Hubballi | ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಆರೋಪ ; ಪೊಲೀಸರಿಂದ ಲಾಠಿ ಚಾರ್ಜ್
ಹುಬ್ಬಳ್ಳಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಕೆಲ ಯುವಕರು ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಯುವಕರನ್ನು ಚದುರಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸೆ.12ರಂದು ರಾತ್ರಿ ಸುಮಾರು 9.30 ಗಂಟೆಗೆ ಹುಬ್ಬಳ್ಳಿಯ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ಹೋಗುವ ರಸ್ತೆಯ ಬಳಿ ಮೇದಾರ್ ಓಣಿಯ ಗಣಪತಿ ಹಾಗೂ ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು. ಈ ವೇಳೆ ಕಲಾಲ್ ಓಣಿಯ ಗಣಪತಿ ಮೆರವಣಿಗೆಯ ಡಿಜೆ ಮುಂದೆ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಪ್ರಮಾಣದ ಬಲಪ್ರಯೋಗ ನಡೆಸಿ ಯುವಕರನ್ನು ಸ್ಥಳದಿಂದ ಚದುರಿಸಲಾಯಿತು ಎಂದು ತಿಳಿದು ಬಂದಿದೆ.