×
Ad

ರಘುಪತಿ ಭಟ್ 24 ಗಂಟೆಯೊಳಗೆ ಸ್ಪರ್ಧಾ ಕಣದಿಂದ ಸರಿಯದಿದ್ದಲ್ಲಿ ಶಿಸ್ತು ಕ್ರಮ: ಸುನೀಲ್ ಕುಮಾರ್

Update: 2024-05-23 12:32 IST

ಉಡುಪಿ, ಮೇ 23: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಮುಂದಿನ 24 ಗಂಟೆಯೊಳಗೆ ಕಣದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಪಕ್ಷದ ಶಿಸ್ತು ಉಲ್ಲಂಘಿಸಿದ ಆಧಾರದ ಮೇಲೆ ಅವರ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಘುಪತಿ ಭಟ್ ಅವರ ಗೆಳೆಯನಾಗಿ ಅವರಲ್ಲಿ 24 ಗಂಟೆಯೊಳಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ಅಥವಾ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯಾರೇ ಇದ್ದರು ಕೂಡ ಅವರ ಮೇಲೆ ಪಕ್ಷ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತದೆ ಎಂದರು.

ಈಶ್ವರಪ್ಪ ಅವರ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಂಡರೆ ರಘುಪತಿ ಭಟ್ ವಿರುದ್ಧ ವಿಳಂಬ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಒಬ್ಬರ ಬಗ್ಗೆ ಒಂದು ಕ್ರಮ, ಮತ್ತೊಬ್ಬರ ಬಗ್ಗೆ ಇನ್ನೊಂದು ಕ್ರಮ ಎಂಬುದು ಅಲ್ಲ. ಇವತ್ತು ಅಥವಾ ನಾಳೆ ರಘುಪತಿ ಭಟ್ ಸ್ಪರ್ಧೆಗೆ ನಿವೃತ್ತಿ ಘೋಷಿಸಬಹುದು ಎಂಬ ವಿಶ್ವಾಸವಿದೆ. ಈ ಬಗ್ಗೆ ಮಾತುಕತೆಯೂ ಮುಂದುವರಿದಿದೆ. ನಿವೃತ್ತಿ ಘೋಷಿಸದಿದ್ದರೆ, ರಘುಪತಿ ಭಟ್ ಅಲ್ಲ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಬಂಡಾಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನಮ್ಮ ಅಭ್ಯರ್ಥಿಯ ಗೆಲುವಿಗೆ ಎಲ್ಲ ರೀತಿಯ ಪರಿಶ್ರಮ ಹಾಕುತ್ತಿದ್ದೇವೆ. ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ದೊಡ್ಡ ಪ್ರಮಾಣದ ಪ್ರಯತ್ನ ಪ್ರಾರಂಭವಾಗಿದೆ. ತಳಮಟ್ಟದ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.


ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28  ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News