ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಧರಣಿ
ಹುಬ್ಬಳ್ಳಿ : ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಧರಣಿ ನಡೆಸಲಾಯಿತು.
ಯುವ ಕಾಂಗ್ರೆಸ್ ಮುಖಂಡ ಅರ್ಜುನ ಪಾಟೀಲ ನೇತೃತ್ವದಲ್ಲಿ ಕಾರವಾರ ರಸ್ತೆಯ ಹು-ಧಾ. ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರಕಾರ, ಪ್ರಧಾನಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿದರು. ಎಸ್‌ಐಆರ್ ಹೆಸರಲ್ಲಿ ಮತಕಳವು ನಡೆದಿರುವ ಕುರಿತು ಆರೋಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಈ ಕೂಡಲೇ ಜ್ಞಾನೇಶ ಕುಮಾರ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಕಾರವಾರ ರಸ್ತೆಯ ಹಳೆಯ ಸಿಆರ್‌ಎ ಮೈದಾನದಲ್ಲಿ ಅವರನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪ ಮಾಡಿದರು. ಚುನಾವಣಾ ಆಯೋಗವು ಯಾವುದೇ ರಾಜಕೀಯ ಒತ್ತಡ ಅಥವಾ ಆಡಳಿತಾತ್ಮಕ ಪ್ರಭಾವಕ್ಕೆ ಒಳಗಾಗದೆ, ಸಂವಿಧಾನಬದ್ಧವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಯುವಕರ ಧ್ವನಿಯನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ನಾವು ಪ್ರಜಾಸತ್ತಾತ್ಮಕವಾಗಿ ಪ್ರಶ್ನಿಸುತ್ತೇವೆ. ಮತಕಳವು ಪ್ರಕರಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮ ಬಳೋಗಿ, ಅರ್ಜುನ ಪಾಟೀಲ, ಅಬ್ದುಲ್ ದೇಸಾಯಿ, ರೆಹಾನ್ ಐನಾಪುರಿ, ಪ್ರಣವ ಗಾಯಕವಾಡ, ಕಾಸಿಮ್, ಸಾಜುದ್ದೀನ ವಾಚ್‌ಮೇಕರ್, ಅಕ್ಷಯ ಪಾಟೀಲ, ಶಾನವಾಜ್ ಖಾನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.