ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪನೆಗೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಿಗೆ ಮನವಿ
MLC ಡಾ. ಆರತಿ ಕೃಷ್ಣರನ್ನು ಸಚಿವಾಲಯದ ಸಚಿವರಾಗಿ ನೇಮಿಸುವಂತೆಯೂ ಆಗ್ರಹ
ಬೆಂಗಳೂರು: ಅನಿವಾಸಿ ಕನ್ನಡಿಗರ (NRK) ಕಲ್ಯಾಣಕ್ಕಾಗಿ ಕೇರಳದ NORKA ಮಾದರಿಯಲ್ಲಿ ಪ್ರತ್ಯೇಕ ‘ಕರ್ನಾಟಕ ಅನಿವಾಸಿ ಕನ್ನಡಿಗರ ಸಚಿವಾಲಯ’ ಸ್ಥಾಪಿಸಬೇಕು ಹಾಗೂ ಅದಕ್ಕೆ ಸ್ವತಂತ್ರ ಬಜೆಟ್ ಮತ್ತು ಆಡಳಿತಾತ್ಮಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸೌದಿ ಅರೇಬಿಯದ ರಿಯಾದ್ ನಲ್ಲಿರುವ ಕರ್ನಾಟಕ ಅನಿವಾಸಿ ಒಕ್ಕೂಟ ಕರ್ನಾಟಕ ನಾನ್-ರೆಸಿಡೆಂಟ್ಸ್ ಫೋರಂ ಒತ್ತಾಯಿಸಿದೆ.
ಈ ಕುರಿತು ಉಪಮುಖ್ಯಮಂತ್ರಿ ಹಾಗೂ ನಿಯೋಜಿತ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಒಕ್ಕೂಟದ ಅಧ್ಯಕ್ಷರು, ಸಂಯೋಜಕರು ಮತ್ತು ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಕುವೈತ್, ಖತರ್, ಒಮಾನ್, ಬಹರೈನ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರು ಹಲವು ದಶಕಗಳಿಂದ ಹಣಕಾಸು ಕಳುಹಿಸುವಿಕೆ, ಹೂಡಿಕೆ, ಸಮಾಜಸೇವೆ ಹಾಗೂ ವಿವಿಧ ಮಾನವೀಯ ಚಟುವಟಿಕೆಗಳ ಮೂಲಕ ಕರ್ನಾಟಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರು ತಮ್ಮ ಕುಟುಂಬಗಳ ಜೀವನ ನಿರ್ವಹಣೆಗೆ ಮಾತ್ರವಲ್ಲದೆ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೂ ಪ್ರಮುಖ ಆಧಾರವಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದರೆ, ಅನಿವಾಸಿ ಕನ್ನಡಿಗರು ಹಲವು ಸಮಸ್ಯೆಗಳು ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರ ಕಲ್ಯಾಣ ಕ್ಕಾಗಿ ಕೇರಳದ NORKA ಮಾದರಿಯ ಪ್ರತ್ಯೇಕ ಸಚಿವಾಲಯ ಮತ್ತು ಇಲಾಖೆ ಅಥವಾ ಮಂಡಳಿಯ ಕೊರತೆ ಇದೆ. ಉದ್ಯೋಗ ಕಳೆದುಕೊಂಡು, ನಿವೃತ್ತರಾಗಿ ಅಥವಾ ಇತರ ಕಾರಣಗಳಿಂದ ವಾಪಸಾಗುವ ಗಲ್ಫ್ ವಲಸಿಗರಿಗೆ ಪುನರ್ವಸತಿ, ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಲ್ಲ. ವಿದೇಶಗಳಲ್ಲಿ ಅಪಘಾತಕ್ಕೊಳಗಾಗುವ, ಮೃತಪಟ್ಟ ಅಥವಾ ಜೈಲು ಶಿಕ್ಷೆಗೆ ಒಳಗಾಗುವ ವಲಸಿಗರ ಕುಟುಂಬಗಳಿಗೆ ವಿಶೇಷ ನೆರವು ನಿಧಿಯ ವ್ಯವಸ್ಥೆಯೂ ಇಲ್ಲ ಎಂದು ಉಲ್ಲೇಖಿಸಲಾಗಿದೆ.
ವಲಸಿಗರು ಮತ್ತು ಅವರ ಕುಟುಂಬಗಳಿಗೆ ಸಮರ್ಪಕ ವೈದ್ಯಕೀಯ ಹಾಗೂ ವಿಮಾ ಸೌಲಭ್ಯಗಳು ದೊರೆಯುತ್ತಿಲ್ಲ. ಅನಿವಾಸಿ ಕನ್ನಡಿಗರ ಮಕ್ಕಳಿಗೆ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಶುಲ್ಕ ಸೌಲಭ್ಯಗಳಲ್ಲಿ ತೊಂದರೆಗಳಿವೆ. ಕಾರ್ಮಿಕ ಸಮಸ್ಯೆಗಳು ಹಾಗೂ ಕಾನೂನು ಸಂಬಂಧಿತ ಪ್ರಕರಣಗಳಲ್ಲಿ ಪರಿಣಾಮಕಾರಿ ಕಾನೂನು ನೆರವು ಮತ್ತು ದೂರು ಪರಿಹಾರ ವ್ಯವಸ್ಥೆಗಳ ಕೊರತೆ ಇದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬಯಸುವ ಅನಿವಾಸಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥೆಗಳ ಅಭಾವವಿದೆ. ಯುದ್ಧ, ಸಾಂಕ್ರಾಮಿಕ ರೋಗ ಅಥವಾ ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನೆರವು ಒದಗಿಸುವ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ವಾಪಸಾಗುವ ವಲಸಿಗರಿಗೆ ಕೌಶಲ್ಯಾಭಿವೃದ್ಧಿ, ಸಮಾಲೋಚನೆ ಮತ್ತು ಪುನರ್‌ಒಗ್ಗೂಡಿಕೆ ಕಾರ್ಯಕ್ರಮಗಳ ಅಗತ್ಯವಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅನಿವಾಸಿ ಕನ್ನಡಿಗರ ಕಲ್ಯಾಣ ಮಂಡಳಿಗಳನ್ನು ರಚಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಇದಲ್ಲದೆ, ಸೌದಿ ಅರೇಬಿಯದ ರಾಜಧಾನಿ ರಿಯಾದ್ ಸೇರಿದಂತೆ ಕೆಲವು ಗಲ್ಫ್ ರಾಷ್ಟ್ರಗಳಿಂದ ಬೆಂಗಳೂರು ಮತ್ತು ಮಂಗಳೂರಿಗೆ ನೇರ ವಿಮಾನ ಸೇವೆಗಳ ಕೊರತೆಯಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಅನಿವಾಸಿ ಕನ್ನಡಿಗರಿಗಾಗಿ 24x7 ಸಹಾಯವಾಣಿ ಹಾಗೂ ದೂರು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದೂ ಮನವಿ ಮಾಡಲಾಗಿದೆ.
ಅನಿವಾಸಿ ಕನ್ನಡಿಗರ ಹಿತಾಸಕ್ತಿಗಳನ್ನು ಸಮಗ್ರವಾಗಿ ರಕ್ಷಿಸಲು ಸ್ವತಂತ್ರ ಬಜೆಟ್, ಆಡಳಿತಾತ್ಮಕ ವ್ಯವಸ್ಥೆ ಮತ್ತು ಕಲ್ಯಾಣ ಯೋಜನೆಗಳನ್ನು ಹೊಂದಿರುವ ‘ಕರ್ನಾಟಕ ಅನಿವಾಸಿ ಕನ್ನಡಿಗರ ಸಚಿವಾಲಯ’ವನ್ನು ಸ್ಥಾಪಿಸಬೇಕು. ಈ ಸಚಿವಾಲಯದ ಮೂಲಕ ಮೇಲ್ಕಂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ವಿಶೇಷ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಒಕ್ಕೂಟ ಕೋರಿದೆ.
ಅನಿವಾಸಿ ಕನ್ನಡಿಗರ ಕಲ್ಯಾಣ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ಹಾಗೂ ಈ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರನ್ನು ಸಚಿವಾಲಯದ ಸಚಿವರಾಗಿ ನೇಮಿಸುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.
ದೇಶದಲ್ಲೇ ಅತಿ ಹೆಚ್ಚು ವಿದೇಶಿ ವಲಸಿಗರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಪ್ರತ್ಯೇಕ ಸಚಿವಾಲಯ ಸ್ಥಾಪನೆಯಿಂದ ಅನಿವಾಸಿ ಕನ್ನಡಿಗರಲ್ಲಿ ವಿಶ್ವಾಸ ಹೆಚ್ಚಲಿದ್ದು, ರಾಜ್ಯದಲ್ಲಿ ಹೂಡಿಕೆ, ಉದ್ಯೋಗಾವಕಾಶಗಳು ಮತ್ತು ಕರ್ನಾಟಕದ ಜಾಗತಿಕ ಪ್ರತಿಷ್ಠೆ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.