ಭೂಷಣ್ ಬೋರಸೆ

ಹುಬ್ಬಳ್ಳಿ: ಗಣೇಶ ಮೆರವಣಿಗೆ ವೇಳೆ ಗಲಾಟೆ ಸೃಷ್ಟಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಬ್ಬದ ಮೆರವಣಿಗೆಯಲ್ಲಿ ಯಾರೇ ಕಾನೂನು ಕೈಗೆತ್ತಿಕೊಂಡರೂ ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಿಸಿ ಕ್ಯಾಮೆರಾ ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗಣೇಶೋತ್ಸವದ ಅಂಗವಾಗಿ ನಗರದಲ್ಲಿ ಐದು ಕಡೆ ಮೆರವಣಿಗೆಗಳು ನಡೆದಿದ್ದು, ಬಹುತೇಕ ಸ್ಥಳಗಳಲ್ಲಿ ಶಾಂತಿಯುತವಾಗಿ ಕಾರ್ಯಕ್ರಮಗಳು ನಡೆದಿವೆ. ಆದರೆ ಮರಾಠ ಓಣಿಯಲ್ಲಿ ಕೆಲ ಯುವಕರು ಗಲಾಟೆ ನಡೆಸಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ಮಹಿಳೆಯರು ನಿಂತಿದ್ದ ಸ್ಥಳದಲ್ಲಿ ಕೆಲ ಯುವಕರು ಅಸಭ್ಯವಾಗಿ ವರ್ತಿಸಲು ಹಾಗೂ ಅವರ ಮೇಲೆ ಬೀಳಲು ಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಯುವಕರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಎಚ್ಚರಿಕೆಯನ್ನೂ ಲೆಕ್ಕಿಸದೆ ಕೆಲವರು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ನಡೆಸಬೇಕಾಯಿತು ಎಂದು ವಿವರಿಸಿದರು.

ಮೆರವಣಿಗೆ ವೇಳೆ ಮದ್ಯಪಾನ ಅಥವಾ ಮಾದಕ ವಸ್ತು ಸೇವಿಸಿ ಗಲಾಟೆ ಮಾಡುವವರು, ಆಯುಧಗಳೊಂದಿಗೆ ಬರುವವರು ಹಾಗೂ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಎಚ್ಚರಿಕೆ ನೀಡಿದರು.

ಘಟನೆ ನಡೆದ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಕಿಡಿಗೇಡಿಗಳನ್ನು ಗುರುತಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದರು.

ಗಣೇಶೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಡ್ರೋನ್‌ಗಳ ಮೂಲಕ ಮೆರವಣಿಗೆಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಭೂಷಣ್ ಬೋರಸೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor