ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಎಸ್.ವಿ ಸಂಕನೂರ ಹ್ಯಾಟ್ರಿಕ್ ಗೆಲುವು
ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಮುಗಿದಿದದ್ದು ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 33,711 ಮತ ಗಳಿಸಿ ಗೆಲುವು ಸಾಧಿಸಿದ್ಧಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ಮೋಹನ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸತತ ಮೂರನೇ ಬಾರಿಗೆ ಮೇಲ್ಮನೆ ಪ್ರವೇಶಿಸಿರುವ ಪ್ರೊ.ಎಸ್.ವಿ.ಸಂಕನೂರ್ ಅವರು 2014ರ ಚುನಾವಣೆಯಲ್ಲಿ 22, 507 ಹಾಗೂ 2020ರ ಚುನಾವಣೆಯಲ್ಲಿ 23, 857 ಮತಗಳನ್ನು ಪಡೆದಿದ್ದರು.
ಮಂಗಳವಾರ ಬೆಳಗ್ಗೆ ಶುರುವಾದ ಮತಎಣಿಕೆ ಮಧ್ಯರಾತ್ರಿ 2 ಗಂಟೆ ವರೆಗೂ ನಡೆಯಿತು.
ಅಕ್ಟೋಬರ್ 23 ರಂದು ನಡೆದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು 97,400 ಮತದಾರರ ಪೈಕಿ 73,658 ಜನ ಮತ ಚಲಾಯಿಸಿದ್ದು, ಶೇ.75.62 ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 45,110 ಪುರುಷರು ಹಾಗೂ 28,548 ಮಹಿಳೆಯರು ಇದ್ದರು.
ಪಕ್ಷೇತರ ಅಭ್ಯರ್ಥಿಯಾದ ನಿಶಾಂತ ಶಂಕರ ಬಂಕಾಪುರ 143 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ 55 ಮತಗಳು, ಪಕ್ಷೇತರ ಅಭ್ಯರ್ಥಿಯಾದ ತಳವಾರ ಶಿವಕುಮಾರ 42 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಅಬ್ದುಲ್ ಮನ್ನಾನ 120 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಡಾ. ಜಿ.ಎಚ್ ಇಮ್ರಾಪುರ 338 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಉಮೇಶ ಕೃಷ್ಣಪ್ಪ ದೈವಜ್ಞ್ 228 ಮತಗಳು, ಕೆ.ಆರ್. ಎಸ್ ಪಕ್ಷದ ಅಭ್ಯರ್ಥಿಯಾದ ಕೃಷ್ಣಾ ಎಚ್. ಬಳೆಗಾರ 141 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಕಾಂತಕುಮಾರ ಆರ್ 4,055 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಜಿಶಾನ್ ಡಿ. ಶಿರಸಂಗಿ 39 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಜೀಶಾನ್ ಅಹ್ಮದಖಾನ್ ಪಟ್ಹಾನ್ 62 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಬಸವರಾಜ ಶಂಕರಪ್ಪ ಕೊಟಗಿ 39 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಯಾದ ಸಂತೋಷ ಮನೋಹರ ವೆರ್ಣಿಕರ 85 ಮತಗಳನ್ನು ಪಡೆದಿದ್ದಾರೆ.
ಒಟ್ಟು 73,691 ಮತಗಳಲ್ಲಿ 63,446 ಮತಗಳು ಮಾನ್ಯವಾಗಿದ್ದು, 10,245 ಮತಗಳು ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ ಅವರು ತಿಳಿಸಿದ್ದಾರೆ.
ಎಸ್.ವಿ.ಸಂಕನೂರ ಅವರ ಪರಿಚಯ
1952ರ ಜೂನ್ 1ರಂದು ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನಿಸಿದ ಸಿದ್ದಲಿಂಗಪ್ಪ ಸಂಕನೂರ ಅವರು, ವೀರಪ್ಪ ಪರಪ್ಪ ಸಂಕನೂರ ಹಾಗೂ ಶಾಂತಮ್ಮ ವಿ. ಸಂಕನೂರ ದಂಪತಿಯ ಪುತ್ರ.
ನಿಡಗುಂದಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಧಾರವಾಡದ ಆರ್.ಎಲ್.ಎಸ್. ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಬಳಿಕ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಗದಗದ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಎಲ್.ಎಲ್.ಬಿ. ಪದವಿ ಪೂರ್ಣಗೊಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಶ್ರೀ ಸಿದ್ದಲಿಂಗಪ್ಪ ವೀರಪ್ಪ ಸಂಕನೂರ ಅವರು ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಗದಗ-ಬೆಟಗೇರಿ ನಗರಸಭೆಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 35 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸಂಕನೂರ ಅವರು, ಜಗದ್ಗುರು ಶಿವಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಗದಗದ ಜಗದ್ಗುರು ತೋಂಟದಾರ್ಯ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವವಿದ್ಯಾಲಯ ಹಾಗೂ ವಿಜ್ಞಾನ ಕ್ಷೇತ್ರದಲ್ಲೂ ಸೇವೆ
ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ನಾಲ್ಕು ಬಾರಿ ಹಾಗೂ ಸಿಂಡಿಕೇಟ್ ಸದಸ್ಯರಾಗಿ ಮೂರು ಬಾರಿ ಸೇವೆ ಸಲ್ಲಿಸಿರುವುದು ಅವರ ಶೈಕ್ಷಣಿಕ ಆಡಳಿತದ ಅನುಭವಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಬೆಂಗಳೂರಿನ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡಿದ್ದಾರೆ.
ಗದಗ ಜಿಲ್ಲಾ ರೋಟರಿ ಅಧ್ಯಕ್ಷರಾಗಿ, ಗದಗ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಅಧ್ಯಕ್ಷರಾಗಿ ಹಾಗೂ ಗದಗ ಬಸವಯೋಗ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಸಾರ್ವಜನಿಕ ಬದುಕಿನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ.
ಕುಟುಂಬ
ಸಿದ್ದಲಿಂಗಪ್ಪ ಸಂಕನೂರ ಅವರ ಧರ್ಮಪತ್ನಿ ಶರಣಮ್ಮ ಎಸ್. ಸಂಕನೂರ. ಪುತ್ರರಾದ ಡಾ. ಪ್ರಕಾಶ ಎಸ್. ಸಂಕನೂರ ಅವರು ಎಂ.ಎಸ್. (ಆರ್ಥೋಪೆಡಿಕ್ಸ್) ವೈದ್ಯಕೀಯ ಪದವಿ ಪಡೆದಿದ್ದು, ಮತ್ತೊಬ್ಬ ಪುತ್ರ ಸುನೀಲ ಎಸ್. ಸಂಕನೂರ ಅವರು ಎಂ.ಟೆಕ್ ಪದವೀಧರರಾಗಿದ್ದು, ಅಮೆರಿಕದ ಡೆಟ್ರಾಯಿಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.