​ಹಾಸನ : ʼಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲಿ ನಿರ್ದಿಷ್ಟ ಸಮುದಾಯಗಳು ಮತ್ತು ಬಡವರ ಮತಗಳನ್ನು ಅಳಿಸಿಹಾಕಲು ‘ಆಪರೇಷನ್ ಕಮಲ ಫಾರ್ಮ್-7’ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆʼ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಗಂಭೀರ ಆರೋಪ ಮಾಡಿದ್ದಾರೆ.

​ನಗರದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಶುದ್ಧೀಕರಣದ ಸೋಗಿನಲ್ಲಿ ತಳಮಟ್ಟದಲ್ಲಿ ಅರ್ಹ ನಾಗರಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಇತ್ತೀಚೆಗೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 142ರಲ್ಲಿ ಇಬ್ಬರು ವ್ಯಕ್ತಿಗಳು 200 ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಮೊದಲೇ ಸಿದ್ಧಪಡಿಸಲಾಗಿದ್ದ (Pre-printed) ಫಾರ್ಮ್-7 ಅರ್ಜಿಗಳನ್ನು ಬಿಎಲ್‌ಒಗೆ ಸಲ್ಲಿಸಲು ಯತ್ನಿಸಿದಾಗ ಈ ಅಕ್ರಮ ಬಯಲಾಗಿದೆ ಎಂದರು.

ಈ ಸಂಬಂಧ ಸ್ಥಳೀಯ ಪೋಲಿಸರು ವಿಚಾರಣೆ ನಡೆಸಿದಾಗ, ಅಲ್ಲಿನ ಪರಾಜಿತ ಬಿಜೆಪಿ ಅಭ್ಯರ್ಥಿಯ ಕಚೇರಿಯಿಂದ ಫಾರ್ಮ್‌ಗಳು ಬಂದಿರುವುದು ಹಾಗೂ ಸಹಿ ಹಾಕಿದ ವ್ಯಕ್ತಿ ಸ್ಥಳೀಯ ಬಿಜೆಪಿ ಮೋರ್ಚಾ ಮುಖಂಡ ಎಂಬುದು ತಿಳಿದುಬಂದಿದೆ ಎಂದು ವಿವರಿಸಿದರು.

​ರಾಜ್ಯದಲ್ಲಿ ಆರಂಭದಲ್ಲಿ ಇಂತಹ 27 ಸಾವಿರ ಸಂಶಯಾಸ್ಪದ ಅರ್ಜಿಗಳು ಕಂಡುಬಂದಿದ್ದು, ಪ್ರಸ್ತುತ ಈ ಸಂಖ್ಯೆ ಬರೋಬ್ಬರಿ 67 ಸಾವಿರ ದಾಟಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಆಡಳಿತ ಪಕ್ಷದ ವಿರುದ್ಧ ವಿರುವವರ ಮತಗಳನ್ನು ಗುರಿಯಾಗಿಸಿಕೊಂಡು ಅಳಿಸಿಹಾಕುವ ಷಡ್ಯಂತ್ರ ನಡೆಯುತ್ತಿದೆ. ಕೂಲಿ ಕೆಲಸಕ್ಕಾಗಿ ವಲಸೆ ಹೋಗುವ ಅಲೆಮಾರಿಗಳು, ಬುಡಕಟ್ಟು ಜನರು, ಬಾಡಿಗೆ ಮನೆ ಬದಲಾಯಿಸಿದವರು ಮತ್ತು ಆಸ್ಪತ್ರೆ ಅಥವಾ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಸಿಗದವರನ್ನು ‘ಆಬ್ಸೆಂಟ್’ ಹಾಗೂ ‘ಶಿಫ್ಟೆಡ್’ ಎಂದು ನಮೂದಿಸಿ ಏಕಾಏಕಿ ಪಟ್ಟಿಯಿಂದ ತೆಗೆಯಲಾಗುತ್ತಿದೆ. ಜೀವಂತವಾಗಿರುವ ಹಿರಿಯ ನಾಗರಿಕರನ್ನೂ ಮೃತಪಟ್ಟಿದ್ದಾರೆಂದು ತೋರಿಸಿ ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಚುನಾವಣಾ ಆಯೋಗದ ಇಸಿಐ-ನೆಟ್ (ECI-NET) ತಂತ್ರಾಂಶವನ್ನು ಸಂಪೂರ್ಣವಾಗಿ ಕೇಂದ್ರೀಕೃತಗೊಳಿಸಲಾಗಿದ್ದು, ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳ (ERO) ಪರಿಶೀಲನಾ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ದಿಲ್ಲಿಯಲ್ಲಿ ಕುಳಿತು ಸಾಫ್ಟ್‌ವೇರ್ ಮೂಲಕ ಲಕ್ಷಾಂತರ ಮತದಾರರನ್ನು ಡಿಲೀಟ್ ಮಾಡುತ್ತಿರುವುದು ಸಂವಿಧಾನಬಾಹಿರ. ಚುನಾವಣಾ ಪ್ರಕ್ರಿಯೆಗಳ ಮೇಲೆ ನಿಗಾ ಇಡಬೇಕಾದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇಮಕಾತಿ ನಿಯಮಗಳನ್ನೇ ಕೇಂದ್ರ ಸರ್ಕಾರ ಬದಲಾಯಿಸಿದ್ದು, ಅವರ ವಿರುದ್ಧ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ವಾಗ್ದಂಡನೆ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಸುಪ್ರೀಂ ಕೋರ್ಟ್ ಈ ಅಕ್ರಮಗಳ ದಾಖಲೆಗಳನ್ನು ತನ್ನ ಸುಪರ್ದಿಗೆ ಪಡೆಯಬೇಕು ಎಂದು ಒತ್ತಾಯಿಸಿದರು.

​ಈ ಅಕ್ರಮಗಳ ವಿರುದ್ಧ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ 100ಕ್ಕೂ ಹೆಚ್ಚು ಬೂತ್‌ಗಳಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆ (ಸೋಶಿಯಲ್ ಆಡಿಟ್) ನಡೆಸಲಾಗಿದ್ದು, ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳ ಮುಂದೆ ದೃಢಪಟ್ಟ ಸಾಕ್ಷ್ಯ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ಅಕ್ಟೋಬರ್ 1ರಂದು ದಿಲ್ಲಿಯಲ್ಲಿ ವಿವಿಧ ರಾಜ್ಯಗಳ ಒಕ್ಕೂಟದೊಂದಿಗೆ ರಾಷ್ಟ್ರೀಯ ಪತ್ರಿಕಾಗೋಷ್ಠಿ ನಡೆಯಲಿದ್ದು, ಅಕ್ಟೋಬರ್ 15ರಂದು ಕರ್ನಾಟಕದ ನೊಂದ ಮತದಾರರನ್ನೊಳಗೊಂಡಂತೆ 10 ಸಾವಿರಕ್ಕೂ ಹೆಚ್ಚು ಜನರೊಂದಿಗೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

​ಚುನಾವಣೆ ವೇಳೆ ಮತದಾರರಿಗೆ ವಾಹನ, ಬಿರಿಯಾನಿ ಕೊಟ್ಟು ಓಲೈಸುವ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು, ಇಂದು ಅದೇ ಮತದಾರರ ಹಕ್ಕು ಕಸಿದುಕೊಳ್ಳುತ್ತಿರುವಾಗ ಮೌನವಾಗಿರುವುದು ಖಂಡನೀಯ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸರಕಾರದ ಹಂತದಲ್ಲೇ ಸೋಶಿಯಲ್ ಆಡಿಟ್ ನಡೆಸಿ, ಸಂತ್ರಸ್ತ ಜನರ ಪರವಾಗಿ ನಿಂತು ನ್ಯಾಯಾಲಯದ ಮೊರೆ ಹೋಗಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಅಶೋಕ, ಈರ್ಶಾದ್ ಅಹಮದ್ ದೇಸಾಯಿ, ಸರೋಜಾ, ಎಸ್ ಡಿ ಪಿ ಐ ಮುಖಂಡ ಸಯ್ಯದ್ ಫರೀದ್ , ಪೈರೂಜ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor