Dharwad | ವೈದ್ಯ ಕಿರಣ್ ಹತ್ಯೆ ಪ್ರಕರಣ; ಕೌಟುಂಬಿಕ ಕಲಹವೇ ಕಾರಣ ಎಂದ ಪೊಲೀಸ್ ಆಯುಕ್ತ ಶಶಿಕುಮಾರ್
ಧಾರವಾಡ: ನಗರದ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ನಡೆದ ವೈದ್ಯ ಡಾ. ಕಿರಣ್ ಹೊನ್ನಣ್ಣವರ್ ಹತ್ಯೆ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಗುರುವಾರ ಶವಾಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಆರೋಪಿ ಎನ್ನಲಾಗಿರುವ ಪತ್ನಿ ಪ್ರಿಯಾಂಕಾಳನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದರು.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದಾಗ ಡಾ. ಕಿರಣ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಮಗು ಜೀವಂತವಾಗಿತ್ತು. ಮಗುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು.
ಮೃತರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಪತ್ನಿ ಪ್ರಿಯಾಂಕಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆಕೆ ದೈಹಿಕ ಹಾಗೂ ಮಾನಸಿಕವಾಗಿ ಸ್ಥಿರ ಸ್ಥಿತಿಯಲ್ಲಿಲ್ಲ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಆಕೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ ಡಾ. ಕಿರಣ್ ಅವರಿಗೆ ಬೇರೆ ಮಹಿಳೆಯರೊಂದಿಗೆ ಸಂಪರ್ಕವಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಹಿಂದೆಯೂ ಪ್ರಿಯಾಂಕಾ ಚಾಕುವಿನಿಂದ ದಾಳಿ ನಡೆಸಿದ್ದಳು. ಆದರೆ, ಆಗ ಯಾವುದೇ ಗಂಭೀರ ಗಾಯಗಳಾಗದ ಕಾರಣ ಪ್ರಕರಣ ದಾಖಲಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವೈದ್ಯನ ಪೋಷಕರು ಬುಧವಾರ ರಾತ್ರಿ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಬಳಿಕ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ಕುಟುಂಬದವರು ಬಾಗಿಲು ತೆರೆಯುವಂತೆ ಒತ್ತಾಯಿಸಿದಾಗ ಪ್ರಿಯಾಂಕಾ ಬಾಗಿಲು ತೆರೆದಿದ್ದು, ಆಗ ಕಿರಣ್ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಡಾ. ಕಿರಣ್ ಅವರಿಗೆ ಸುಮಾರು ಹತ್ತು ಕಡೆ ಚಾಕುವಿನಿಂದ ಇರಿತವಾಗಿದ್ದು, ಮಗುವಿಗೂ ಮೂರು ಕಡೆ ಗಾಯಗಳಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವೈದ್ಯರ ಪತ್ನಿ ಡಾ. ಪ್ರಿಯಾಂಕಾ ಅವರನ್ನು ಲೋ ಶುಗರ್ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ದೇಹದ ಮೇಲೆ ಇನ್ಸುಲಿನ್ ಚುಚ್ಚಿಕೊಂಡಿರುವ ಗುರುತುಗಳು ಕಂಡುಬಂದಿವೆ. ಆದರೆ ಯಾವ ಕಾರಣಕ್ಕೆ ಇನ್ಸುಲಿನ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. 12 ರಿಂದ 24 ಗಂಟೆಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇರಿಸಿದ್ದೇವೆ. ಶುಗರ್ ಏರುಪೇರು ಬಿಟ್ಟರೆ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಮಾನಸಿಕ ಕಾಯಿಲೆ ಸೇರಿದಂತೆ ಇತರ ಯಾವುದೇ ಕಾಯಿಲೆ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ.
ಡಾ. ಈಶ್ವರ್ ಹಸಬಿ, ವೈದ್ಯಕೀಯ ಅಧೀಕ್ಷಕ, ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿ