ಸಕಲೇಶಪುರದಲ್ಲಿ ಸಿನಿಮೀಯ ಕಾರ್ಯಾಚರಣೆ: ಸರಗಳ್ಳತನ ಪ್ರಕರಣದ ಆರೋಪಿಗಳ ಬಂಧನ
ಪೊಲೀಸರ ಚುರುಕಿನ ಕಾರ್ಯಾಚರಣೆಗೆ ಮೆಚ್ಚುಗೆ
ಸಕಲೇಶಪುರ: ಇತ್ತೀಚೆಗೆ ಪಟ್ಟಣದಲ್ಲಿ ಮಹಿಳೆಯರ ಸರ ದೋಚಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಸರಗಳ್ಳರನ್ನು ಬಂಧಿಸುವಲ್ಲಿ ಸಕಲೇಶಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಂತ್ರಜ್ಞಾನದ ನೆರವಿನಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರು ಸರಗಳ್ಳತನ ಪ್ರಕರಣದ ಆರೋಪಿಗನ್ನು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ. ಪೊಲೀಸರ ಚುರುಕಿನ ಕಾರ್ಯಾಚರಣೆಗೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ಪಟ್ಟಣದ ಹೊಳೆ ಮಲ್ಲೇಶ್ವರ ದೇವಸ್ಥಾನದ ಸಮೀಪ ಬ್ರಾಹ್ಮಣರ ಬೀದಿ ನಿವಾಸಿ ಹಾಗೂ ನಿವೃತ್ತ ಕೆಎಸ್‌ಆರ್‌ಟಿಸಿ ಚಾಲಕ ಶಾಂತಪ್ಪ ಅವರ ಪತ್ನಿ ರಾಣಿಯಮ್ಮ ಅವರು ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಏಕಾಏಕಿ ಅವರ ಕತ್ತಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಘಟನೆ ಪಟ್ಟಣದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಂಕಿತರ ಚಲನವಲನಗಳ ಮೇಲೆ ನಿಗಾ ಇರಿಸಿ ವಿಶೇಷ ಜಾಲ ರೂಪಿಸಿದ್ದರು. ಈ ನಡುವೆ ಆರೋಪಿಗಳು ಮಂಗಳವಾರ ಮುಂಜಾನೆ ಮತ್ತೆ ಸಕಲೇಶಪುರ ಪಟ್ಟಣ ಪ್ರವೇಶಿಸುತ್ತಿರುವ ಬಗ್ಗೆ ಆಧುನಿಕ ತಂತ್ರಜ್ಞಾನ ಹಾಗೂ ನೆಟ್‌ವರ್ಕ್ ನೆರವಿನಿಂದ ಪೊಲೀಸರಿಗೆ ಖಚಿತ ಸುಳಿವು ಲಭ್ಯವಾಗಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಟ್ಟಣದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ನಾಕಾಬಂದಿ ಹಾಕಿ ಆರೋಪಿಗಳಿಗಾಗಿ ಹೊಂಚು ಹಾಕಿದ್ದರು. ಬೆಳಿಗ್ಗೆ ಸುಮಾರು 6 ಗಂಟೆಗೆ ಹೇಮಾವತಿ ಸೇತುವೆ ಮೂಲಕ ಆರೋಪಿಗಳು ಪಟ್ಟಣ ಪ್ರವೇಶಿಸುತ್ತಿದ್ದಂತೆ ಸಿವಿಲ್ ಉಡುಪಿನಲ್ಲಿದ್ದ ಪೊಲೀಸರು ಖಾಸಗಿ ವಾಹನದಲ್ಲಿ ಅವರನ್ನು ಬೆನ್ನಟ್ಟಿದ್ದಾರೆ.
ಹಳೆ ಬಸ್ ನಿಲ್ದಾಣದ ಸಮೀಪ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳು, ತಮ್ಮ ಬೈಕ್ ಅನ್ನು ಪೊಲೀಸರ ವಾಹನಕ್ಕೆ ಢಿಕ್ಕಿ ಹೊಡೆಸಿದ್ದಾರೆ. ಢಿಕ್ಕಿಯ ರಭಸಕ್ಕೆ ಓರ್ವ ಆರೋಪಿ ಗಾಯಗೊಂಡು ರಸ್ತೆಗೆ ಬಿದ್ದಿದ್ದು, ಆತನನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.
ಪೊಲೀಸರ ಕಣ್ಣಿಗೆ ಮಣ್ಣೆರಚಲು ಪರಾರಿಯಾಗಿದ್ದ ಆರೋಪಿ ತಕ್ಷಣ ಬಟ್ಟೆ ಬದಲಿಸಿಕೊಂಡು ಮತ್ತೆ ಘಟನಾ ಸ್ಥಳಕ್ಕೆ ಮರಳಿದ್ದಾನೆ. ಬಳಿಕ ಏನೂ ಅರಿಯದವನಂತೆ ಸಾರ್ವಜನಿಕರ ನಡುವೆ ನಿಂತು ಘಟನೆಯನ್ನು ವೀಕ್ಷಿಸುವ ನಾಟಕವಾಡಿದ್ದಾನೆ. ಆದರೆ ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಆತನ ಸಂಶಯಾಸ್ಪದ ನಡವಳಿಕೆಯನ್ನು ಗಮನಿಸಿ, ಯಾವುದೇ ಅವಕಾಶ ನೀಡದೆ ಸಾರ್ವಜನಿಕರ ಎದುರೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಪಟ್ಟಣದಲ್ಲಿ ಈ ಹಿಂದೆ ನಡೆದ ಸರಗಳ್ಳತನ ಪ್ರಕರಣಗಳಲ್ಲೂ ಇವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸರಗಳ್ಳರನ್ನು ಬಂಧಿಸಿ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದ ಸಕಲೇಶಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಪಟ್ಟಣದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.