×
Ad

‘ಲಿವಿಂಗ್ ಗಲ್ಫ್’ ಬಿಡುಗಡೆ: ಉತ್ತರ ಎಮಿರೇಟ್ಸ್‌ನ ಅತಿದೊಡ್ಡ ಪ್ರಕಾಶಕನಾಗಿ ತುಂಬೆ ಮೀಡಿಯಾ

Update: 2026-06-19 07:20 IST

ಅಜ್ಮಾನ್ (ಯುಎಇ): ತುಂಬೆ ಗ್ರೂಪ್‌ನ ಮಾಧ್ಯಮ ಮತ್ತು ಪ್ರಕಾಶನ ವಿಭಾಗವಾದ ತುಂಬೆ ಮೀಡಿಯಾ, ಗಲ್ಫ್ ಪ್ರದೇಶದಲ್ಲಿ ನೆಲೆಸಿರುವ ಕಾರ್ಯನಿರ್ವಾಹಕರು, ಉದ್ಯಮಿಗಳು, ಹೂಡಿಕೆದಾರರು ಹಾಗೂ ವೃತ್ತಿಪರರಿಗಾಗಿ ರೂಪಿಸಲಾದ ಹೊಸ ದ್ವೈಮಾಸಿಕ ಮುದ್ರಣ ಮತ್ತು ಡಿಜಿಟಲ್ ನಿಯತಕಾಲಿಕೆ ‘ಲಿವಿಂಗ್ ಗಲ್ಫ್’ ಅನ್ನು ಆರಂಭಿಸಿದೆ.

ಈ ಹೊಸ ಪ್ರಕಟಣೆಯೊಂದಿಗೆ ತುಂಬೆ ಮೀಡಿಯಾದ ನಿಯತಕಾಲಿಕೆಗಳ ಸಂಖ್ಯೆ ಐದಕ್ಕೆ ಏರಿದ್ದು, ಉತ್ತರ ಎಮಿರೇಟ್ಸ್‌ನ ಮೊದಲ ಮತ್ತು ಅತಿದೊಡ್ಡ ಪ್ರಕಾಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಕಾಶನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತುಂಬೆ ಮೀಡಿಯಾ, ಯುಎಇಯಲ್ಲಿ ದೀರ್ಘಕಾಲದಿಂದ ಪ್ರಕಟವಾಗುತ್ತಿರುವ ಪ್ರಮುಖ ಆರೋಗ್ಯ ನಿಯತಕಾಲಿಕೆಗಳಲ್ಲಿ ಒಂದಾದ ‘ಹೆಲ್ತ್ ಮ್ಯಾಗಝಿನ್‌’ನಿಂದ ಗುರುತಿಸಿಕೊಂಡಿದೆ. ಆರೋಗ್ಯ, ಜೀವನಶೈಲಿ ಮತ್ತು ಸಮುದಾಯ ಕ್ಷೇತ್ರಗಳನ್ನು ಒಳಗೊಂಡ ಐದು ನಿಯತಕಾಲಿಕೆಗಳನ್ನು ಹೊಂದಿರುವ ಸಂಸ್ಥೆ, ಪ್ರಾದೇಶಿಕ ಪ್ರಕಾಶನ ಕ್ಷೇತ್ರದಲ್ಲಿ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.

ತುಂಬೆ ಮೀಡಿಯಾದ ಪ್ರಕಟಣೆಗಳ ಪಟ್ಟಿಯಲ್ಲಿ ‘ಹೆಲ್ತ್ ಮ್ಯಾಗಝಿನ್’, ‘ಲಿವಿಂಗ್ ಗಲ್ಫ್’, ‘ಗಲ್ಫ್ ಎಜುಕೇಶನ್’, ‘ಗಲ್ಫ್ ಪೆಟ್ಸ್ ಅಂಡ್ ವೆಟ್ಸ್’ ಹಾಗೂ ‘ಗಲ್ಫ್ ಕುಯಿಸಿನ್ ಅಂಡ್ ಹಾಸ್ಪಿಟಾಲಿಟಿ’ ಸೇರಿವೆ. ಈ ಎಲ್ಲ ಪ್ರಕಟಣೆಗಳು ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಓದುಗರನ್ನು ತಲುಪುತ್ತಿವೆ. ಅಲ್ಲದೆ, ಈ ಪ್ರಕಟಣೆಗಳ ಮೂಲಕ ವಿವಿಧ ಕ್ಷೇತ್ರಗಳ ಶ್ರೇಯಾಂಕಗಳು ಮತ್ತು ಪ್ರಶಸ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ನೀಡಲಾಗುತ್ತದೆ.

 

ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ವಿವಿಧ ಸಮುದಾಯಗಳ ಜೀವನಶೈಲಿ, ಸಂಸ್ಕೃತಿ, ಸಾಧನೆಗಳು ಹಾಗೂ ಅನುಭವಗಳಿಗೆ ‘ಲಿವಿಂಗ್ ಗಲ್ಫ್’ ಆದ್ಯತೆ ನೀಡಲಿದೆ. ಅಲ್ಲಿನ ವಲಸಿಗ ಸಮುದಾಯಗಳ ಯಶೋಗಾಥೆಗಳು, ಜೀವನಾನುಭವಗಳು ಮತ್ತು ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆಗಳನ್ನು ಈ ನಿಯತಕಾಲಿಕೆ ಒಳಗೊಂಡಿರಲಿದೆ ಎಂದು ಸಂಸ್ಥೆ ತಿಳಿಸಿದೆ.

‘ಲಿವಿಂಗ್ ಗಲ್ಫ್’ ನಿಯತಕಾಲಿಕೆಯು 8,000 ವಿತರಣಾ ಕೇಂದ್ರಗಳ ಮೂಲಕ ಓದುಗರನ್ನು ತಲುಪಲಿದ್ದು, www.livinggulf.com ವೆಬ್‌ಸೈಟ್ ಮತ್ತು @living_gulf ಇನ್‌ಸ್ಟಾಗ್ರಾಮ್ ಪುಟದ ಮೂಲಕವೂ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

 

27 ವರ್ಷಗಳ ಹಿಂದೆ ತುಂಬೆ ಮೀಡಿಯಾ ‘ಹೆಲ್ತ್’ ಎಂಬ ಒಂದೇ ಪ್ರಕಟಣೆಯಿಂದ ಐದು ಪ್ರಕಟಣೆಗಳ ಮಟ್ಟಕ್ಕೆ ಬೆಳೆದಿದ್ದು, ಉತ್ತರ ಎಮಿರೇಟ್ಸ್‌ನ ಅತಿದೊಡ್ಡ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ತಿಳಿಸಿದ್ದಾರೆ. ಪ್ರಕಾಶನ ಕ್ಷೇತ್ರದ ಜೊತೆಗೆ ಕಾರ್ಯಕ್ರಮ ನಿರ್ವಹಣೆ ಮತ್ತು ಬ್ರ್ಯಾಂಡ್ ಪ್ರಚಾರ ಚಟುವಟಿಕೆಗಳನ್ನೂ ಸಂಸ್ಥೆ ವಿಸ್ತರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

‘ಲಿವಿಂಗ್ ಗಲ್ಫ್’ನ ಮೊದಲ ಸಂಚಿಕೆಯ ಮುಖಪುಟದಲ್ಲಿ ಉದ್ಯಮಿ, ಕೈಗಾರಿಕಾ ನಾಯಕ ಹಾಗೂ ಲೋಕೋಪಕಾರಿ ಡಾ. ಫೈಝಲ್ ಇ. ಕೊಟ್ಟಿಕೊಲ್ಲನ್ ಅವರನ್ನು ಪರಿಚಯಿಸಲಾಗಿದೆ. ಗಲ್ಫ್‌ನಲ್ಲಿ ತಮ್ಮ ಬದುಕು ರೂಪಿಸಿಕೊಂಡಿರುವ ಲಕ್ಷಾಂತರ ವಲಸಿಗರ ಕನಸುಗಳು, ಮಹತ್ವಾಕಾಂಕ್ಷೆಗಳು ಮತ್ತು ಸಾಧನೆಗಳನ್ನು ಅವರ ಜೀವನ ಪಯಣ ಪ್ರತಿಬಿಂಬಿಸುತ್ತದೆ ಎಂದು ನಿಯತಕಾಲಿಕೆ ತಿಳಿಸಿದೆ.

ಅಜ್ಮಾನ್‌ನಲ್ಲಿ ನೆಲೆಗೊಂಡಿರುವ ತುಂಬೆ ಮೀಡಿಯಾ, ಉತ್ತರ ಎಮಿರೇಟ್ಸ್‌ನ ಮೊದಲ ಹಾಗೂ ಅತಿದೊಡ್ಡ ಪ್ರಕಾಶನ ಸಂಸ್ಥೆಯಾಗಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಆರೋಗ್ಯ, ಜೀವನಶೈಲಿ ಮತ್ತು ಸಮುದಾಯ ವಿಷಯಗಳಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಹೊರತರುತ್ತಿರುವ ಸಂಸ್ಥೆಯು, ‘ಲಿವಿಂಗ್ ಗಲ್ಫ್’ ನಿಯತಕಾಲಿಕೆಯ ಮೂಲಕ ವಲಸಿಗ ಸಮುದಾಯದ ಬದುಕು ಮತ್ತು ಸಾಧನೆಗಳನ್ನು ಕೇಂದ್ರೀಕರಿಸಿದ ಹೊಸ ಪ್ರಕಟಣಾ ಕ್ಷೇತ್ರಕ್ಕೂ ಕಾಲಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News