ಒಂದೆಡೆ, ನಮ್ಮ ಹೊಸ ಲೇಖಕ ಲೇಖಕಿಯರು, ರಿಸರ್ಚ್ ಹುಡುಗ ಹುಡುಗಿಯರು ಬರೆಯಲು ಏದುಸಿರು ಬಿಡುತ್ತಿರುವ ದೃಶ್ಯ; ಮತ್ತೊಂದೆಡೆ, ಹಲ ಬಗೆಯ ಡಿಜಿಟಲ್ ವೇದಿಕೆಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಕೆಲವರು ಬಾಯಿಗೆ ಬಂದಂತೆ ಪಟ ಪಟ ಬರೆಯುವ, ಬರಹದ ಭ್ರಮೆ ಹುಟ್ಟಿಸುವ ವಾಕ್ಯಗಳ ಮೆರವಣಿಗೆಯ ದೃಶ್ಯ...

ಈ ಎರಡೂ ಪರಿಯನ್ನು ಕಂಡಾಗ ಕನ್ನಡದಲ್ಲಿ ಬರೆಯುವ ಕಲೆ ಕುರಿತ ಬರಹಗಳು ಕಡಿಮೆ ಇವೆಯೇನೋ ಅನ್ನಿಸುತ್ತದೆ; ಅಥವಾ ಈ ಹೊಸ ಮಹಿಳೆಯರು, ಮಹನೀಯರು ಅಂಥ ಬರಹಗಳನ್ನು ಹುಡುಕಿಕೊಂಡು ಓದಿ ಅವುಗಳಿಂದ ಕಲಿಯುತ್ತಿಲ್ಲವೋ? ಈ ಹಿನ್ನೆಲೆಯಲ್ಲಿ, ಕೊನೆಯ ಪಕ್ಷ ಬರೆಯಲೆತ್ನಿಸುವ ಹೊಸಬರಿಗಾದರೂ ಉಪಯುಕ್ತವಾಗಲೆಂದು ಬರವಣಿಗೆಯ ಕಲೆಯ ಬಗೆಗೇ ಹೊಸ ಏನನ್ನಾದರೂ ಓದಿದಾಗಲೆಲ್ಲ ಈ ಅಂಕಣದಲ್ಲಿ ಕೊಡುತ್ತಲೇ ಇರುತ್ತೇನೆ. ಅದು ಕೊನೇ ಪಕ್ಷ ಅಂಕಣಕಾರನಿಗಾದರೂ ಪಾಠ ಕಲಿಸುತ್ತಿರುತ್ತದೆ; ಆ ಮಾತು ಬೇರೆ!

ಹೀಗೇ ಬರೆವ ಕ್ರಿಯೆಯ ಬಗ್ಗೆ ಯೋಚಿಸುತ್ತಿರುವಾಗ, ಅಮೆರಿಕದ ದೊಡ್ಡ ಲೇಖಕ ಅರ್ನೆಸ್ಟ್ ಹೆಮಿಂಗ್ವೆ ದಿನವಿಡೀ ಒಂದು ಪಕ್ಕಾ ಸಾಲು ಬರೆಯಲು ಪಡುವ ಶ್ರಮ, ಅವನ ಬರವಣಿಗೆಯ ಕ್ರಮ, ಅವನ ಬರವಣಿಗೆಯ ಶಿಸ್ತು- ಇವೆಲ್ಲವನ್ನೂ ಕುರಿತು ಆಗಾಗ ಓದಿದ ಮಾತುಗಳು ನೆನಪಾಗುತ್ತವೆ:

‘ಸೂರ್ಯೋದಯವಾದ ಮೇಲೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬರೆಯಲು ಶುರು ಮಾಡುತ್ತೇನೆ’ ಎಂದು ಹೆಮಿಂಗ್ವೆ ಒಮ್ಮೆ ಬರೆದ. ಹೀಗೆ ಶುರು ಮಾಡುವ ಹೆಮಿಂಗ್ವೆ ಅದನ್ನು ಮುಂದುವರಿಸುವ ರೀತಿ ಇದು:

‘ಪ್ರತಿ ದಿನವೂ ಹಿಂದಿನ ದಿನ ಎಲ್ಲಿಗೆ ನಿಲ್ಲಿಸಿದ್ದೆನೋ, ಅಲ್ಲಿಯತನಕ ಮತ್ತೆ ಬರೆಯುತ್ತೇನೆ. ಆಮೇಲೆ ಇಡೀ ದಿನ ಮುಂದಿನದನ್ನೋ, ಹೊಸದನ್ನೋ ಬರೆಯುತ್ತೇನೆ. ಮತ್ತೆ ಮಾರನೆಯ ದಿನ ಅದೇ ಬರವಣಿಗೆಗೆ ವಾಪಸಾಗಿ ರಿವೈಸ್ ಮಾಡುತ್ತೇನೆ. ಬರೆದಿದ್ದನ್ನು ಮತ್ತೆ ಓದುತ್ತೇನೆ. ಅದನ್ನು ಹೇಗೆ ಓದುತ್ತೇನೆಂದರೆ, ಇನ್ನೂ ಏನಾದರೂ ಹಿಂಡಲು ರಸ ಉಳಿದಿದೆಯೇ ಎನ್ನುವ ತನಕವೂ ನೋಡುತ್ತೇನೆ. ಆಗ ಮುಂದೇನಾಗುತ್ತದೆ ಎಂಬುದರ ಅಂದಾಜು ಸಿಗುತ್ತದೆ. ಅಲ್ಲಿಗೆ ನಿಲ್ಲಿಸಿ, ನಾಳೆಯತನಕ, ಅಂದರೆ ನಾಳೆ ಬರೆಯುವ ತನಕ ಬದುಕಿ ಉಳಿಯಲು ನೋಡುತ್ತೇನೆ.

ಈ ಬರೆವ ಬದುಕಿನ ದಿನಚರಿ ನಾಳೆಯತನಕ ಅಥವಾ ಹಲವು ದಿನಗಳ ತನಕ ಆ ಬರವಣಿಗೆಯ ಎಳೆಯನ್ನೋ, ಪ್ರೇರಣೆಯನ್ನೋ ಜೀವಂತವಾಗಿಡಲು ಹೆಮಿಂಗ್ವೆಗೆ ಸಹಾಯಕವಾಗುತ್ತಿತ್ತು. ‘ಆದರೆ ನಾಳೆಯತನಕ ಕಾಯುವುದಿದೆಯಲ್ಲಾ ಅದು ಬಲು ಕಷ್ಟದ ಕೆಲಸ’ ಎಂದು ಹೆಮಿಂಗ್ವೆಗೆ ಅನ್ನಿಸುತ್ತಿತ್ತು.

ಈ ಬರಹ ಓದುತ್ತಿರುವ ಹಲವರಿಗೆ ಹೆಮಿಂಗ್ವೆಯ ಬರವಣಿಗೆ ಒಂದು ‘ಲಕ್ಷುರಿ’ ಎನ್ನಿಸುವುದು ಸಹಜ. ಅದು ನಿಜ. ಇಂಥ ಲಕ್ಷುರಿ ಆಯ್ಕೆಗಳೇ ಇಲ್ಲದ ನಮ್ಮಂಥ ದೇಶಗಳಲ್ಲಿ ಇರುವುದಿಲ್ಲ. ನಮ್ಮಲ್ಲೂ ಕಾರಂತ, ತೇಜಸ್ವಿ ಆ ಥರ ಆಯ್ಕೆಯಿಂದಲೇ ಪೂರ್ಣಾವಧಿ ಲೇಖಕರಾಗಿದ್ದರು. ಪಶ್ಚಿಮದಲ್ಲಿ ಹಲವರಿಗೆ ಪೂರ್ಣಾವಧಿ ಲೇಖಕರಾಗುವ ಆಯ್ಕೆ, ಸಾಧ್ಯತೆ ಇತ್ತು. ಹಾಗೆ ಬದುಕುವ ಸಾಧ್ಯತೆಯೂ ಇತ್ತು. ಈಗಲೂ ಇದೆ. ಹೆಮಿಂಗ್ವೆ ಅಂಥವರಲ್ಲೊಬ್ಬ. ಅದೇನೇ ಇದ್ದರೂ, ಬರೆವ ಈ ಶ್ರಮದ ಕೆಲಸ ಹೆಮಿಂಗ್ವೆಯನ್ನು ತೀವ್ರವಾಗಿ ತೊಡಗಿಸುವ ಕೆಲಸ ಆಗಿರದಿದ್ದರೆ, ಈ ಕೆಲಸ ಎಲ್ಲೋ ಅವನ ಆಳದಲ್ಲಿ ಸೌಂದರ್ಯಾತ್ಮಕ ಆನಂದದ ಅನುಭವ ಕೊಡದಿದ್ದರೆ ಅವನು ಬರೆವ ಕೆಲಸವನ್ನು ಆನಂದಿಸುತ್ತಿರಲಿಲ್ಲವೇನೋ. ಹೀಗೆ ಲೀನವಾಗುವ ಆಳದ ಅಗೋಚರ ಆನಂದವಿರದಿದ್ದರೆ ಯಾರೂ ಬರೆಯುವುದಿಲ್ಲ. ಹಾಗೆ ಸುಮ್ಮನೆ ಬರೆಯುತ್ತಿದ್ದರೆ ಅದು ಜೀತದ ನೊಗ, ಅಷ್ಟೆ!

ಹೆಮಿಂಗ್ವೆಯ ರೀತಿಯಲ್ಲಿ ಶ್ರಮದ ಬರವಣಿಗೆಯಲ್ಲಿ ಲೀನವಾಗುವವರು ಒಂದೆಡೆಯಿದ್ದರೆ, ಸಹಜಸ್ಫೂರ್ತಿಯಲ್ಲಿ ಬರೆವ ಲೇಖಕ ಲೇಖಕಿಯರೂ ಮತ್ತೊಂದೆಡೆ ಇದ್ದಾರೆ. ಇಂಗ್ಲಿಷ್ ಕವಿ ಜಾನ್ ಕೀಟ್ಸ್ ಕವಿತೆಯ ಬಗ್ಗೆ ಹೇಳಿದ ಪ್ರಖ್ಯಾತ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು: ‘ಗಿಡಗಳಿಗೆ ಎಲೆಗಳು ಮೂಡುವಂತೆ ಕವಿತೆ ಮೂಡದಿದ್ದರೆ ಅದು ಬಾರದಿದ್ದರೇ ಲೇಸು.’

ಕೀಟ್ಸ್ ಗಿಂತ ಹಿರಿಯನಾದ ವರ್ಡ್ಸ್‌ವರ್ತ್ ಕೂಡ ‘ಕಾವ್ಯ ಎನ್ನುವುದು ಶಕ್ತ ಭಾವನೆಗಳ ಸಹಜ ಉಕ್ಕುವಿಕೆ; ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಸ್ಸು ನೆನಸಿಕೊಂಡ ಭಾವನೆ’ ಎಂದಿದ್ದ.

ಈ ಬಗೆಯ ಸಹಜ ಉಕ್ಕು ಅಥವಾ ತುಳುಕಿ, ಕೋಡಿ ಬೀಳುವ ಅನುಭವ ಎಲ್ಲ ಬಗೆಯ ಬರಹಗಳಲ್ಲಿ ತೊಡಗಿದವರಿಗೂ ಆಗುತ್ತಿರುತ್ತದೆ. 1978ರಲ್ಲಿ ಪ್ರಕಟವಾದ ‘ಅವಸ್ಥೆ’ ಕಾದಂಬರಿಯ ಮುನ್ನುಡಿಯಲ್ಲಿ ‘ಸುಮಾರು ಮೂವತ್ತು ದಿನಗಳ ಕಾಲ ಈ ಕಾದಂಬರಿ ನನ್ನಿಂದ ಬರೆಸಿಕೊಂಡಿದೆ’ ಎಂದು ಅನಂತಮೂರ್ತಿ ಬರೆದಿದ್ದರು. ಈ ನಿವೇದನೆಯ ಬಗ್ಗೆ ಕೊಂಕು ನುಡಿಯಲೆತ್ನಿಸಿದ ಅರೆವಿಚಾರವಾದಿ ಇಂಗ್ಲಿಷ್ ಮೇಷ್ಟರೊಬ್ಬ, ‘ಒಬ್ಬ ಲೇಖಕ ತಾನೇ ಬರೆಯೋಲ್ವೆ? ಈ ಮನುಷ್ಯ ಬರೆಸಿಕೊಂಡಿತು’ ಅಂತ ಬರೆದಿರೋದನ್ನ ನೋಡಿ!’ ಎಂದು ಕಹಿಯಾಗಿ ನಗಲೆತ್ನಿಸಿದ. ಆ ಕೊಂಕಿನ ಹಿಂದೆ ಅನಂತಮೂರ್ತಿ ಹಿಂದೊಮ್ಮೆ ಭೈರಪ್ಪನವರ ಕಾದಂಬರಿಗಳನ್ನು ವಿಮರ್ಶಿಸಿದ್ದನ್ನು ಕುರಿತು ಈ ಇಂಗ್ಲಿಷ್ ಮೇಷ್ಟ್ರರಿಗಿದ್ದ ಅಸಹನೆಯೂ ಸೇರಿತ್ತೆಂಬುದು ನಂತರ ತಿಳಿಯಿತು.

‘ನಿಮಗೆ ಸೃಜನಶೀಲ ಬರವಣಿಗೆ ಅಥವಾ ಯಾವುದೇ ನಿಜವಾದ ಬರವಣಿಗೆಯ ಪ್ರಕ್ರಿಯೆ ಎಷ್ಟು ಸಂಕೀರ್ಣವಾದುದು ಎಂಬುದು ಗೊತ್ತಿರಲಿಕ್ಕಿಲ್ಲ’ ಎಂದು ರೇಗಿ ಸುಮ್ಮನಾದೆ.

ಬರವಣಿಗೆಯನ್ನು ಈ ಥರ ಯಾಂತ್ರಿಕವಾಗಿ ನೋಡುವವರಿಗೆ ‘ಗದುಗಿನ ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎಂಬ ಕುಮಾರವ್ಯಾಸನ ವಿನಯ ಕೂಡ ಅರ್ಥವಾಗಿರಲಾರದು. ಹಾಗೆ ನೋಡಿದರೆ, ಬರವಣಿಗೆಯ ನಿತ್ಯ ಶ್ರಮದ ಬಗ್ಗೆ ಹೇಳಿದ್ದ ಹೆಮಿಂಗ್ವೆಗೂ ಕೃತಿಯೊಂದು ತಂತಾನೇ ಬರೆಸಿಕೊಳ್ಳುವುದರ ಅನುಭವವಾಗಿತ್ತು. ‘ಎ ಮೂವಬಲ್ ಫೀಸ್ಟ್’ ಎಂಬ ಪ್ಯಾರಿಸ್ ಅನುಭವಗಳ ತನ್ನ ಪುಸ್ತಕ ಕುರಿತು ಹೆಮಿಂಗ್ವೆ ಬರೆಯುವ ಮಾತು: ‘ಈ ಕತೆ ತಂತಾನೇ ಬರೆದುಕೊಂಡಿತು, ಅದರ ಜೊತೆ ಓಡಲು ಭಾಳಾ ಕಷ್ಟಪಟ್ಟೆ.’

ಹೆಮಿಂಗ್ವೆಯ ಅನುಭವದಲ್ಲಿ ಕಾಣುವ ಶ್ರಮ, ಸಹಜ ತುಳುಕು ಇವೆರಡೂ ಎಲ್ಲ ಬಗೆಯ ಸೃಜನಶೀಲ ಕೆಲಸದಲ್ಲಿ ತೊಡಗಿರುವವರಿಗೂ ಅನುಭವಕ್ಕೆ ಬಂದಿರುತ್ತದೆ. ಇವೆರಡೂ ಅನುಭವಗಳು ಲೇಖಕಿಯಲ್ಲೂ, ಕವಯಿತ್ರಿಯಲ್ಲೂ, ಬಡಗಿಯ ಕೆಲಸದಲ್ಲೂ, ಶಿಲ್ಪಿಯಲ್ಲೂ ಇರುತ್ತವೆ. ಮೊನ್ನೆ ತಾನೇ ಇದೇ ಅಂಕಣದಲ್ಲಿ, ಬರವಣಿಗೆಯ ಇತಿಹಾಸದಲ್ಲೇ ಅತ್ಯಂತ ಶ್ರಮ ಪಟ್ಟು ಬರೆದಿರಬಹುದಾದ ಜಾನ್ ಬಾಬಿಯ ಕಣ್ಣ ರೆಪ್ಪೆಯ ಬರವಣಿಗೆಯ ಬಗ್ಗೆ ಬರೆದಿದ್ದನ್ನು ನೀವು ಗಮನಿಸಿರಬಹುದು.

ಇವತ್ತು ಬರವಣಿಗೆ ಶುರು ಮಾಡುವವರಿಗೆ ಹಾಗೂ ಈಗಾಗಲೇ ಶುರು ಮಾಡಿರುವವರಿಗೆ ಹೆಮಿಂಗ್ವೆಯ ಅನುಭವದಂತೆಯೇ, ಲಂಕೇಶರು ಎಂಭತ್ತರ ದಶಕದಲ್ಲಿ ಸಣ್ಣ ಕತೆಗಳ ಕಮ್ಮಟವೊಂದರಲ್ಲಿ ಆಡಿದ ಮಾತುಗಳು ಕೂಡ ದಾರಿ ತೋರಿಸಬಲ್ಲವು. ಅಲ್ಲಿ ಅವರು ಕತೆ ಬರೆಯುವವರಿಗೆ ಹೇಳುವ ಕೆಲವು ಮಾತುಗಳು:

‘ಚಿಕ್ಕವರಾದ ನಿಮ್ಮಲ್ಲಿ ನನ್ನದೊಂದು ಅರಿಕೆ, ನೇರವಾದದ್ದನ್ನು ತಿರುಚಿ, ಕ್ಲಿಷ್ಟವಾದದ್ದನ್ನು ಸರಳಗೊಳಿಸಲು ಹೋಗಬೇಡಿ. ನೀವು ನಿಮ್ಮ ಬಗ್ಗೆ ಕಂಡುಕೊಂಡ ಸತ್ಯಗಳನ್ನು ಸಮಾಜಕ್ಕೆ ಹೆದರಿ ಸಂಕೇತಗಳ ಮೂಲಕ ಹೇಳಲು ಅನಗತ್ಯವಾಗಿ ಯತ್ನಿಸಬೇಡಿ. ನಿಮ್ಮ ಹೆಂಡತಿಯೊಂದಿಗಿನ ನಿಮ್ಮ ವಿರಸವನ್ನು ಇನ್ನೊಬ್ಬರ ಹೆಂಡತಿಯ ವಿರಸವನ್ನಾಗಿ ಬರೆದಾಗ ಅದು ಕೆಲವು ಮುಖ್ಯ ಗುಣಗಳನ್ನು ಕಳೆದುಕೊಳ್ಳುತ್ತದೆ. ನಿಮ್ಮ ಪಾಪವನ್ನೂ ಗುಟ್ಟುಗಳನ್ನೂ ದೌರ್ಬಲ್ಯಗಳನ್ನೂ ಏಕಾಂತತೆಯನ್ನೂ ಎದುರಿಸುವುದನ್ನು ಕಲಿತುಕೊಳ್ಳಿ. ಹಾಗೆ ಕಲಿತೊಡನೆ ನಿಮ್ಮ ಬರವಣಿಗೆಗೆ ವಿಚಿತ್ರ ಶಕ್ತಿ ಮತ್ತು ಸೌಂದರ್ಯ ಬರುತ್ತದೆ, ನಿಮ್ಮ ಮಾತಿಗೆ ಮಾತೃಭಾಷೆಗೆ ಕಾಣಿಕೆ ಸಲ್ಲಿಸುವ ಶಕ್ತಿ ಬರುತ್ತದೆ. ಉದಾಹರಣೆಗೆ, ನಿಮ್ಮ ಏಕಾಂತತೆ ಎಂದರೆ ಅರ್ಥ ಏನು? ನಿಮ್ಮ ಒಬ್ಬಂಟಿತನದ ಸ್ವಾರಸ್ಯ ಏನು? ಸಮಾಜದ ಎಲ್ಲ ಕಾಣ್ಕೆಯ ಸಂಪತ್ತು ಸಾಹಿತ್ಯ ಸಂಪತ್ತಾಗಿ ಬರುವುದು ಇಂಥ ಪ್ರಶ್ನೆಗಳಿಗೆ ದೊರೆತ ಗಾಢ ಉತ್ತರಗಳಿಂದ.’

ಈ ಮಾತುಗಳನ್ನು ಬರೆಯುವ ಮುನ್ನ, ‘ಇವು ನನಗೆ ನಾನೇ ಹೇಳಿಕೊಳ್ಳುತ್ತಿರುವ ಮಾತುಗಳಾದ್ದರಿಂದ ನಾನು ಹಿತವಚನದ ಧಾಟಿಯಲ್ಲಿ ಮಾತಾಡಿದರೂ ಅದು ಹಾಗಲ್ಲವೆಂದು ನೀವು ನೆನಪಿಡಬೇಕು’ ಎಂದು ಲಂಕೇಶ್ ಸೂಚಿಸುತ್ತಾರೆ. ನಮಗೆ ನಾವೇ ಹೇಳಿಕೊಂಡ ಮಾತುಗಳು ಸತ್ಯಕ್ಕೆ ಹೆಚ್ಚು ಹತ್ತಿರವಾಗಿರಬಲ್ಲವು. ಅವು ಓದುವವರ ಸತ್ಯಕ್ಕೂ ಹತ್ತಿರವಾಗಬಲ್ಲವು ಎಂಬುದು ನನ್ನ ನಂಬಿಕೆ ಕೂಡ.

ಬರವಣಿಗೆಯ ಕೆಲವು ಮೂಲ ಸಲಕರಣೆಗಳಲ್ಲಿ ನಮ್ಮ ನಮ್ಮ ಸತ್ಯದ ಹುಡುಕಾಟ ಮುಖ್ಯವಾದುದು ಎಂದು ನಂಬಿರುವವರಲ್ಲಿ ನಾನೂ ಒಬ್ಬ. ಅದರಲ್ಲೂ, ಯಾರೂ ಎದುರಿಗಿಲ್ಲದೆ, ಯಾರನ್ನೂ ಒಪ್ಪಿಸದೆ, ನನಗೆ ನಾನೇ ಹೇಳಿಕೊಳ್ಳುವ ಅದ್ಭುತ ಅವಕಾಶ ಅಥವಾ ಲಕ್ಷುರಿ ಇರುವುದು ಬರವಣಿಗೆಯಲ್ಲಿ ಮಾತ್ರ.

ನಲವತ್ತು ವರ್ಷಗಳ ಕೆಳಗೆ ನಾನು ಓದಿದ ಲಂಕೇಶರ ‘ತರುಣ ಸಾಹಿತಿಗಳನ್ನು ಕುರಿತು’ ಎಂಬ ಟೀಕೆ ಟಿಪ್ಪಣಿ ಅವತ್ತಿನಿಂದ ಇವತ್ತಿನವರೆಗೂ ನನ್ನ ಬರವಣಿಗೆಯ ಹತಾರಗಳನ್ನು, ಮಾದರಿಗಳನ್ನು ಕೆಣಕಿ ಹೊಸ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ಹಾಗೆಯೇ, ಹೆಮಿಂಗ್ವೆ , ಅನಂತಮೂರ್ತಿ, ಕೀಟ್ಸ್, ವರ್ಡ್ಸ್‌ವರ್ತ್ ಕಲಿಸುವ ಪಾಠಗಳು ಕೂಡ.

ಇಪ್ಪತ್ತಮೂರು ವರ್ಷದ ತುಂಬು ಜವ್ವನೆಯೆಂದು ದಶ ದಿಕ್ಕುಗಳಿಂದ ‘ವಾಹ್ ವಾಹ್’ ತಾರೀಫಿಗೆ ಗುರಿಯಾಗಿರುವ ವಾರ್ತಾ‘ಭಾರತಿ’ಗೆ ಕೂಡ ಈ ಪಾಠಗಳು ನೆರವಾಗಲಿ! ಹೊಸ ತಲೆಮಾರಿನ ಸಾವಿರಾರು

ಹೊಸ ಲೇಖಕ, ಲೇಖಕಿಯರನ್ನು ಸೃಷ್ಟಿಸಿರುವ ಎರಡೂವರೆ ದಶಕಗಳ

ಅವಳ ನಿತ್ಯದ ನಿರಂತರ ಪ್ರಾಮಾಣಿಕ ಶ್ರಮ ಕೂಡ ಬರೆವವರಿಗೆಲ್ಲ ಸ್ಫೂರ್ತಿಯಾಗಲಿ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor