ರಸ್ತೆಗೆ ಕಸ ಎಸೆಯುವವರ ಮನೆ ಮುಂದೆ ತ್ಯಾಜ್ಯ ಸುರಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ
ಹುಬ್ಬಳ್ಳಿ : ರಸ್ತೆಗೆ ಕಸ ಚೆಲ್ಲುವವರ ಮನೆಯ ಎದುರಿಗೆ ಕಸ ಸುರಿಯುವ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಶೇಷ ಕಾರ್ಯಾಚರಣೆಗೆ ಮುಂದಾಗಿದೆ.
ಜನರಿಗೆ ಅದೆಷ್ಚೋ ಬಾರಿ ಜಾಗೃತಿ ಮೂಡಿಸಿ, ತಿಳುವಳಿಕೆ ಹೇಳಿ, ಕಸ ಸಂಗ್ರಹಿಸುವ ವಾಹನಗಳನ್ನು ಮನೆ ಮನೆಗೆ ಕಳುಹಿಸಿದರೂ ಕಸವನ್ನು ರಸ್ತೆಗೆ ತಂದು ಎಸೆಯುತ್ತಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಾಲಿಕೆಯು ಇದೀಗ ರಸ್ತೆಗೆ ಕಸ ಚೆಲ್ಲುವವರ ಮನೆ ಎದುರಿಗೆ ಕಸ ಸುರಿಯುವ ಮೂಲಕ ಎಚ್ಚರಿಕೆ ನೀಡಿದೆ.
ಧಾರವಾಡ ತಪೋವನ ರಸ್ತೆಯಲ್ಲಿ ಕಸ ಚೆಲ್ಲುತ್ತಿದ್ದ ಅಪಾರ್ಟ್ ಮೆಂಟ್‌ವೊಂದರ ನಿವಾಸಿಗಳಿಗೆ ಅದೆಷ್ಟೋ ಬಾರಿ ತಿಳುವಳಿಕೆ ಹೇಳಿದರೂ ಅಲ್ಲಿನ ನಿವಾಸಿಗಳು ಅದೇ ಚಾಳಿ ಮುಂದುವರಿಸಿದ್ದರು. ಅಲ್ಲದೆ ಕಸ ಚೆಲ್ಲುವ ವೇಳೆ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ, ಈ ವೇಳೆ ತಿಳುವಳಿಕೆ ಹೇಳಿದ ಪಾಲಿಕೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದರು. ಕೊನೆಗೆ ಪಾಲಿಕೆ ಸಿಬ್ಬಂದಿ ಸ್ಥಳೀಯ ಭಾಗದ ಕಸವನ್ನು ತಂದು ಅಪಾರ್ಟ್‌ಮೆಂಟ್ ಎದುರು ಸುರಿದಿದ್ದಾರೆ.
ಇದು ಕಸ ರಸ್ತೆಗೆ ಎಸೆಯುವವರರಿಗೆ ಎಚ್ಚರಿಕೆಯಾಗಿದೆ. ಜನತೆ ಇನ್ನು ಮುಂದೆಯಾದರೂ ಮನೆ-ಮನೆಗೆ ಬರುವ ವಾಹನಕ್ಕೆ ಕಸ ನೀಡುವ ಮೂಲಕ ಸ್ವಚ್ಛತೆ ಕಾಪಾಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತ ಆಯುಕ್ತ ರುದ್ರೇಶ್ ಘಾಳಿ ಮತ್ತು ಕಾರ್ಯ ನಿರ್ವಾಹಕ ಅಭಿಯಂತರ (ಪರಿಸರ) ಸಂತೋಷ್ ಯರಂಗಳ್ಳಿ ತಿಳಿಸಿದ್ದಾರೆ.