‘ಗೌರವಯುತವಾಗಿ ಕೊಡುವುದು ಧರ್ಮ’ ಹೇಳಿಕೆ ವಿವಾದ: ಸಚಿವ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು
ಹಾಸನ: ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಚಿವ ಕೆ.ಎಂ.ಶಿವಲಿಂಗೇಗೌಡ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಹಾಸನ ಜಿಲ್ಲಾ ಲೋಕಾಯುಕ್ತ ಕಚೇರಿಗೆ ವಕೀಲರು ದೂರು ಸಲ್ಲಿಸಿದ್ದಾರೆ.
ವಕೀಲ ಎಂ.ಡಿ. ಗೋಪಾಲಗೌಡ ನೇತೃತ್ವದ ವಕೀಲರ ನಿಯೋಗ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ, ಸಚಿವರು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವಂತೆ ಬಹಿರಂಗವಾಗಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ದೂರಿನಲ್ಲಿ ಸಚಿವರ ಹೇಳಿಕೆಯು ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸುವಂತಿದ್ದು, ಲಂಚ ಪಡೆಯುವುದು ಹಾಗೂ ನೀಡುವುದನ್ನು ಸಮರ್ಥಿಸುವ ರೀತಿಯಲ್ಲಿದೆ ಎಂದು ಆಕ್ಷೇಪಿಸಲಾಗಿದೆ.
ಹೇಳಿಕೆಯಲ್ಲೇನಿತ್ತು? :
ಸಕಲೇಶಪುರದಲ್ಲಿ ನಡೆದ ಜನಸೇವಾ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೇಗೌಡ ಮಾತನಾಡುವ ವೇಳೆ, “ಅಧಿಕಾರಿಗಳು ಬಲವಂತವಾಗಿ ಲಂಚ ವಸೂಲಿ ಮಾಡುವುದು ತಪ್ಪು. ಆದರೆ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಗೌರವದಿಂದ ಏನಾದರೂ ನೀಡುವುದು ಅವರ ಕರ್ತವ್ಯ” ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರಾಜ್ಯಪಾಲರಿಗೂ ದೂರು :
ಇದೇ ವಿಷಯಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 7, 8 ಮತ್ತು 12ರ ಅಡಿಯಲ್ಲಿ ಸಚಿವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವರ ಸ್ಪಷ್ಟನೆ :
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೆ.ಎಂ.ಶಿವಲಿಂಗೇಗೌಡ, “ನಾನು ಅಧಿಕಾರಿಗಳಿಗೆ ಲಂಚ ನೀಡುವಂತೆ ಹೇಳಿಲ್ಲ. ರೈತರು ಮತ್ತು ಅಧಿಕಾರಿಗಳ ನಡುವಿನ ಚರ್ಚೆಯ ವೇಳೆ ಅಧಿಕಾರಿಗಳನ್ನು ಗೌರವದಿಂದ ಕಾಣಬೇಕು ಎಂದಷ್ಟೇ ಹೇಳಿದ್ದೇನೆ. ಲಂಚ ನೀಡಲು ಪ್ರಚೋದನೆ ನೀಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.