ಸಾಂದರ್ಭಿಕ ಚಿತ್ರ | Photo credit : AI

ಹುಬ್ಬಳ್ಳಿ : ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಸಂಬಂಧಪಟ್ಟ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಬಸವ್ವ ಕಲವಾರ ಮೃತಪಟ್ಟವರು. ಹುಬ್ಬಳ್ಳಿ ಗ್ರಾಮೀಣ ಘಟಕದಲ್ಲಿ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಕುಟುಂಬ ಯೋಜನೆಯ ಉದ್ದೇಶದಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು ಎನ್ನಲಾಗಿದೆ.

ಶಸ್ತ್ರಚಿಕಿತ್ಸೆ ವೇಳೆ ಕರುಳಿಗೆ ಗಾಯ ಆರೋಪ :

ಅ.28ರಂದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಬಸವ್ವ ಅವರು ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಸಂತಾನಶಕ್ತಿ ಹರಣ ಪ್ರಕ್ರಿಯೆಗೆ ಸಂಬಂಧಿಸಿದ ನಾಳದ ಬದಲಿಗೆ ಸಣ್ಣ ಕರುಳಿಗೆ ಗಾಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಶಸ್ತ್ರಚಿಕಿತ್ಸೆ ಬಳಿಕ ಕರುಳಿಗೆ ಗಾಯವಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಆಂಬುಲೆನ್ಸ್ ಮೂಲಕ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಹಿಳೆಯ ದೇಹದ ತೂಕ ಹೆಚ್ಚಿದ್ದರಿಂದ ಶಸ್ತ್ರಚಿಕಿತ್ಸೆ ವೇಳೆ ಕರುಳಿಗೆ ಗಾಯವಾಗಿರುವುದು ತಕ್ಷಣಕ್ಕೆ ಪತ್ತೆಯಾಗಿರಲಿಲ್ಲ ಎಂದು ಕುಟುಂಬಸ್ಥರಿಗೆ ತಿಳಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ವೀಡಿಯೊ ಕರೆ ಮೂಲಕ ಕಿಮ್ಸ್ ವೈದ್ಯರಿಗೆ ಪರಿಸ್ಥಿತಿ ತೋರಿಸಿ, ಜೀವಕ್ಕೆ ಅಪಾಯವಿಲ್ಲ ಎಂಬ ಮಾಹಿತಿ ನೀಡಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಗೆ ದಾಖಲಾದ ಬಸವ್ವ ಅವರಿಗೆ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಬಳಿಕ ನಾಲ್ಕೈದು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳದೆ, ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವೈದ್ಯರ ಅಮಾನತಿಗೆ ಆಗ್ರಹ :

ಇಂತಹ ಗಂಭೀರ ನಿರ್ಲಕ್ಷ್ಯ ತೋರುವವರು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯಲು ಅರ್ಹರಲ್ಲ. ಒಂದು ಅಮಾಯಕ ಜೀವ ಬಲಿಯಾಗಿದೆ. ಪ್ರಕರಣದ ಕುರಿತು ನಿಷ್ಪಕ್ಷ ತನಿಖೆ ನಡೆಸಿ, ತಪ್ಪಿತಸ್ಥ ವೈದ್ಯರನ್ನು ಕೂಡಲೇ ಅಮಾನತುಗೊಳಿಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮೃತರ ಸಂಬಂಧಿ ಮಹಾದೇವಪ್ಪ ಆಗ್ರಹಿಸಿದರು.

ನನ್ನ ಪತ್ನಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಿದ್ದಳು. ಆದರೆ ಶಸ್ತ್ರಚಿಕಿತ್ಸೆ ವೇಳೆ ಸಂತಾನಶಕ್ತಿ ಹರಣ ಮಾಡಬೇಕಾದ ನಾಳದ ಬದಲಿಗೆ ಕರುಳಿಗೆ ಗಾಯ ಮಾಡಿದ್ದಾರೆ. ಇದರಿಂದಲೇ ಆಕೆಯ ಆರೋಗ್ಯ ಹದಗೆಟ್ಟಿದೆ. ಕಿಮ್ಸ್‌ನಲ್ಲಿ ನಾಲ್ಕೈದು ದಿನ ಚಿಕಿತ್ಸೆ ನೀಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೇಹದ ತೂಕ ಹೆಚ್ಚಿದ್ದರಿಂದ ಕರುಳು ಅಡ್ಡ ಬಂದಿತ್ತು ಎಂದು ಹೇಳಿದ್ದರು. ಈಗ ನಾಲ್ಕು ತಿಂಗಳ ಹಸುಗೂಸು ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಅವರನ್ನು ತಾಯಿಯಿಲ್ಲದೆ ಹೇಗೆ ಬೆಳೆಸಲಿ? ನನ್ನ ಪತ್ನಿಯ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

-ಮಂಜುನಾಥ ಆರ್., ಮೃತರ ಪತಿ

‘ತಜ್ಞ ವೈದ್ಯರ ತಂಡದಿಂದ ತನಿಖೆ’ :

ಕುಟುಂಬಸ್ಥರ ಆರೋಪಕ್ಕೆ ಪ್ರತಿಕ್ರಿಯಿಸಿದ ಕಿಮ್ಸ್ ಪ್ರಭಾರ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂಬ ಕುಟುಂಬಸ್ಥರ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ತಜ್ಞ ವೈದ್ಯರ ತಂಡ ರಚಿಸಲಾಗುವುದು. ಫಿಜಿಷಿಯನ್ ಹಾಗೂ ಅರವಳಿಕೆ ತಜ್ಞರನ್ನು ಒಳಗೊಂಡ ತಂಡವು ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಲಿದೆ. ವೈದ್ಯಕೀಯ ಲೋಪ ಅಥವಾ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor