Arkalgud | ಸಾಲದ ಹಣ, ಚಿನ್ನಾಭರಣಕ್ಕಾಗಿ ವೃದ್ಧೆಯ ಹತ್ಯೆ: ಆರೋಪಿ ಬಂಧನ
ಅರಕಲಗೂಡು : ಸಾಲವಾಗಿ ಪಡೆದಿದ್ದ 50 ಸಾವಿರ ರೂ. ಹಣ ವಾಪಸ್ ನೀಡದ ವಿಚಾರ ಹಾಗೂ ವೃದ್ಧೆಯ ಮೈಮೇಲಿದ್ದ ಚಿನ್ನಾಭರಣಗಳ ಆಸೆಗಾಗಿ ಅದೇ ಗ್ರಾಮದ ವ್ಯಕ್ತಿಯೊಬ್ಬ ಮಹಿಳೆಯನ್ನು ಹತ್ಯೆಗೈದು, ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಾಲೆಗೆ ಎಸೆದಿರುವ ಘಟನೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಮಾಹಿತಿ ನೀಡಿದರು.
ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಾಹಿತಿ ನೀಡಿದ ಅವರು, ಅತ್ತಿಮರದ ಕೊಪ್ಪಲು ಗ್ರಾಮದ ರಮೇಶ್ (58) ಬಂಧಿತ ಆರೋಪಿಯಾಗಿದ್ದು, ಹೂವಿನ ವ್ಯಾಪಾರಿ ಲಕ್ಷ್ಮಮ್ಮ (67) ಕೊಲೆಯಾದ ಮಹಿಳೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಲಕ್ಷ್ಮಮ್ಮ ಅವರು ರಮೇಶ್‌ನಿಂದ 50 ಸಾವಿರ ರೂ. ಸಾಲ ಪಡೆದಿದ್ದು, ಹಣವನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರದಿಂದ ಅಸಮಾಧಾನಗೊಂಡಿದ್ದ ರಮೇಶ್, ಅವರ ಚಿನ್ನಾಭರಣಗಳ ಮೇಲೂ ಕಣ್ಣಿಟ್ಟು ಹತ್ಯೆಗೆ ಸಂಚು ರೂಪಿಸಿದ್ದ ಎಂದರು.
ಲಕ್ಷ್ಮಮ್ಮ ಅವರಿಗೆ ಬೈಕ್‌ನಲ್ಲಿ ಡ್ರಾಪ್ ನೀಡುವುದಾಗಿ ನಂಬಿಸಿ ಬೆಟ್ಟದಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅವರ ಕಪಾಳಕ್ಕೆ ಹೊಡೆದು, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಅವರು ಧರಿಸಿದ್ದ ಚಿನ್ನದ ತಾಳಿ, ಕಾಸಿನ ಸರ, ವಾಲೆ, ಮಾಟಿ ಹಾಗೂ ಮೂರು ಉಂಗುರ ಸೇರಿದಂತೆ ಸುಮಾರು 120 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂದು ಅವರು ಹೇಳಿದರು.
ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ತುಂಬಿ ನಾಲೆಗೆ ಎಸೆದಿದ್ದ ಎನ್ನಲಾಗಿದೆ. ದೋಚಿದ ಆಭರಣಗಳ ಪೈಕಿ ಒಂದು ಉಂಗುರವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಹಣ ಪಡೆದಿದ್ದ. ಉಳಿದ ಚಿನ್ನಾಭರಣಗಳನ್ನು ಶುಂಠಿ ಬೆಳೆಯಲು ಗುತ್ತಿಗೆ ಪಡೆದಿದ್ದ ಜಮೀನಿನ ಬಳಿಯ ಹಳೆಯ ಕೋಣೆಯಲ್ಲಿ ಪ್ಲಾಸ್ಟಿಕ್ ಪೈಪ್‌ಗಳ ನಡುವೆ ಬಚ್ಚಿ ಟ್ಟಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ವಿಶೇಷ ತಂಡ ರಚಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.