ಸಕಲೇಶಪುರ: ಯಡಕುಮರಿ–ಶಿರವಾಗಿಲು ರೈಲು ಮಾರ್ಗದಲ್ಲಿ ಭೂಕುಸಿತ; ಮಣ್ಣು ತೆರವು ಕಾರ್ಯ ಚುರುಕು, ಸಂಜೆ ವೇಳೆಗೆ ಸಂಚಾರ ಸಾಧ್ಯತೆ
ಸಕಲೇಶಪುರ, ಆ. 3: ಸತತ ಮಳೆಯಿಂದಾಗಿ ತಾಲೂಕಿನ ಯಡಕುಮರಿ–ಶಿರವಾಗಿಲು ರೈಲು ಮಾರ್ಗದ ಬಳಿ ಉಂಟಾದ ಭೂಕುಸಿತದಿಂದ ರೈಲು ಹಳಿಯ ಮೇಲೆ ಬಿದ್ದಿರುವ ಅಪಾರ ಪ್ರಮಾಣದ ಮಣ್ಣು ಮತ್ತು ಬಂಡೆಗಳ ತೆರವು ಕಾರ್ಯವನ್ನು ಭಾರತೀಯ ರೈಲ್ವೆಯ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಚುರುಕುಗೊಳಿಸಿದ್ದು, ಹಳಿ ಮರುಸ್ಥಾಪನೆ ಕಾಮಗಾರಿ ನಡೆಸುತ್ತಿದ್ದಾರೆ.
ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರು–ಮಂಗಳೂರು ನಡುವಿನ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಹವಾಮಾನ ಅನುಕೂಲಕರವಾಗಿದ್ದರೆ ಇಂದು ಸಂಜೆ ವೇಳೆಗೆ ರೈಲು ಹಳಿ ಸಂಚಾರಕ್ಕೆ ಯೋಗ್ಯವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಸಂಚಾರ ಸ್ಥಗಿತದಿಂದ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಹಲವು ಎಕ್ಸ್‌ಪ್ರೆಸ್ ಹಾಗೂ ಪ್ರಯಾಣಿಕ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ತಮ್ಮ ರೈಲಿನ ನವೀಕೃತ ಮಾಹಿತಿಯನ್ನು ಪರಿಶೀಲಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ರೈಲ್ವೆ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಹಳಿ ಸಂಪೂರ್ಣ ಸುರಕ್ಷಿತ ಎಂದು ಖಚಿತವಾದ ಬಳಿಕವೇ ರೈಲು ಸಂಚಾರ ಪುನರಾರಂಭವಾಗಲಿದೆ.