾರ್ಗದರ್ಶಕ ಮಂಡಳಿ ಸದಸ್ಯ ಮುರಳಿ ಮನೋಹರ ಜೋಶಿ ಖಂಡಿಸಿದ್ದಾರೆ. ‘‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮೂಲಭೂತ ಹಕ್ಕು. ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಂದ್ರ ಸರಕಾರ ಬಗೆಹರಿಸಬೇಕಿತ್ತು. ಬಲ ಪ್ರಯೋಗಿಸಬಾರದಿತ್ತು’’ ಎಂದಿದ್ದಾರೆ. ವಿದ್ಯಾರ್ಥಿಗಳ ಪರ ಬ್ಯಾಟ್ ಬೀಸಿರುವ ಏಕೈಕ ಬಿಜೆಪಿ ನಾಯಕ ಜೋಶಿ. ಮಿಕ್ಕವರಿಗೆ ಮೋದಿ, ಶಾ ಜೋಡಿ ವಿರುದ್ಧ ದನಿ ಎತ್ತುವ ಶಕ್ತಿ ಇಲ್ಲ.

ಆರೆಸ್ಸೆಸ್ ಪ್ರಮುಖ ಮೋಹನ್ ಭಾಗವತ್ ಜೆನ್ ಝಿಗಳ ಚಳವಳಿಯನ್ನು ವಿಭಿನ್ನವಾಗಿ ನೋಡಿದ್ದಾರೆ. ‘‘ಯುವಕರಿಗೆ ಕಮಾಂಡ್ ಮಾಡುವ ಕಾಲ ಹೋಗಿದೆ. ನಾವು ಹುಡುಗರಾಗಿದ್ದಾಗ ವಿಧೇಯತೆ ಇರುತ್ತಿತ್ತು. ಇದು ಪ್ರಶ್ನೆ ಮಾಡುವ ಕಾಲ. ಹುಡುಗರು ಪ್ರಶ್ನಿಸುತ್ತಿದ್ದಾರೆ. ಸಂಧಾನ, ಸಂವಾದದ ಮೂಲಕ ಸಮಸ್ಯೆ ಪರಿಹರಿಸಬೇಕು’’ ಎಂದಿದ್ದಾರೆ. ‘ಸಂಘರ್ಷ ಸಮಸ್ಯೆಗೆ ಪರಿಹಾರವಲ್ಲ’ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಇತ್ತೀಚೆಗೆ ಕಂಡರಿಯದ ಚಳವಳಿ ಕಟ್ಟುವ ಮೂಲಕ ಜೆನ್ ಝಿಗಳು ಇತಿಹಾಸ ಬರೆದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಿಂದೊಮ್ಮೆ ‘‘ನಮ್ಮ ಸಚಿವರು ರಾಜೀನಾಮೆ ಕೊಡಲು ಇದು ಯುಪಿಎ ಸರಕಾರ ಅಲ್ಲ, ಎನ್‌ಡಿಎ ಸರಕಾರ’’ ಎಂದು ಹೇಳಿದ್ದರು. ಅವರ ಮಾತನ್ನು ಹೊಸ ತಲೆಮಾರಿನ ಪ್ರತಿಭಟನಾಕಾರರು ಸುಳ್ಳಾಗಿಸಿದ್ದಾರೆ. ಪಟ್ಟು ಹಿಡಿದು ಪ್ರಧಾನ್ ರಾಜೀನಾಮೆ ಕೊಡಿಸಿದ್ದಾರೆ. ತಡವಾಗಿ ವಿದ್ಯಾರ್ಥಿಗಳ ಕೂಗಿಗೆ ದನಿಗೂಡಿಸಿದ ವಿರೋಧ ಪಕ್ಷದವರಿಗೂ ಇದು ಪಾಠ. ಸಮಸ್ಯೆ ಯಾರಿಗೂ ಕಾಯುವುದಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಂತರ್ ಮಂತರ್‌ಗೆ ಹೋಗದೆ ಇದ್ದದ್ದು ಒಳ್ಳೆಯದೇ ಆಯಿತು. ಅಲ್ಲಿಗೆ ಹೋಗಿದ್ದರೆ ರಾಜಕೀಯ ಬಣ್ಣ ಬರುತ್ತಿತ್ತು.

ಒಟ್ಟಾರೆ, ಜೆನ್ ಝಿಗಳ ಚಳವಳಿ ರಾಷ್ಟ್ರ, ಅಂತರ್‌ರಾಷ್ಟ್ರ ಮಟ್ಟದಲ್ಲಿ ಮೋದಿ ಇಮೇಜ್‌ಗೆ ಧಕ್ಕೆ ಮಾಡಿದೆ. ಯುವಕರು ತೋರಿದ ಧೈರ್ಯ ಉಳಿದವರಿಗೂ ಮಾದರಿಯಾಗಲಿದೆ. ಅಷ್ಟೇ ಅಲ್ಲ, ಚಳವಳಿಗೆ ಎನ್‌ಡಿಎ ಸರಕಾರ ಬೆಚ್ಚಿರುವುದಂತೂ ನಿಜ. ಪ್ರಧಾನಿ ಮೋದಿ ಪೆಟ್ಟು ತಿಂದ ಹುಲಿಯಂತಾಗಿದ್ದು, ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಏಕೆಂದರೆ, ಇದುವರೆಗೆ ಯಾರೂ ಅವರ ಆತ್ಮಸಾಕ್ಷಿ ಕೆಣಕಿರಲಿಲ್ಲ. ಜೆನ್ ಝಿಗಳು ಆ ಕೆಲಸ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News