ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ : ಸಚಿವ ಈಶ್ವರ್ ಖಂಡ್ರೆ
ಗದಗ : ಬರದ ಹಿನ್ನೆಲೆಯಲ್ಲಿ, ವಿಬಿ ಜಿ ರಾಮ್ ಜಿ ಅಡಿ ಕೆಲಸದ ಗರಿಷ್ಠ ಮಿತಿ 50 ದಿನ ಹೆಚ್ಚಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಶನಿವಾರ ಗದಗ ತಾಲೂಕು ಪಂಚಾಯತಿ ವ್ಯಾಪ್ತಿಯ ಅಡವಿ ಸೋಮಾಪುರ ಗ್ರಾಮ ಪಂಚಾಯತಿಯ ತಾಂಡಾ ರಸ್ತೆಯಲ್ಲಿರುವ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರೊಂದಿಗೆ ಅವರು ಚರ್ಚೆ ನಡೆಸಿದರು.
ಬರಗಾಲದ ಕಾರಣ ಗ್ರಾಮೀಣ ಜನರು ಕೆಲಸ ಅರಸಿ ವಲಸೆ ಹೋಗುವುದನ್ನು ತಡೆಯಲು ವಿಬಿಜಿ ರಾಮ್‍ಜಿ ಯೋಜನೆಯಡಿ ನಿರಂತರ ಕೆಲಸ ನೀಡಬೇಕಾಗಿದೆ. ಗ್ರಾಮೀಣ ಭಾಗದ ಪ್ರತಿ ಜಾಬ್ ಕಾರ್ಡ್‍ಗೆ ಕೇಂದ್ರ ಸರಕಾರ ವರ್ಷಕ್ಕೆ 125 ದಿನ ಕೆಲಸ ನಿಗದಿಪಡಿಸಿದೆ. ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಹಿತದೃಷ್ಟಿಯಿಂದ ಇನ್ನೂ 50 ದಿನ ಸೇರಿಸಿ ಪ್ರತಿ ಜಾಬ್ ಕಾರ್ಡ್‍ಗೆ 175 ದಿನ ಕೆಲಸ ನೀಡಲು ಕೋರಿ ಪತ್ರ ಬರೆಯಲಾಗಿದೆ ಎಂದು ಕೂಲಿಕಾರರಿಗೆ ಅವರು ತಿಳಿಸಿದರು.
ಕಂದಕ ಬದು ಕೆಲಸ ನೀಡಿ :
ರೈತರು ಹಾಗೂ ಕೂಲಿಕಾರರಿಗೆ ಅವಶ್ಯವಾಗಿರುವ ಕಂದಕ ಬದು ಮಾಡಿಕೊಳ್ಳಲು ಅವಕಾಶ ನೀಡುವಂತೆ ರೈತರು ಮನವಿ ಮಾಡಿಕೊಂಡರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ನಂತರ ಗ್ರಾ.ಪಂ. ವ್ಯಾಪ್ತಿಯಲ್ಲಿ ಇತ್ತೀಚೆಗೆ ಪೂರ್ಣಗೊಂಡ ಕೃಷಿ ಹೊಂಡ ಕಾಮಗಾರಿಯ ಛಾಯಾಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಮಾಡಿಸಿಕೊಳ್ಳುವಂತೆ ಕೂಲಿಕಾರರಿಗೆ ಈಶ್ವರ ಖಂಡ್ರೆ ತಿಳಿಸಿದರು.
ಡಿಜಿಟಲ್ ದಾಖಲೆ ಪತ್ರ ಹಸ್ತಾಂತರ :
ರಾಜ್ಯ ಸರಕಾರದ ಭೂ ಗ್ಯಾರಂಟಿ ಯೋಜನೆಯಡಿ ಡಿಜಿಟಲ್ ಆಸ್ತಿ ದಾಖಲೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಿತ್ಯ ಗ್ರಾಪಂ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳವಂತೆ ಸೂಚಿಸಿ ಸಾಂಕೇಂತಿಕವಾಗಿ ಇಬ್ಬರು ಫಲಾನುಭವಿಗಳಿಗೆ ದಾಖಲೆ ಪತ್ರಗಳನ್ನು ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿ.ಪಂ.ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ, ತಾ.ಪಂ. ಕಾರ್ಯನಿರ್ವಾಹ ಅಧಿಕಾರಿ ಡಾ.ಎಚ್.ಎಸ್.ಜಿನಗಿ, ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುರೇಶ್ ಲಮಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಲಿಕೆ ಹಿಡಿದು ಪ್ರೋತ್ಸಾಹಿಸಿದ ಖಂಡ್ರೆ :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಸಲಿಕೆ (ಗುದ್ದಲಿ) ಹಿಡಿದು ಮಣ್ಣು ತುಂಬಿ ಕೂಲಿಕಾರ್ಮಿಕರಿಗೆ ಹುರಿದುಂಬಿಸಿದರು. ಅಲ್ಲದೇ, ಶ್ರಮ ಜೀವಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.