ಹಾಸನ, ಅ.22: ಜಾನುವಾರು ಮೇಯಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಕಸಿದು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಹಾಸನ ತಾಲೂಕಿನ ದೊಡ್ಡಬಸವನಹಳ್ಳಿ ಗ್ರಾಮದ ನಿವಾಸಿ ಲತಾಮಣಿ ಎಂಬುವವರೇ ಸರ ಕಳೆದುಕೊಂಡವರು.

ಅಕ್ಟೋಬರ್ 20ರ ಸಂಜೆ ಸುಮಾರು 5.10ರ ವೇಳೆಗೆ ಈ ಘಟನೆ ನಡೆದಿದೆ. ದೊಡ್ಡಬಸವನಹಳ್ಳಿ ಗ್ರಾಮದ ಬಳಿ, ಕೆಐಎಡಿಬಿ ವೃತ್ತದ ಮುಂದಿರುವ ಪಡಿತರ ಗೋದಾಮಿನಿಂದ ಗ್ರಾಮಕ್ಕೆ ತೆರಳುವ ರಸ್ತೆಯ ಕ್ಲೀನ್ ಪ್ಯಾಕ್ ಕಾರ್ಖಾನೆಯ ಎದುರು ಲತಾಮಣಿ ದನ ಹಾಗೂ ಮೇಕೆಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಏಕಾಏಕಿ ಬೈಕಿನಲ್ಲಿ ಹಿಂಬದಿಯಿಂದ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಲತಾಮಣಿಯವರ ಕತ್ತಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಎರಡು ಎಳೆಯ ಚಿನ್ನದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಕಳುವಾದ ಸರದ ಮೌಲ್ಯ ಅಂದಾಜು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಸರಗಳ್ಳತನವಾಗುತ್ತಿದ್ದಂತೆ ಸಂತ್ರಸ್ತ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮದ ಇಬ್ಬರು ಬೈಕ್ನಲ್ಲಿ ಆರೋಪಿಗಳನ್ನು ಹಿಂಬಾಲಿಸಿದರೂ ಸೆರೆ ಹಿಡಿಯಲು ಸಾಧ್ಯವಾಗಿಲ್ಲ.

ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor