ಹುಬ್ಬಳ್ಳಿ : ಹಳೆಯ ಹುಬ್ಬಳ್ಳಿಯ ಬಹಾರ್ ಬಡಾದಲ್ಲಿರುವ 'ಅಶ್ರಫ್ ಇ ಸಿಮ್ನಾ ಅಕಾಡೆಮಿ' ಸಂಸ್ಥೆಯ 'ಅಲ್ ಜಾಮಿಯಾತುಲ್ ಅಶ್ರಫಿಯಾ ಖದೀಜತುಲ್ ಕುಬ್ರಾ ಲಿಲ್ ಬನಾತ್' ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ʼಪ್ರಸ್ತುತ ಇಡೀ ವಿಶ್ವದಾದ್ಯಂತ ಎಲ್ಲ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದಾಗಿದ್ದು, ಅಗ್ರಗಣ್ಯ ಸ್ಥಾನಗಳಲ್ಲಿ ಹೆಣ್ಣು ಮಕ್ಕಳು ಮೇಲುಗೈ ಸಾಧಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆ ಸಾಲಿನಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಸಹಭಾಗಿತ್ವ ಕೂಡ ಹೆಚ್ಚಿನ ರೀತಿಯಲ್ಲಿ ಇರಬೇಕು ಎಂಬುದು ನಮ್ಮ ಆಶಯ. ಈ ಕನಸು ನನಸಾಗಲು ಶಿಕ್ಷಣ ಒಂದೇ ದಾರಿʼ ಎಂದು ಯು.ಟಿ.ಖಾದರ್ ತಿಳಿಸಿದರು.

ʼವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತಿಯೊಂದು ಕುಟುಂಬವೂ ಹೆಚ್ಚಿನ ಆದ್ಯತೆ ನೀಡಬೇಕಿದೆ. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎನ್ನುವಂತೆ, ಹೆಣ್ಣು ಮಗಳು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಯಾದರೆ ಅದು ಇಡೀ ಕುಟುಂಬದ ಏಳ್ಗೆಗೆ ಹಾಗೂ ಸಮಾಜದ ಅಭಿವೃದ್ಧಿಗೆ ದೊಡ್ಡ ಶಕ್ತಿಯಾಗುತ್ತದೆ. ಆ ಮೂಲಕ ಇಡೀ ಮುಸ್ಲಿಂ ಸಮುದಾಯವೇ ಸರ್ವತೋಮುಖ ಅಭಿವೃದ್ಧಿಯಾಗುವುದನ್ನ ಕಾಣಬಹುದು. ಇಂತಹ ದೂರದೃಷ್ಟಿಯನ್ನು ಇಟ್ಟುಕೊಂಡು 'ಇ ಸಿಮ್ನಾ ಅಕಾಡೆಮಿ'ಯಂತಹ ಸಂಸ್ಥೆಗಳು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವುದು ಶ್ಲಾಘನೀಯʼ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಯಾಸಿರ್ ಅಹಮದ್ ಖಾನ್ ಪಠಾಣ್, ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor