ಪಶ್ಚಿಮ ಪದವೀಧರರ ಕ್ಷೇತ್ರ: ಮೂರನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಸಂಕನೂರ ಎಸ್.ವಿ. ಮುನ್ನಡೆ
ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಮೂರನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರೊ. ಎಸ್.ವಿ ಸಂಕನೂರ ಅವರು ಮುನ್ನಡೆ ಸಾಧಿಸಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪಶ್ಚಿಮ ಪದವೀಧರರ ಮತ ಎಣಿಕೆ ನಡೆಯುತ್ತಿದೆ. ಮೂರನೇ ಸುತ್ತಿನ ಮತ ಎಣಿಕೆಯಲ್ಲಿನ ಒಟ್ಟು 14000 ಮತಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಂಕನೂರ 6191 ಮತಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು 4795 ಮತಗಳನ್ನು ಪಡೆದಿದ್ದಾರೆ. ಕಾಂತಕುಮಾರ ಅವರು 879 ಮತಗಳನ್ನು ಪಡೆದಿದ್ದಾರೆ.
ಮೂರು ಸುತ್ತುಗಳಲ್ಲಿ ಎಣಿಕೆಯಾದ ಒಟ್ಟು 42001 ಮತಗಳಲ್ಲಿ ಸಂಕನೂರ ಎಸ್.ವಿ ಅವರು 18811 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ ಅವರು 9091 ಮತಗಳನ್ನು ಪಡೆದುಕೊಂಡಿದ್ದು, ಎಸ್.ವಿ. ಸಂಕನೂರ ಅವರು 13886 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಗೆಲವಿಗೂ ಮೊದಲೇ ಸಂಭ್ರಮಾಚರಣೆ :
ಮೂರನೇ ಸುತ್ತಿನ ಮತ ಎಣಿಕೆಯಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೃಷಿ ವಿವಿ ಬಳಿಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.