ಧಾರವಾಡ : ಉತ್ತರ ಕನ್ನಡ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನು ಒಳಗೊಂಡ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಎಸ್ ವಿ ಸಂಕನೂರು ಅವರು ಮಂಗಳವಾರ ನಾಮಪತ್ರ ಸಲ್ಲಿಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಕ್ಷೇತ್ರದಿಂದ ಎರಡು ಬಾರಿ ಎಂಎಲ್‌ಸಿಯಾಗಿ ಆಯ್ಕೆಯಾಗಿ ಪದವೀಧರರ ಪರವಾಗಿ ಕೆಲಸ ಮಾಡಿರುವ ಸಂಕನೂರು ಅವರಿಗೆ ಜನ ಮತ್ತೊಮ್ಮೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

135ಕ್ಕೂ ಹೆಚ್ಚು ಶಾಸಕರ ಬೆಂಬಲವಿದ್ದರೂ ಕಾಂಗ್ರೆಸ್ ಸರಕಾರ ಅಸ್ಥಿರತೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಮತದಾರರ ಪಟ್ಟಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ರಿಂದ 10 ಸಾವಿರ ಅಹಿಂದ ಮತಗಳನ್ನು ತೆಗೆದುಹಾಕಲಾಗುತ್ತಿದೆ ಎಂಬ ಮುಖ್ಯಮಂತ್ರಿ ಆರೋಪ ಸುಳ್ಳು ಹಾಗೂ ರಾಜಕೀಯ ಕುತಂತ್ರ ಎಂದು ಟೀಕಿಸಿದರು.

‘ಫಾರ್ಮ್-7’ ಚುನಾವಣಾ ಆಯೋಗ ನೀಡಿರುವ ಕಾನೂನುಬದ್ಧ ಹಕ್ಕಾಗಿದ್ದು, ಮತದಾರರ ಪಟ್ಟಿಯ ಪರಿಶೀಲನೆ BLO ಹಾಗೂ BLO-2 ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿ ಬೆದರಿಸುವ ರಾಜಕಾರಣಕ್ಕೆ ಬಿಜೆಪಿ ಹೆದರುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಕೆಎಸ್‌ಆರ್‌ಟಿಸಿಗೆ ಸರ್ಕಾರದಿಂದ ಸುಮಾರು 6,500 ಕೋಟಿ ಬಾಕಿ ಉಳಿದಿದ್ದು, ನೌಕರರಿಗೆ ವೇತನ ನೀಡಲೂ ತೊಂದರೆಯಾಗಿದೆ ಎಂದು ಆರೋಪಿಸಿದ ಅವರು, ವಿವಿಧ ನಿಗಮ-ಮಂಡಳಿಗಳು ಸುಮಾರು 8,000 ಕೋಟಿ ನಷ್ಟ ಅನುಭವಿಸಿವೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯದ ಗುರಿ ನೀಡಲಾಗಿದ್ದು, ಇದರಿಂದ 11,598 ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ. ಸರ್ಕಾರ ರಾಜ್ಯವನ್ನು ‘ಕುಡುಕರ ನಾಡು’ ಮಾಡುವತ್ತ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ನಡೆಯುತ್ತಿಲ್ಲ. ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದರೂ ಸೂಕ್ತ ಪರಿಹಾರ ದೊರೆತಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಏಳು ಗಂಟೆ ತ್ರಿಫೇಸ್ ವಿದ್ಯುತ್ ನೀಡುವಲ್ಲಿಯೂ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ನಾಯಕರ ಗಮನ ರಾಜ್ಯದ ಸಮಗ್ರ ಅಭಿವೃದ್ಧಿಗಿಂತ ರಿಯಲ್ ಎಸ್ಟೇಟ್, ಬಿಡದಿ ಟೌನ್‌ಶಿಪ್ ಹಾಗೂ ಕನಕಪುರ ಏರ್‌ಪೋರ್ಟ್‌ನತ್ತ ಹೆಚ್ಚು ಇದೆ ಎಂದು ಟೀಕಿಸಿದ ಬಿ. ವೈ. ವಿಜಯೇಂದ್ರ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ, ಶಾಸಕ ಮಹೇಶ್ ಟೆಂಗಿನಕಾಯಿ ಮತ್ತಿತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor