ಸ್ವಾತಂತ್ರ್ಯ ಚಳುವಳಿ, ವ್ಯಕಿ್ತಚಾರಿತ್ರ್ಯ ಮತ್ತು ಅಧಿಕಾರ
ಒಮ್ಮೆ ಗಾಂಧೀಜಿ ಲೋಹಿಯಾರನ್ನು ‘ಧೈರ್ಯಶಾಲಿ’
ಎನ್ನುತ್ತಾ, ‘ನಿಮ್ಮ ಬಳಗದಲ್ಲಿ ಇನ್ನೂ ಧೈರ್ಯಶಾಲಿ ಗಳಿರಬಹುದು’ ಎಂದರು. ಬಳಿಕ, ‘ಧೈರ್ಯಶಾಲಿ’ ಎಂಬ ಪರಿಕಲ್ಪನೆಯ ಬಗೆಗೇ ನಗುತ್ತಾ, ‘ಹುಲಿಯೂ ಧೈರ್ಯಶಾಲಿ ಎನಿಸಿಕೊಂಡಿರುತ್ತದಲ್ಲ!’ ಎಂದರು. ‘ನಿಮ್ಮ ಬಳಗದಲ್ಲಿ ನಿಮಗಿಂತಲೂ ಹೆಚ್ಚಿಗೆ ಕಲಿತವರಿರಬಹುದು’ ಎಂದ ಗಾಂಧೀಜಿ, ‘ವಕೀಲರೂ ಕಲಿತಿರುತ್ತಾರಲ್ಲ!’ ಎಂದು ಒಟ್ಟು ಕಲಿಕೆಯ ಪರಿಕಲ್ಪನೆಯ ಬಗೆಗೇ ನಕ್ಕರು. ನಂತರ, ‘ಆದರೆ ನಿಮ್ಮಲ್ಲಿರುವಂತೆ ಕ್ಯಾರಕ್ಟರ್ ಅಥವಾ ವ್ಯಕ್ತಿಚಾರಿತ್ರ್ಯವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಂಡು ಬರುವ ಸಾಮರ್ಥ್ಯ ನಿಮ್ಮ ಬಳಗದ ಬೇರೆಯವರಲ್ಲಿ ಸಿಗಲಾರದು’ ಎಂದರು.
ಕಳೆದ ವಾರ ಉತ್ತರಕನ್ನಡದ ‘ಕರಾವಳಿ ಮುಂಜಾವು’ ಪತ್ರಿಕೆಯಲ್ಲಿ ಈಚೆಗೆ ನೂರಕ್ಕೆ ಅಡಿಯಿಟ್ಟ ಸಮಾಜವಾದಿ ಅಮ್ಮೆಂಬಳ ಆನಂದರು ಅಂಕೋಲದಲ್ಲಿ ‘ಅಂಕೋಲೆ’ ಗಿಡಕ್ಕೆ ನೀರೆರೆಯುತ್ತಿದ್ದ ಫೋಟೊ ಕಂಡಿತು; ಇದು ಈಚೆಗೆ ನಾನು ನೋಡಿದ ಅತ್ಯಂತ ಅರ್ಥಪೂರ್ಣ ಫೋಟೊಗಳಲ್ಲಿ ಒಂದು ಎನ್ನಿಸಿತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ, ಸಮಾಜವಾದಿ ಚಳವಳಿಗೆ ನೀರೆರೆದ ಕೋಟ್ಯಂತರ ಕೈಗಳಲ್ಲಿ ದಕ್ಷಿಣ ಕನ್ನಡದ ಬಂಟ್ವಾಳದ ಅಮ್ಮೆಂಬಳ ಆನಂದರ ಪುಟ್ಟ ಕೈಗಳೂ ಇದ್ದವು. ಅದೇ ಸ್ವಾತಂತ್ರ್ಯ ಚಳವಳಿಯ ಸ್ಪಿರಿಟ್‌ನಲ್ಲಿ ಐವತ್ತು ವರ್ಷಗಳ ಕಾಲ ಅಂಕೋಲದಲ್ಲಿ ಆನಂದರು ಪತ್ರಿಕೋದ್ಯಮದ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿದರು. ಮೊನ್ನೆ ನೂರಕ್ಕೆ ಅಡಿಯಿಟ್ಟ ಅವರು ಈಗ ಮಣಿಪಾಲದ ಮಗನ ಮನೆಯಲ್ಲಿದ್ದಾರೆಂದು ಗೆಳೆಯರು ಹೇಳಿದಾಗ, ಪ್ರೀತಿಯ ಲೇಖಕಿ ವೈದೇಹಿಯವರಿಗೆ ಫೋನ್ ಮಾಡಿ, ‘ಅಮ್ಮೆಂಬಳ ಆನಂದ ಮಣಿಪಾಲದಲ್ಲಿದ್ದಾರಾ?’ ಎಂದು ಕೇಳಿದೆ.
ಆನಂದರ ಹೆಸರು ಹೇಳುತ್ತಿದ್ದಂತೆ ವೈದೇಹಿ ‘ಅವರಾ? ಅವರು ‘ಬಂಗಾರದ ಮನುಷ್ಯ’ ಎಂದರು. ‘ಅವರೊಬ್ಬ ಪ್ರೀತಿ ತುಂಬಿದ ಮನುಷ್ಯ, ಪ್ರೀತಿಯಲ್ಲದೆ ಅವರಲ್ಲಿ ಬೇರೇನನ್ನೂ ಕಾಣಲಿಲ್ಲ. ಎಲ್ಲರ ಬಗೆಗೂ ಅವರಿಗೆ ಪ್ರೀತಿ...’ ಎನ್ನುತ್ತಾ ವೈದೇಹಿ ಹಿಂಗಣ್ಣರಾಗಿ, ಸಮಾಜವಾದಿಗಳು, ಕಮಲಾದೇವಿ ಚಟ್ಟೋಪಾಧ್ಯಾಯ, ಜಾರ್ಜ್ ಫೆರ್ನಾಂಡಿಸ್... ಎಲ್ಲರನ್ನೂ ನೆನೆಯತೊಡಗಿದರು.
ಕರ್ನಾಟಕದ ಸಮಾಜವಾದಿ ಚರಿತ್ರೆಯಲ್ಲಿ ನನ್ನ ಮನಸ್ಸಿನಲ್ಲಿ ಉಳಿದಿರುವ ನೂರಾರು ಹೆಸರುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಮೆಂಬಳ ಊರಿನ ಆನಂದ ಹಾಗೂ ಅವರ ಚಿಕ್ಕಪ್ಪ ಅಮ್ಮೆಂಬಳ ಬಾಳಪ್ಪ ಇಬ್ಬರೂ ಹಸಿರಾಗಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಸ್ಪಿರಿಟ್ ಹಾಗೂ ಗಾಂಧಿ, ಲೋಹಿಯಾ ಥರದವರು ಇಂಥ ಕ್ರಿಯಾಶಾಲಿಗಳಲ್ಲಿ ಬೆಳೆಸಿದ ಆದರ್ಶ ಸಮಾಜದ ಕಲ್ಪನೆಗಳು, ಆ ಆದರ್ಶಗಳು ಅವರು ಸಹಜವಾಗಿ ಬದುಕಿದ ರೀತಿಯಲ್ಲೇ ಸಾಕಾರವಾದ ರೀತಿ- ಇವೆಲ್ಲ ಇವತ್ತಿಗೂ ಧನ್ಯತೆಯ ಭಾವ ಹುಟ್ಟಿಸುತ್ತವೆ. ಸ್ವಾತಂತ್ರ್ಯ ಚಳವಳಿಯ ಆದರ್ಶದ ಫಲವಾಗಿಯೂ ಅಮ್ಮೆಂಬಳ ಆನಂದ 1954ರಲ್ಲಿ ವಿಧವೆ ಗಂಗಮ್ಮನವರನ್ನು ಮದುವೆಯಾದರು; ಗಂಗಮ್ಮನವರ ಮಗಳನ್ನೂ ತಮ್ಮ ಮಗಳಾಗಿ ಸ್ವೀಕರಿಸಿದರು. ಆನಂದರನ್ನು ಹತ್ತಿರದಿಂದ ಬಲ್ಲವರಾಗಿದ್ದ ಅಂಕೋಲದ ಕವಿ ವಿಷ್ಣುನಾಯ್ಕರು ಕೊಡುವ ವಿವರಗಳು:
ಬಂಟ್ವಾಳದಲ್ಲಿ ಹುಟ್ಟಿದ ಅಮ್ಮೆಂಬಳ ಆನಂದ (17 ಸೆಪ್ಟಂಬರ್ 1927) ಮೆಟ್ರಿಕ್ ಶಿಕ್ಷಣ ಮುಗಿಸುವ ಹೊತ್ತಿಗೆ ಮಂಗಳೂರಿನ ಪ್ರಖರ ಸಮಾಜವಾದಿ ಕಮಲಾದೇವಿ ಚಟ್ಟೋಪಾಧ್ಯಾಯರ ವಲಯಕ್ಕೆ ಬಂದರು. ಕಮಲಾದೇವಿ ಅಷ್ಟೊತ್ತಿಗಾಗಲೇ ಲೋಹಿಯಾ, ಜಯಪ್ರಕಾಶ ನಾರಾಯಣರ ಸಂಪರ್ಕಕ್ಕೆ ಬಂದು ‘ಕಾಂಗ್ರೆಸ್ ಸಮಾಜವಾದಿ ಪಕ್ಷ’ದಲ್ಲಿದ್ದರು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಕಮಲಾದೇವಿಯವರ ಸೂಚನೆಯಂತೆ ಆನಂದ ಹುಬ್ಬಳ್ಳಿಗೆ ಬಂದು ಪ್ರಾಂತ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾದರು. ರೈಲ್ವೆ ಕೆಲಸಗಾರರನ್ನು ಸಂಘಟಿಸಿದರು. ನಂತರ ‘ನವಯುಗ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಆನಂದರ ಸಮಾಜವಾದಿ ಚಟುವಟಿಕೆಗಳನ್ನು ಸಹಿಸದ ಪತ್ರಿಕೆ ಅವರನ್ನು ಕೆಲಸದಿಂದ ತೆಗೆದುಹಾಕಿತು. ಮುಂದೆ ವಡ್ಡರ್ಸೆ ರಘುರಾಮಶೆಟ್ಟರ ಸಹಾಯದಿಂದ ಮುಂಬೈಗೆ ಬಂದ ಆನಂದ, ಹೋಟೆಲ್ ಕಾರ್ಮಿಕರಿಗೆ ರಾತ್ರಿ ಪಾಠಶಾಲೆಯಲ್ಲಿ ಪಾಠ ಹೇಳಿದರು. ನಂತರ ಮಂಗಳೂರಿಗೆ ಬಂದು ಮೇಷ್ಟರಾದರು. ‘ನವಭಾರತ’ ಪತ್ರಿಕೆಯ ಉಪಸಂಪಾದಕರಾದರು.
ಕವಿ-ರಾಜಕಾರಣಿ ದಿನಕರ ದೇಸಾಯಿ ಆನಂದರನ್ನು ‘ಜನಸೇವಕ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಲು ಅಂಕೋಲಕ್ಕೆ ಕರೆತಂದರು. ಜೊತೆಗೆ ಗಂಗಮ್ಮನವರನ್ನು ಅಂಕೋಲದ ಸುತ್ತಮುತ್ತಲ ಹಳ್ಳಿ ಮಹಿಳೆಯರ ಪ್ರಸೂತಿ ಕೆಲಸದಲ್ಲಿ ತೊಡಗಿಸಿದರು. ಅಮ್ಮೆಂಬಳ ಕುಟುಂಬ ಅಂಕೋಲದಲ್ಲಿ ಅರ್ಥಪೂರ್ಣವಾಗಿ ಬೆರೆಯತೊಡಗಿತು. ‘ಜನಸೇವಕ’ ಪತ್ರಿಕೆ ಆನಂದರಲ್ಲಿ ಮೊಳೆಯುತ್ತಿದ್ದ ಬರವಣಿಗೆಗೆ ವೇದಿಕೆಯಾಯಿತು. ಅಲ್ಲಿ ಅವರು ‘ನೇಗಿಲಯೋಗಿ’ ಎಂಬ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದರು. ದಿನಕರ ದೇಸಾಯಿ ಬಿಝಿಯಾಗಿದ್ದಾಗ ಮುಖಪುಟ ಲೇಖನಗಳು ಹಾಗೂ ಸಂಪಾದಕೀಯ ಲೇಖನಗಳನ್ನೂ ಆನಂದ ಬರೆಯುತ್ತಿದ್ದರು.
ತಮ್ಮ ಐವತ್ತು ವರ್ಷಗಳ ಅಂಕೋಲೆಯ ನಂಟಿನಲ್ಲಿ ಆನಂದ ‘ಜನಸೇವಕ’ದ ಓದುಗ, ಓದುಗಿಯರನ್ನು ರೈತಪರವಾಗಿ, ಕಾರ್ಮಿಕರ ಪರವಾಗಿ ಬೆಳೆಸಿದರು. ರೈತ ಕಾರ್ಮಿಕರ ಮನೆಮನೆಗೆ ಹೋಗಿ ಸಂಘಟಿಸಿದರು. ಅಂಕೋಲ ತಾಲೂಕು 1960ರ ದಶಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾಜವಾದಿಗಳ ಆಡಳಿತಕ್ಕೆ ಒಳಪಟ್ಟಿದ್ದರ ಹಿನ್ನೆಲೆಯಲ್ಲಿ ಆನಂದರ ಶ್ರಮ ಇದ್ದದ್ದನ್ನೂ ವಿಷ್ಣುನಾಯ್ಕರು ನೆನೆಯುತ್ತಾರೆ. 1967ರಲ್ಲಿ ದಿನಕರ ದೇಸಾಯಿ ಪ್ರಜಾಸಮಾಜವಾದಿ ಪಕ್ಷದ ಬೆಂಬಲ ಪಡೆದು ಲೋಕಸಭಾ ಚುನಾವಣೆ ಗೆದ್ದ ಹಿನ್ನೆಲೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಐದು ಜನ ಪ್ರಜಾ ಸಮಾಜವಾದಿ ಪಕ್ಷದ ಶಾಸಕರು ಗೆದ್ದದ್ದರ ಹಿನ್ನೆಲೆಯಲ್ಲಿ ದಿನಕರ ದೇಸಾಯಿ, ನಾಡಕರ್ಣಿ, ಟಿ.ಕೆ. ಮಹಮೂದ್, ಶಂಕರ ಕೇಣಿ ರೂಪಿಸಿದ ರಾಜಕೀಯ ಕಾರ್ಯತಂತ್ರದಲ್ಲಿ ಅಮ್ಮೆಂಬಳ ಆನಂದರ ಕೊಡುಗೆಯೂ ಮುಖ್ಯವಾಗಿತ್ತು.
1940ರ ದಶಕದ ಕೊನೆಯಲ್ಲಿ ಆನಂದರ ಚಿಕ್ಕಪ್ಪ ಅಮ್ಮೆಂಬಳ ಬಾಳಪ್ಪ ತಮ್ಮ ಕಣ್ಣಿಗೆ ಅಕಸ್ಮಾತ್ ಬಿದ್ದ ಮಂಗಳೂರಿನ ಬಿಜೈನ ಹುಡುಗ ಜಾರ್ಜ್ ಫೆರ್ನಾಂಡಿಸ್‌ರನ್ನು ಸಮಾಜವಾದಿ ಪಕ್ಷದ ಕಚೇರಿಗೆ ಕರೆದೊಯ್ದಿದ್ದರು. ಜಾರ್ಜ್ ಮುಂದೆ ದೇಶದ ದೊಡ್ಡ ಕಾರ್ಮಿಕ ನಾಯಕರಾಗಿ, ಸಮಾಜವಾದಿ ನಾಯಕರಾಗಿ ಬೆಳೆದರು. ಆನಂದರಿಗಿಂತ ಮೂರು ವರ್ಷ ಕಿರಿಯರಾಗಿದ್ದ ಜಾರ್ಜ್ ಹಾಗೂ ಆನಂದ ಒಟ್ಟಿಗೇ ಓದಿದವರು, ಕೆಲವು ಹೋರಾಟಗಳಲ್ಲಿ ಒಟ್ಟಿಗೇ ಭಾಗಿಯಾದವರು ಎಂಬುದನ್ನು ನೆನೆಯುತ್ತಾ ವಿಷ್ಣುನಾಯ್ಕರು ಈ ಇಬ್ಬರ ಭೇಟಿಯ ಪ್ರಸಂಗವೊಂದನ್ನು ಉಲ್ಲೇಖಿಸುತ್ತಾರೆ: ತೊಂಭತ್ತರ ದಶಕದ ಆರಂಭದಲ್ಲಿ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಕಾರವಾರದಲ್ಲಿ ಆರಂಭವಾಗಲಿದ್ದ ನೌಕಾಪಡೆಯ ಅಡಿಗಲ್ಲು ಸಮಾರಂಭಕ್ಕೆ ಬಂದಿದ್ದರು. ಅಲ್ಲಿ ಆನಂದರನ್ನು ಕಂಡ ಜಾರ್ಜ್ ‘ಆನಂದ್, ನೀವಿಲ್ಲಿ!’ ಎನ್ನುತ್ತಾ ಅಭಿಮಾನದಿಂದ ಅಪ್ಪಿಕೊಂಡರು.
ಜೀವಮಾನದುದ್ದಕ್ಕೂ ಸಮಾಜವಾದಿಯಾಗಿಯೇ ಉಳಿದಿರುವ ಅಮ್ಮೆಂಬಳ ಆನಂದರಿಗೆ ಜಾರ್ಜ್ ಫೆರ್ನಾಂಡಿಸ್ ಸಮಾಜವಾದದ ಹಾದಿ ಬಿಟ್ಟು ಕೋಮುವಾದಿಗಳ ಜೊತೆ ಕೈ ಜೋಡಿಸಿದ್ದನ್ನು ಕಂಡು ಏನೆನ್ನಿಸಿತೋ ಏನೋ. ಜಾರ್ಜರ ರಾಜಿಗಳನ್ನು ಕಂಡು ದೇಶದ ಹಲವು ಸಮಾಜವಾದಿಗಳಿಗೆ, ಪ್ರಗತಿಪರರಿಗೆ ಆದಂತೆ ಆನಂದರಿಗೂ ದಿಗ್ಭ್ರಮೆ ಆಗಿರಬಹುದು. ಈ ಮಾತು ಬರೆಯುತ್ತಿರುವಾಗ, ಚರಿತ್ರೆಯ ಚಕ್ರದ ಈಚಿನ ಉರುಳುವಿಕೆಯಲ್ಲಿ ಒಂದು ಅಂಶ ನನ್ನಂಥವರಿಗೆ ಎದ್ದು ಕಾಣುತ್ತದೆ:
ಜಾರ್ಜ್ ಫೆರ್ನಾಂಡಿಸ್ ಪಕ್ಷದಿಂದ ಪಕ್ಷಕ್ಕೆ ಸಾಗುತ್ತಾ, ಚುನಾವಣೆ ಗೆಲ್ಲುತ್ತಾ, ಸೋಲುತ್ತಾ ಮಂತ್ರಿಗಿರಿಯ ಸವಲತ್ತುಗಳನ್ನು ಅನುಭವಿಸುತ್ತಾ ಬದುಕಿದ್ದರೂ, ಅವರ ಜೀವಿತದ ಕೊನೆಗೆ ಅವರ ಹೋರಾಟಗಾರ ವ್ಯಕ್ತಿತ್ವ ಪತನಗೊಂಡಿತು. ಆದರೆ ಯಾವ ಅಧಿಕಾರಕ್ಕೂ ಕೈಚಾಚದೆ, ಸ್ವಂತ ಹಾಗೂ ಸಾರ್ವಜನಿಕ ಬದುಕಿನಲ್ಲಿ ಶುಭ್ರತೆ, ಘನತೆಗಳನ್ನು ಉಳಿಸಿಕೊಂಡ ಅಮ್ಮೆಂಬಳ ಆನಂದ ನೂರಕ್ಕೆ ಅಡಿಯಿಟ್ಟು ಈ ನೆಲದಲ್ಲಿ ಇನ್ನೂ ಏನಾದರೂ ಹೊಸತು ಹುಟ್ಟಬಹುದು ಎಂದು ಸೂಚಿಸುವಂತೆ ಅಂಕೋಲೆ ಗಿಡಕ್ಕೆ ನೀರೆರೆಯುತ್ತಿದ್ದಾರೆ. ವ್ಯಕ್ತಿಯ ಬದುಕಿನಲ್ಲಿ ಕೊನೆಗೂ ಉಳಿಯುವುದು ವ್ಯಕ್ತಿತ್ವದ ಶುಭ್ರತೆ ಹಾಗೂ ವ್ಯಕ್ತಿತ್ವದ ಸಮಗ್ರತೆಗಳೇ ಎಂಬುದನ್ನು ನೆನಪಿಸುತ್ತಿದ್ದಾರೆ.
ಆನಂದರ ವ್ಯಕ್ತಿತ್ವದ ಶುಭ್ರತೆ ಕುರಿತು ಬರೆಯುವಾಗ, ‘ಸ್ವಾತಂತ್ರ್ಯದ ಅಂತರ್ಜಲ’ ಲೋಹಿಯಾ ಕನ್ನಡಾನುವಾದಗಳ ಸಂಪುಟದಲ್ಲಿ ಮತ್ತೆ ನನ್ನ ಕಣ್ಣಿಗೆ ಬಿದ್ದ ಗಾಂಧಿ-ಲೋಹಿಯಾ ಮಾತುಕತೆ ವ್ಯಕ್ತಿತ್ವದ ಶುಭ್ರತೆಯ ಚರ್ಚೆಗೆ ಹೊಸ ಆಯಾಮ ಕೊಡುವಂತೆ ಕಂಡಿತು. ಲೋಹಿಯಾ ದಾಖಲಿಸಿರುವ ಆ ಮಾತುಕತೆಯ ಭಾಗ:
ಒಮ್ಮೆ ಗಾಂಧೀಜಿ ಲೋಹಿಯಾರನ್ನು ‘ಧೈರ್ಯಶಾಲಿ’ ಎನ್ನುತ್ತಾ ‘ನಿಮ್ಮ ಬಳಗದಲ್ಲಿ ಇನ್ನೂ ಧೈರ್ಯಶಾಲಿಗಳಿರಬಹುದು’ ಎಂದರು. ಬಳಿಕ, ‘ಧೈರ್ಯಶಾಲಿ’ ಎಂಬ ಪರಿಕಲ್ಪನೆಯ ಬಗೆಗೇ ನಗುತ್ತಾ, ‘ಹುಲಿಯೂ ಧೈರ್ಯಶಾಲಿ ಎನಿಸಿಕೊಂಡಿರುತ್ತದಲ್ಲ!’ ಎಂದರು. ‘ನಿಮ್ಮ ಬಳಗದಲ್ಲಿ ನಿಮಗಿಂತಲೂ ಹೆಚ್ಚಿಗೆ ಕಲಿತವರಿರಬಹುದು’ ಎಂದ ಗಾಂಧೀಜಿ ‘ವಕೀಲರೂ ಕಲಿತಿರುತ್ತಾರಲ್ಲ!’ ಎಂದು ಒಟ್ಟು ಕಲಿಕೆಯ
ಪರಿಕಲ್ಪನೆಯ ಬಗೆಗೇ ನಕ್ಕರು. ನಂತರ, ‘ಆದರೆ ನಿಮ್ಮಲ್ಲಿರುವಂತೆ ಕ್ಯಾರೆಕ್ಟರ್ ಅಥವಾ ವ್ಯಕ್ತಿಚಾರಿತ್ರ್ಯವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಂಡು ಬರುವ ಸಾಮರ್ಥ್ಯ ನಿಮ್ಮ ಬಳಗದ ಬೇರೆಯವರಲ್ಲಿ ಸಿಗಲಾರದು’
ಎಂದರು.
ಗಾಂಧಿ ನಿರ್ಗಮನದ ನಂತರ ಈ ಮಾತುಕತೆಯನ್ನು ನೆನೆಯುವ ಲೋಹಿಯಾಗೆ ಹೀಗೆನ್ನಿಸಿತು: ‘ನನ್ನ ಬಗೆಗಿನ ಪ್ರೀತಿ ಹಾಗೂ ನನ್ನ ಬಗೆಗೆ ಪೂರ್ಣ ಮಾಹಿತಿಯಿಲ್ಲದ ಕಾರಣ ಅವರು ನನ್ನ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿರಲೂಬಹುದು. ಆದರೆ ಅವರು ಹೇಳಿದ್ದು ಸತ್ಯವೇ ಆಗಿದ್ದರೆ ನನಗಂತೂ ನಿಜಕ್ಕೂ ಸಂತೋಷವೇ. ಅಂದರೆ, ಧೈರ್ಯವಲ್ಲ; ಜ್ಞಾನವೂ ಅಲ್ಲ; ಬದಲಿಗೆ, ವ್ಯಕ್ತಿಚಾರಿತ್ರ್ಯವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದು ಒಂದು ದೊಡ್ಡ ಮಾನವ ಗುಣ ಎಂಬುದು ಗಾಂಧೀಜಿಯ ನಿಲುವಾಗಿತ್ತು.’
ವ್ಯಕ್ತಿಯ ಕ್ಯಾರೆಕ್ಟರ್ ಅಥವಾ ವ್ಯಕ್ತಿಚಾರಿತ್ರ್ಯ ಕುರಿತ ಲೋಹಿಯಾ-ಗಾಂಧಿ ಸಂವಾದವನ್ನು ಇಲ್ಲಿ ದಾಖಲಿಸುತ್ತಿರುವಾಗ ಲೋಹಿಯಾರ ಸಂಗಾತಿ ಜಾರ್ಜ್ ಮತ್ತೆ ನೆನಪಾದರು. ಒಂದು ಕಾಲಕ್ಕೆ ಇಡೀ ಮುಂಬೈ ಸ್ತಬ್ಧವಾಗುವಂಥ ಕಾರ್ಮಿಕ ಚಳವಳಿ ನಡೆಸಿದ್ದ ಜಾರ್ಜ್ ದೇಶದ ದೊಡ್ಡ ನಾಯಕರಾಗಿದ್ದರು. ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದಾಗಲೂ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಹೀರೋ ಆದವರು. ದೇಶದ ಲಕ್ಷಾಂತರ ಕಾರ್ಮಿಕರು ಅವರ ಹೋರಾಟದ ಫಲ ಪಡೆದಿದ್ದಾರೆ. ಹಲವು ಖಾತೆಗಳ ಕೇಂದ್ರ ಸಚಿವರಾಗಿ ಜಾರ್ಜ್ ಜನರ ಕೆಲಸ ಮಾಡಿದ್ದಾರೆ. ಆದರೆ ಅಧಿಕಾರಕ್ಕಾಗಿ ಕೊನೆಯ ಘಟ್ಟದ ರಾಜಿ
ಅವರ ಇತರ ಎಲ್ಲ ಸಾಧನೆಗಳನ್ನು, ಒಂದು ಕಾಲದ ಹೀರೋಯಿಕ್ ವ್ಯಕ್ತಿತ್ವವನ್ನು ಮಣ್ಣಾಗಿಸಿದ್ದು ದುಗುಡ ಹುಟ್ಟಿಸುತ್ತದೆ.
ಇಂಥ ದುಗುಡ ಜಾರ್ಜರನ್ನು ಹತ್ತಿರದಿಂದ ಬಲ್ಲ ಅಮ್ಮೆಂಬಳ ಆನಂದರಂಥವರನ್ನು ಇನ್ನೂ ಆಳವಾಗಿ ಮುತ್ತಿರುವ ಸಾಧ್ಯತೆ ಇರುತ್ತದೆ. ಆದರೆ ಕೊನೆಯ ಒಂಭತ್ತು ವರ್ಷ ಅಲ್ಝೀಮರ್ಸ್ ಹಾಗೂ ಪಾರ್ಕಿನ್‌ಸನ್ಸ್ ಕಾಯಿಲೆಗಳಿಗೆ ತುತ್ತಾಗಿ ಒಂದು ಥರದಲ್ಲಿ ಏಕಾಂಗಿಯಾಗಿದ್ದ ಜಾರ್ಜ್‌ಗೆ
ಈ ಕುರಿತು ಏನೆನ್ನಿಸಿತ್ತೋ, ಯಾರಿಗೂ ತಿಳಿಯಲಿಲ್ಲ. ಕರ್ನಾಟಕ ಕಂಡ ಅಸಾಧಾರಣ ನಾಯಕರಾಗಿದ್ದ ಜಾರ್ಜರ ಕೊನೆಯ ವರ್ಷಗಳ ಪತನವನ್ನು ಚಣ ಪಕ್ಕಕ್ಕಿಟ್ಟು, ಅವರ ಪ್ರಚಂಡ ವ್ಯಕ್ತಿತ್ವವನ್ನು ನೆನೆಯಬೇಕು ಎನ್ನಿಸುತ್ತದೆ. ಆ ಬಗ್ಗೆ ಮುಂದೊಮ್ಮೆ ಬರೆಯಬಹುದು.