ನೈಸ್ ಯೋಜನೆಯಲ್ಲಿ ರೈತರಿಗೆ ಅನ್ಯಾಯ : ಎಚ್.ಡಿ.ಕುಮಾರಸ್ವಾಮಿ
ಹೊಳೆನರಸೀಪುರ : ನೈಸ್ ಯೋಜನೆಯ ಹೆಸರಿನಲ್ಲಿ ರೈತರ ಭೂಮಿ ಪಡೆದುಕೊಂಡು ವರ್ಷಗಳಾದರೂ ಸೂಕ್ತ ಪರಿಹಾರ ನೀಡಿಲ್ಲ. ಯೋಜನೆಗೆ ಸಂಬಂಧಿಸಿದ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳಿದ್ದು, ಸರಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ರಸ್ತೆ, ಬಿಡದಿ ಟೌನ್‌ಶಿಪ್ ಯೋಜನೆ, ರೈತರ ಭೂಮಿ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನೈಸ್ ಯೋಜನೆ ಎಚ್.ಡಿ.ದೇವೇಗೌಡರ ಕನಸು ಎಂಬ ಮಾತಿದೆ. ಅದು ದೇವೇಗೌಡರ ಕೂಸು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸರಕಾರಗಳು ಯೋಜನೆಯ ಅನುಷ್ಠಾನದಲ್ಲಿ ಕಂಪೆನಿಗೆ ಅನುಕೂಲವಾಗುವ ರೀತಿಯಲ್ಲಿ ನಡೆದುಕೊಂಡಿವೆ ಎಂದು ಆರೋಪಿಸಿದರು.
ಬೆಂಗಳೂರು-ಮೈಸೂರು ಮೂಲ ಸೌಕರ್ಯ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಬಿಎಂಐಸಿ ಪ್ರಾಧಿಕಾರ ರಚನೆಯಾದ ಸಂದರ್ಭದಲ್ಲಿ ಸರ್ಕಾರದ ಪ್ರಮುಖ ಅಧಿಕಾರಗಳನ್ನು ಖಾಸಗಿ ಸಂಸ್ಥೆಯ ಪರವಾಗಿ ಬಳಸಿಕೊಳ್ಳುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಯೋಜನೆಗಾಗಿ ರೈತರ ಭೂಮಿ ಪಡೆದುಕೊಂಡು ಸುಮಾರು ಎರಡು ದಶಕಗಳು ಕಳೆದರೂ ಅನೇಕ ರೈತರಿಗೆ ಪರಿಹಾರ ದೊರೆತಿಲ್ಲ. ರೈತರ ಭೂಮಿಯನ್ನು ಪಡೆದುಕೊಂಡು ಯಾವ ಪ್ರದೇಶದಲ್ಲಿ ಜಂಟಿ ಯೋಜನೆ ಮಾಡಲಾಗಿದೆ? ಯಾವ ಪ್ರದೇಶದಲ್ಲಿ ಮಾರಾಟ ಮಾಡಲಾಗಿದೆ ಎಂಬುದರ ಕುರಿತು ಸರಕಾರ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯ ಸರಕಾರದ ವಿರೋಧದ ನಿಲುವಿಗೆ ತಮ್ಮ ಬೆಂಬಲವಿದೆ. ಅರಣ್ಯ ಇಲಾಖೆ ಸಚಿವರು ಕೂಡ ವಿಧಾನಸಭೆಯಲ್ಲಿ ವರದಿಯ ಜಾರಿಗೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ವರದಿ ಅನುಷ್ಠಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಈಗಾಗಲೇ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಇತರರು ಉಪಸ್ಥಿತರಿದ್ದರು.